ಗ್ಯಾರೆಂಟಿ ಯೋಜನೆಗೆ ಹಣ ನಿಗದಿಪಡಿಸದಿದ್ದರೆ ಆ ಹಣವೆಲ್ಲ ಏನಾಗುತ್ತಿತ್ತು?

1 year ago

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಸುಮಾರು 54,000 ಕೋಟಿ ರೂಪಾಯಿಗಳನ್ನು ಮುಂಗಡಪತ್ರದಲ್ಲಿ ಮೀಸಲಿಟ್ಟಿರುವ ಕಾರಣದಿಂದ ಅನೇಕ ರೀತಿಯ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುತ್ತದೆ ಎಂದು ಬಿಜೆಪಿ ನಾಯಕರು ಮತ್ತು ಕೆಲವು ಹೊಟ್ಟೆ ತುಂಬಿದ ಮಂದಿ ಪದೇ ಪದೇ ಟೀಕಿಸುತ್ತಾರೆ ಮಾತನಾಡುತ್ತಾರೆ.

ಈ ಹಿಂದೆ ಎಲ್ಲ ಮುಂಗಡಪತ್ರದಲ್ಲಿ ಇಂತಹ ಯಾವ ಯೋಜನೆಗಳು ಇರಲಿಲ್ಲ. ಆಗ ರಾಜ್ಯವೆಲ್ಲ ಅಭಿವೃದ್ಧಿಯ ಹೊಳೆಯಲ್ಲಿ ಹರಿಯದಿದೆಯೇ? ಯಾವುದೇ ರೀತಿಯ ಕಾಮಗಾರಿಗಳು ನಿಲ್ಲದೆ ಸಾಗಿದೆಯೇ? ಎಲ್ಲ ವಿಭಾಗದಲ್ಲಿ ಅಭಿವೃದ್ಧಿಯಾಗಿ ಜನಸಾಮಾನ್ಯರು ಆನಂದದ ಕಡಲಿನಲ್ಲಿ ತೇಲುತ್ತಿದ್ದರೆ?

ಒಂದು ವೇಳೆ ಗ್ಯಾರೆಂಟಿ ಹಣ ಮೀಸಲಿಡದೆ ಇದ್ದರೆ ಮುಂಗಡಪತ್ರದಲ್ಲಿನ ಈ 54,000 ಕೋಟಿ ರೂಪಾಯಿಗಳು, ರಸ್ತೆಯ ಹೆಸರಿನಲ್ಲಿ, ಕಟ್ಟಡಗಳ ಹೆಸರಿನಲ್ಲಿ, ಸೇತುವೆಗಳ ಹೆಸರಿನಲ್ಲಿ, ಬೇರೆ ಯಾವುದೋ ಯೋಜನೆಗಳ ಹೆಸರಿನಲ್ಲಿ ಬಳಕೆಯಾಗುತ್ತಿತ್ತು. ಮತ್ತೆ ಅದೇ ಒಂದಷ್ಟು ಮಂದಿಯ ಕಿಸೆಗಳು ತುಂಬುತ್ತಿದ್ದವು. ಇದಕ್ಕಿಂತ ಮತ್ತೆ ಯಾವ ಮಹಾನ್ ಕಾರ್ಯವು ಆಗುತ್ತಿರಲಿಲ್ಲ.

ಕಡೆಯ ಪಕ್ಷ ಗ್ಯಾರಂಟಿ ಯೋಜನೆಯ ಈ ನೆಪದಲ್ಲಾದರೂ ಬಡವರು ಮತ್ತು ಕಡುಬಡವರು, ನಿಜಕ್ಕೂ ಸರ್ಕಾರದ ಯೋಜನೆಗಳ ಅವಶ್ಯಕತೆ ಇರುವ ಕುಟುಂಬದವರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಹೇಗೋ ಒಂದಷ್ಟು ಮಂದಿಯ ಬದುಕು ನೆಮ್ಮದಿಯಿಂದ ಸಾಗಿದೆ. ಯಾರೋ ಬೆರಳಿಕೆಯಷ್ಟು ಮಂದಿ ಇಂತಹ ಯೋಜನೆಗಳನ್ನು ದುರುಪಯೋಗ ಪಡಿಸಿಕೊಂಡ ಮಾತ್ರಕ್ಕೆ ಇಡೀ ಯೋಜನೆಯೇ ತಪ್ಪು ಎಂದು ಹೇಳುವುದು ಸರಿಯಲ್ಲ.

ಗ್ಯಾರೆಂಟಿ ಯೋಜನೆಗಳ ಗೃಹಲಕ್ಷ್ಮಿ ಯೋಜನೆಯ ಹಣವಂತ ಸರ್ಕಾರದ ಖಜಾನೆಗೆ ಬೇರೆ ಬೇರೆ ಸ್ವರೂಪದಲ್ಲಿ ಮರಳಿ ಬರುತ್ತಿದೆ. ಇಲ್ಲಿಯೂ ಒಂದಷ್ಟು ಜಿಎಸ್ಟಿಯು ಖಜನೆಯನ್ನ ತುಂಬಿಸುತ್ತಿದೆ. ಅದೆಷ್ಟೋ ಮಂದಿ ಈ ಹಣದಲ್ಲಿ ಸಾರ್ಥಕವಾದ ಕಾರ್ಯಗಳನ್ನ ತಮಗಾಗಿ ತಮ್ಮ ಕುಟುಂಬದವರಿಗಾಗಿ ತಮ್ಮ ಊರಿನ ಜನರಿಗಾಗಿ ಮಾಡುತ್ತಿರುವುದು ಅಲ್ಲಲ್ಲಿ ಸುದ್ದಿ ಆಗುತ್ತಲೇ ಇದೆ.

ಬಡವರಿಗೆ ಏನಾದರೂ ಕೊಟ್ಟರೆ ಖಜಾನೆ ಖಾಲಿಯಾಗುತ್ತದೆ ಉಳ್ಳವರಿಗೆ ಬದುಕಿಗಾಗಿ ಯೋಜನೆಗಳನ್ನ ರೂಪಿಸಿದರೆ ಖಜಾನೆ ಸಾರ್ಥಕವಾಗುತ್ತದೆ ಎನ್ನುವ ವಿಕೃತ ಮನಸ್ಸಿನ ಜನರ ಟೀಕೆಗಳು ಅವರ ಮನಸ್ಸಿನ ಸ್ಥಿತಿಗೆ ಅನುಗುಣವಾಗಿ ಪ್ರಕಟವಾಗುತ್ತಲೇ ಇರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply