ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಸರ್ಕಾರವೇ ಆಚರಿಸಲಿ

10 months ago

ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಲವಾರು ಮಹನೀಯರ ಜಯಂತಿಯನ್ನು ಆಚರಿಸುತ್ತದೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಸರಕಾರ ಆಚರಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.

ರಾಜ್ಯದ ಅನೇಕ ರಾಜರ ಮತ್ತು ಪ್ರಮುಖರು ಜಯಂತಿಗಳನ್ನು ಆಚರಿಸುವ ಸರ್ಕಾರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಆಚರಿಸುವುದು ಏಕೆ ಮರೆತುಹೋಗಿದೆ?

ಇಂದು ಕರ್ನಾಟಕ ರಾಜ್ಯ ಜಗತ್ತಿನ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ಸುಭಿಕ್ಷ ವಾಗಿದ್ದು, ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದರೆ ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಬಹಳ ದೊಡ್ಡದು.

ಜನರಿಗೆ ನೀರು ಕೊಟ್ಟವರು, ವಿದ್ಯುತ್ ಕೊಟ್ಟವರು, ಆಸ್ಪತ್ರೆಗಳನ್ನ ಕಟ್ಟಿಸಿದವರು, ಶಿಕ್ಷಣ ಕೊಟ್ಟವರು, ಮೀಸಲಾತಿ ಕೊಟ್ಟವರು, ಬ್ಯಾಂಕುಗಳ ಸ್ಥಾಪಿಸಿದವರು, ಕೈಗಾರಿಕೆಗಳ ಮೂಲಕ ಉದ್ಯೋಗವನ್ನು ಕೊಟ್ಟವರು, ವಿಶ್ವವಿದ್ಯಾನಿಲಯವನ್ನ ಸ್ಥಾಪಿಸಿದವರು, ಸಾಹಿತ್ಯ ಸಂಸ್ಕೃತಿ ಕಲೆಗೆ ಹಲವಾರು ಸಂಸ್ಥೆಗಳನ್ನ  ಹುಟ್ಟು ಹಾಕಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಇವರ ಕೊಡುಗೆಯ ಪಟ್ಟಿ ಹಲವಾರು ಪುಟಗಳಲ್ಲಿ ದಾಖಲಿಸಿದರು ಮುಗಿಯುವುದಿಲ್ಲ.

ಇಂತಹ ಒಬ್ಬ ಶ್ರೇಷ್ಠ ವ್ಯಕ್ತಿಯ ಜಯಂತಿಯನ್ನು ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವೇ ಆಚರಿಸಲಿ. ಜೊತೆಗೆ ವಿಧಾನಸೌಧದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭವ್ಯವಾದ ಪ್ರತಿಮೆ ಅನಾವರಣವಾಗಲೇಬೇಕು. ಏಕೆಂದರೆ ಅವರು ಕೊಟ್ಟಷ್ಟು ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಕೊಡುಗೆಯನ್ನು ಇಂದು ವಿಧಾನಸೌಧದ ಮುಂಭಾಗದಲ್ಲಿರುವ ಹಲವಾರು ಪ್ರತಿಮೆಗಳ ಸರದಾರಿಗಿಂತ ಇವರ ಪಾಲು ಬಹಳ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಇವರಿಗೆ ಗೌರವವನ್ನು ಕೊಡಬೇಕಾದದ್ದು ಅಂದರೆ ಅವರ ಋಣವನ್ನ ತೀರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನ ನಡೆಸಬೇಕಾದದ್ದು ಸರ್ಕಾರದ ಕೆಲಸವಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಜೂನ್ ನಾಲ್ಕರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಎಲ್ಲಾ ಕಡೆಯಲ್ಲಿ ಇವರ ಜಯಂತಿಯನ್ನು ಸರ್ಕಾರವೇ ಆಚರಿಸಲಿ. ಮುಂದಿನ ವರ್ಷದ ಒಳಗಾಗಿ ವಿಧಾನಸೌಧದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆ ನಿರ್ಮಾಣವಾಗಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply