ಕಸಾಪ ಪರಂಪರೆ ಮರು ಸ್ಥಾಪಿಸುವ ಪ್ರಯತ್ನ

2 months ago

ನಮಸ್ಕಾರ, ಬೆಳಗ್ಗೆ  ಮಾಧ್ಯಮಗಳಲ್ಲಿ “ಮಹೇಶ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು” ಎಂಬ ವರದಿ ಓದಿದೆ. ಸಂತೋಷವಾಯ್ತು. ಮಹೇಶ ಜೋಶಿಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಒಂದೂವರೆ ತಿಂಗಳ ಹಿಂದೆಯೆ ರದ್ದುಪಡಿಸಿದ ಮಾಹಿತಿ ಇತ್ತು. ಆದರೆ, ಅದು ಅಧಿಕೃತವಾಗಿ ಪ್ರಕಟವಾಗಿರಲಿಲ್ಲ. ಕೋರ್ಟು ಬೇಸಗೆ ರಜೆ ಹಾಗೂ ಇದನ್ನು ಜಾರಿಮಾಡಲು ಅಡ್ವೊಕೇಟ್ ಜನರಲ್‌ ಒಪ್ಪಿಗೆ ಬೇಕಿತ್ತು. ತಾಂತ್ರಿಕ ತೊಡಕು ಪರಿಹರಿಸಿಕೊಂಡ ನಂತರ ಈ ಕ್ರಮ  ನ್ಯಾಯಾಲಯದ ತೀರ್ಪಿನಂತೆ ಜಾರಿಗೆ ಬರುತ್ತಿದೆ.

“ಮಾಡಿದ್ದುಣ್ಣೋ ಮಾರಾಯ” ಎಂಬ ಗಾದೆ ಮಾತು ಜೋಸಿಗೆ ಮುಳುವಾಗಿದೆ. ಈ ಮನುಷ್ಯ ಕಸಾಪ ಘನತೆ, ಗೌರವ ಹಾಳು ಮಾಡುತ್ತಾ ಬಂದವನು. ಆದರೆ, ಅಲ್ಲಿ ತಪ್ಪುಗಳ ಬಗ್ಗೆ ದನಿ ಎತ್ತಿದ ಹೋರಾಟಗಾರ‌ ಜಾಣಗೆರೆ ವೆಂಟರಾಮಯ್ಯ, ಡಾ. ವಸುಂಧರಾ ಭೂಪತಿ, ನಾಗರಾಜಸ್ವಾಮಿ, ಮಂಡ್ಯದ ಹರೀಶ ಮೊದಲಾದವರ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದ ಸಣ್ಣತನ ಪ್ರದರ್ಶಿಸಿದ್ದ. ನನಗೂ ವಕೀಲರಿಂದ ಹಲವು ನೋಟೀಸು ಕೊಡಿಸಿದ್ದ. ಅವಕ್ಕೆ ನಾನು ಕ್ಯಾರೆ ಅನ್ನಲಿಲ್ಲ.

ಈಗ ಸಹಕಾರ ಸಂಘಗಳ ನೋಂದಣಾಧಿಕಾರಿಳ ಆದೇಶದ ಮೇರೆಗೆ ಹೈಕೋರ್ಟು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್  ಅವರು ಜೋಶಿ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದ್ದು ನಮ್ಮ ಹೋರಾಟ ಸಮಿತಿಯ ಎಲ್ಲ ಸದಸ್ಯರಿಗೆ ಸಂತೋಷವಾಗಿದೆ. ನಾವು ಇದನ್ನು ಸ್ವಾಗತಿಸುತ್ತೇವೆ. ನಮ್ಮ ಪರವಾಗಿ ನಿಂತ ರಾಜ್ಯ ಮುಖ್ಯ ಅಡ್ವೋಕೇಟ್ ಜನರಲ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪರ ಅವರಿಗೂ ಧನ್ಯವಾದ.

ಮಹತ್ವದ ಸಾಧನೆ: ನಮ್ಮ ಕನ್ನಡ ನಾಡು – ನುಡಿ ಜಾಗೃತ ಸಮಿತಿ ಸದಸ್ಯರು ಕಸಾಪ ಆಡಳಿತಾಧಿಕಾರಿ ಶ್ರೀ ದಯಾನಂದ ಅವರನ್ನು ಭೇಟಿಮಾಡಿ ಒಂದು ಮನವಿ ಅರ್ಪಿಸಿದ್ದೆವು. ಜೋಶಿ ಅಧಿಕಾರಕ್ಕೆ ಬಂದ ದಿನವೆ ಕಸಾಪ ಆಡಳಿತ ಕಚೇರಿ ಮುಂದೆ ಇದ್ದ ಪಂಪ ಮಹಾಕವಿಯ ಮನುಷ್ಯಜಾತಿ ತಾನೊಂದೆ ವಲಂ ಎಂಬ ಉದಾತ್ತ ಸಂದೇವನ್ನೆ ಕಿತ್ತಾಕಿಸಿದ್ದ! ಈ ನೀಚತನ ತೋರಿದ್ದ ಜೋಶಿ ಬಗ್ಗೆ ನೊಂದು ಹೇಳಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು “ಪಂಪ ಮಹಾಕವಿಯ ಈ ಸಂದೇಶ, ಪರಿಷತ್ತಿನ ಧ್ಯೇಯೋದ್ದೇಶ ಹೊಂದಿದೆ. ಇದನ್ನು ತೆಗೆಸಿದ ಜೋಶಿ ನಮಗೆ ನೋವುಂಟು ಮಾಡಿದ್ದಾರೆ. ನೀವು ಇದನ್ನು ದ್ವಾರ ಬಾಗಲಲ್ಲಿ ತುರ್ತು ಮರು ಸ್ಥಾಪಿಸಬೇಕು” ಎಂದು  ಹೇಳಿದ್ದರು.

ಆಡಳಿತಾಧಿಕಾರಿ ಕೂಡಲೆ ಸ್ಪಂದಿಸಿ, ಕೆಲವೇ ದಿನಗಳಲ್ಲಿ ಅದನ್ನು ಮರುಸ್ಥಾಪನೆ ಮಾಡಿದ್ದಾರೆ. ಜೊತೆಗೆ ನನ್ನ ಮತ್ತೊಂದು ಮನವಿಯನ್ನು ಅವರು ಕಾರ್ಯಗತ ಮಾಡಿದ್ದಾರೆ. ಈಗ ಆಡಳಿತಾಧಿಕಾರಿಗಳು ಕೂರುವ (ಹಿಂದಿನ ಅಧ್ಯಕ್ಷರ ಕೊಠಡಿ) ಹಾಳು ಕೊಂಪೆಯಾಗಿತ್ತು. ಅಲ್ಲಿನ ಸುಂದರ “ಕಬೋಡು” (ಬೀರು)ನಲ್ಲಿ ಗಣೇಶ ಮೂರ್ತಿ, ಬಲಭಾಗದ ಗೋಡೆಗೆ ಆಳೆತ್ತರದ ಗಣೇಶಮೂರ್ತಿ… ಹೀಗೆ ಎಲ್ಲೆಲ್ಲು ಗಣೇಶನನ್ನೆ ತುಂಬಿಕೊಂಡಿದ್ದರು. ಕಬೋಡಿನಲ್ಲಿ ಇರಬೇಕಾದ ಕನ್ನಡ ಸಾಹಿತ್ಯ ಪರಿಷತ್ತಿನ ಒಂದೇ ಒಂದು ಪ್ರಕಟಣೆ… ನಿಘಂಟು, ಮಹತ್ವದ ಪುಸ್ತಕಗಳು ಇರಲಿಲ್ಲ! ನೋವಿನ ಸಂಗತಿ ಎಂದರೆ ಕಸಾಪ ಸ್ಥಾಪಿಸಿದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಇವೆಲ್ಲ ಈ ಕೋಣೆಗೆ ಅಗತ್ಯ ಹಾಗೂ ಭೂಷಣ – ಎಂದು ಹೇಳಿದ ನನ್ನ ಮಾತಿಗೆ ಎಲ್ಲರ ಸಹಮತ ಇತ್ತು. ಈ ಮನವಿಯನ್ನು ಗಂಭೀರವಾಗಿ ತಗೊಂಡ ಆಡಳಿತಾಧಿಕಾರಿ ಶ್ರೀ ದಯಾನಂದ್ ಕೆಲವೆ ದಿನದಲ್ಲಿ ಬೀರುವಿನಲ್ಲಿ ಕಸಾಪ ಪ್ರಕಟಣೆಗಳನ್ನು ಇರಿಸಿ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋ ಪ್ರತಿಷ್ಠಾಪನೆ ಮಾಡಿದರು.

ನಮ್ಮ ಹಳೆಯ ದಿನಗಳ ವೈಭವ, ಅದರ ಪರಂಪರೆಯನ್ನು ಮತ್ತೆ ಹೋರಾಟದಿಂದ ಪಡೆದಿದ್ದೇವೆ (ಇನ್ನೂ ಆಗುವ ಕೆಲಸ ಇವೆ. ಅವನ್ನು ಸಾಧಿಸೋಣ). ಭ್ರಷ್ಟಾಚಾರದ ಆಪಾದನೆ ಹೊತ್ತ ಜೋಶಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಂದು ಆಶಿಸುತ್ತೇವೆ.

ನಮ್ಮ ಸಂಘಟನೆಯ ಮತ್ತೊಂದು ಮಾನವೀಯ ಮುಖದ ಘಟನೆ ಹೇಳಲೇಬೇಕು. ಜೋಶಿ, ಮನುಬಳಿಗಾರ ಹಾಗೂ ಅವರ ಹಿಂದಿದ್ದ ಅಧ್ಯಕ್ಷರು ನೇಮಕ ಮಾಡಿಕೊಂಡಿದ್ದ ಅನೇಕರ ನೌಕರಿ/ಹುದ್ದೆ (೨೨ ನೌಕರರು) ಕಾನೂನುಬಾಹಿರವಾಗಿದೆ ಎಂದು ಸರ್ಕಾರ ಅವರನ್ನು ತೆಗೆಯಲು ಆದೇಶ ಹೊರಡಿಸಿತ್ತು. ನಮ್ಮ ವೇದಿಕೆಯ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ, ನಾನು, ಡಾ. ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ, ಪ್ರಕಾಶಮೂರ್ತಿ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು, ಮನವಿ ಅರ್ಪಿಸಿ ಕಸಾಪ ನೌಕರರ ಹುದ್ದೆ ಉಳಿಸಿ, 6 ತಿಂಗಳಿನಿಂದ ಬಾರದಿರುವ ಸಂಬಳವನ್ನು ನೀಡುವಂತೆ ಆದೇಶ ಮಾಡಿಸಿದ್ದೆವು.
ಸತ್ಯದ ಹಾಗೂ ಮಾನವೀಯ ಪರವಾದ ಹೋರಾಟಕ್ಕೆ ಸದಾ ಜಯ.
ಕನ್ನಡ ಸಾಹಿತ್ಯ ಪರಿಷತ್ತು ಉಳಿಸೋಣ ಬನ್ನಿ. ನಮ್ಮ ಹೋರಾಟಕ್ಕೆ ಬೆಂಬಲಕೊಡಿ.

– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ ಹಾಗೂ ಪತ್ರಕರ್ತ

Leave a Reply