ಗಾಂಧಿ ಕುರಿತು ಪ್ರಧಾನಿಗಳ ಹೇಳಿಕೆಗೆ ಕಾರಣ ಅಧ್ಯಯನದ ಕೊರತೆ

2 years ago

ಗಾಂಧಿ ಚಿತ್ರ ಬಿಡುಗಡೆಯಾದ ಮೇಲೆ ಗಾಂಧೀಜಿಯವರು ಜಗತ್ತಿಗೆ ಪರಿಚಯವಾದರೂ ಎಂಬ ಹೇಳಿಕೆ ಅಧ್ಯಯನದ ಕೊರತೆಯಿಂದ ಕೂಡಿದೆ. ಪ್ರಧಾನ ಮಂತ್ರಿಗಳು ತಮ್ಮ ಒಂದು ಸಂದರ್ಶನದಲ್ಲಿ ಮಹಾತ್ಮ ಗಾಂಧೀಜಿರವರು ಜಗತ್ತಿಗೆ ಚಿರಪರಿಚಿತರಾದದ್ದು ಅವರ ಚಿತ್ರ ಬಿಡುಗಡೆಯಾದ ಮೇಲೆ ಎಂಬ ಹೇಳಿಕೆ ನಿಜಕ್ಕೂ ಪ್ರಧಾನಮಂತ್ರಿಯವರಿಗೆ ಅಧ್ಯಯನದ ಕೊರತೆ ಎಷ್ಟರಮಟ್ಟಿಗೆ ಇದೆ ಎನ್ನುವುದು ತೋರಿಸುತ್ತದೆ. ಒಬ್ಬ ಪ್ರಧಾನಮಂತ್ರಿಯಿಂದ ಇಂತಹ ಹೇಳಿಕೆ ಬರುತ್ತದೆ ಎಂದರೆ ಅವರು ಯಾವ ಪ್ರಮಾಣದಲ್ಲಿ ದೇಶದ ಇತಿಹಾಸವನ್ನು ತಿಳಿದಿದ್ದಾರೆ ಎನ್ನುವ ಅನುಮಾನವೂ ಬರುತ್ತದೆ.

ಮಹಾತ್ಮ ಗಾಂಧೀಜಿರವರು ಭಾರತ ದೇಶದಲ್ಲಿ 1915ರಲ್ಲಿ ಸ್ವಾತಂತ್ರ ಚಳುವಳಿಯನ್ನ ಆರಂಭಿಸುವ ಮುನ್ನ ಹಲವಾರು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಭಾರತೀಯರು ಮತ್ತು ಕಪ್ಪು ವರ್ಣೀಯರ ಪರವಾಗಿ ಅಲ್ಲಿನ ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಿ ಅನೇಕ ರೀತಿಯಲ್ಲಿ ಅನುಕೂಲವನ್ನು ಮಾಡಿ ಕೊಟ್ಟು ಬಹಳಷ್ಟು ಬದಲಾವಣೆಗಳನ್ನು ಅಲ್ಲಿ ಜನರಿಗೆ ತಂದುಕೊಟ್ಟ ಕಾರಣದಿಂದ ದಕ್ಷಿಣ ಆಫ್ರಿಕಾದ ಜನ ಗಾಂಧಿರವರ ಬಗ್ಗೆ ಅಪಾರವಾದಂತಹ ಗೌರವ ಮತ್ತು ಭಕ್ತಿಯನ್ನು ಹೊಂದಿದ್ದರು.

ಭಾರತಕ್ಕೆ ಬರುವ ಮುನ್ನವೇ ಗಾಂಧಿ ದಕ್ಷಿಣ ಆಫ್ರಿಕಾದ ಹೋರಾಟದ ಮೂಲಕ ಜಗತ್ತಿಗೆ ಪರಿಚಯವಾಗಿದ್ದರು. ಇವರ ದಕ್ಷಿಣ ಆಫ್ರಿಕಾದ ಹೋರಾಟದ ಪರಿಣಾಮವೇ ನೆಲ್ಸನ್ ಮಂಡೇಲಾರವರು ಇವರ ಸತ್ಯಾಗ್ರಹದ ಸ್ಪೂರ್ತಿಯಿಂದ ಹೋರಾಟವನ್ನು ಮಾಡಿ ಅಲ್ಲಿನ ಜನರಿಗೆ ನ್ಯಾಯವನ್ನ ಕೊಡಿಸಿಕೊಟ್ಟರು.

ಗಾಂಧೀಜಿ ಅವರು 1948ರಲ್ಲಿ ಒಬ್ಬ ರಾಕ್ಷಸನಿಂದ ಹತ್ಯೆಯಾದ ದಿನ ವಿಶ್ವಸಂಸ್ಥೆಯ ಕಚೇರಿಯ ಮೇಲೆ ಹಾರಾಡುತ್ತಿದ್ದ ನೂರನಲವತ್ತೆಂಟು ರಾಷ್ಟ್ರಗಳ ರಾಷ್ಟ್ರಧ್ವಜವನ್ನ ಇಳಿಸಿ ಗಾಂಧೀಜಿರವರಿಗೆ ಗೌರವವನ್ನು ಸಲ್ಲಿಸಿರುವ ಇತಿಹಾಸವಿದೆ. ಈ ರೀತಿಯ ಗೌರವವನ್ನು ವಿಶ್ವಸಂಸ್ಥೆ ಜಗತ್ತಿನ ಯಾವ ರಾಷ್ಟ್ರ ನಾಯಕರಿಗೂ ಸಲ್ಲಿಸಿರುವುದಿಲ್ಲ. 1948ರಲ್ಲಿಯೇ ವಿಶ್ವಸಂಸ್ಥೆ, ಈ ಪ್ರಮಾಣದಲ್ಲಿ ಇವರ ಸಾವಿಗೆ ಗೌರವವನ್ನು ಸಲ್ಲಿಸಿದೆ ಎಂದರೆ ಇವರು ಜನಪ್ರಿಯರಾಗಿರಲಿಲ್ಲ ಎಂಬುದು ಹೇಗೆ ಒಪ್ಪಲು ಸಾಧ್ಯವಿದೆ?

ಅಮೆರಿಕ ಮತ್ತು ಇತರೆ ಯುರೋಪ್ ದೇಶಗಳ ಅನೇಕ ನಾಯಕರುಗಳ ಹೋರಾಟಗಳಿಗೆ ಗಾಂಧೀಜಿರವರ ಸತ್ಯಾಗ್ರಹ, ಅಹಿಂಸವಾದ ಪ್ರೇರಣೆಯಾಗಿತ್ತು ಎನ್ನುವುದಕ್ಕೆ ಅನೇಕ ಸಾಕ್ಷಿಗಳಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ಇತರೆ ನಾಯಕರು ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಳಿಗೆ ಇವರನ್ನು ಸ್ಪೂರ್ತಿಯನ್ನಾಗಿ ಸ್ವೀಕರಿಸಿದ್ದರು ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ.

ಭಾರತದಲ್ಲಿ ಆಡಳಿತವನ್ನು ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ಕೂಡ ಗಾಂಧಿಜಿಯವರ ವಿಚಾರದಲ್ಲಿ ಎಂದಿಗೂ ಸಹ ಹಗುರವಾಗಿ ನಡೆದುಕೊಳ್ಳುತ್ತಿರಲಿಲ್ಲ. ಕಾರಣ ಗಾಂಧೀಜಿರವರ ಪ್ರಭಾವದಿಂದ ಇಂಗ್ಲೆಂಡಿನ ಅನೇಕ ವ್ಯಕ್ತಿಗಳು ಭಾರತ ದೇಶಕ್ಕೆ ಒಂದು ಗಾಂಧೀಜಿಯವರ ಜೊತೆಯಲ್ಲಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಂತಹ ಉದಾಹರಣೆಗಳು ಇದೆ.

ಗಾಂಧೀಜಿ ಅವರ ಚಿತ್ರ ಬಿಡುಗಡೆಗೆ ಮುನ್ನವೇ ಜಗತ್ತಿನಲ್ಲಿ ಐನ್ಸ್ಟೀನ್ ಮುಂತಾದಂತಹ ಮಹಾನ್ ವಿಜ್ಞಾನಿಗಳು ಗಾಂಧೀಯವರ ವ್ಯಕ್ತಿತ್ವದ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಗಾಂಧೀಜಿರವರ ಆಕರ್ಷಣೆ ಮತ್ತು ಬದುಕಿನ ಪರಿಯ ಬಗ್ಗೆ ಕುತೂಹಲದಿಂದ ಲೇಖನಗಳನ್ನು ಬರೆದಿದ್ದಾರೆ.

ಭಾರತ ದೇಶಕ್ಕೆ ಪ್ರಥಮ ಬಾರಿಗೆ ನೊಬೆಲ್ ಬಹುಮಾನವನ್ನು ತಂದುಕೊಟ್ಟಂತಹ ರವೀಂದ್ರನಾಥ ಠಾಕೂರ್ ರವರು ಗಾಂಧೀಜಿಯವರನ್ನು ಮಹಾತ್ಮ ಎಂದು ಚಲನಚಿತ್ರ ಬಿಡುಗಡೆ ಆಗುವ ಮುನ್ನವೇ ಕರೆದಿದ್ದಾರೆ ಎನ್ನುವುದು ನೆನಪಿರಲಿ.

ಗಾಂಧೀಜಿರವರ ಸಾವಿನ ನಂತರ ಇಡೀ ಜಗತ್ತು ಶೋಕವನ್ನು ವ್ಯಕ್ತಪಡಿಸಿ ಗಾಂಧೀಜಿಯವರ ಹತ್ಯೆಯನ್ನು ಅತ್ಯಂತ ಕಠೋರವಾದ ಪದಗಳಲ್ಲಿ ಖಂಡಿಸಿ ಗಾಂಧೀಜಿಯವರ ಹೋರಾಟ ಮತ್ತು ಪ್ರಾಮಾಣಿಕವಾದ ಶುದ್ಧವಾದ ಪಾರದರ್ಶಕವಾದ ಬದುಕಿನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಲವಾರು ದಶಕಗಳ ಹಿಂದೆಯೇ ಗಾಂಧೀಜಿಯವರ ಕುರಿತು ಸಾವಿರಾರು ಪುಟಗಳ ಸಾವಿರಾರು ಪುಸ್ತಕಗಳು ವಿವಿಧ ಭಾಷೆಗಳಲ್ಲಿ ಪ್ರಕಟಣೆಗೊಂಡಿದೆ.

ಗಾಂಧೀಜಿರವರ ಚಲನಚಿತ್ರ ಬಿಡುಗಡೆ ಆಗುವ ಮುನ್ನವೇ ಜಗತ್ತಿನ ನೂರಾರು ದೇಶಗಳಲ್ಲಿ ಗಾಂಧೀಜಿರವರ ಹೆಸರಿನಲ್ಲಿ ಸ್ಮಾರಕ ಭವನಗಳು ಪುತ್ಥಳಿಗಳು ಸ್ಥಾಪನೆಯಾಗಿದೆ ಎಂದ ಮೇಲೆ ಗಾಂಧೀಜಿರವರ ಪರಿಚಯದ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡಿರುವುದು ಗಮನಿಸಿದಾಗ ಚುನಾವಣಾ ಪ್ರಚಾರದ ಒತ್ತಡದಲ್ಲಿ ಪ್ರಧಾನಮಂತ್ರಿಗಳು ಸಾಕಷ್ಟು ವಿಚಾರಗಳನ್ನ ಮರೆತಿರುತ್ತಾರೆ ಎನ್ನುವುದು ಸಾಬೀತಾಗಿರುತ್ತದೆ.

ಬಿಜೆಪಿಯ ನಾಯಕರು ಏನು ಹೇಳಿದರೆ ಏನು, ಪ್ರಧಾನಮಂತ್ರಿಗಳು ಏನು ಮಾತನಾಡಿದರೇನು, ಭಾರತವನ್ನ ಜಗತ್ತಿನ ಅನೇಕ ರಾಷ್ಟ್ರಗಳು ರಾಜತಾಂತ್ರಿಕವಾಗಿ ಮತ್ತು ಹೋರಾಟಗಳ ಕಾರಣಕ್ಕಾಗಿ ಗುರುತಿಸುವುದು ಮಹಾತ್ಮ ಗಾಂಧೀಜಿರವರ ಮೂಲಕವೇ ಎನ್ನುವುದು ಸತ್ಯ ಸಂಗತಿ. ಜಗತ್ತಿನ ಯಾವುದೇ ಪ್ರಮುಖರು ಭಾರತಕ್ಕೆ ಬಂದರೆ ಮೊದಲು ಭೇಟಿಕೊಡಲು ಬಯಸುವುದು ಗಾಂಧೀಜಿಯವರ ಸಮಾಧಿಗೆ ಮತ್ತು ಗೌರವ ಅರ್ಪಿಸಲು ಬಯಸುವುದು ಗಾಂಧೀಜಿಯವರ ಸಮಾಧಿಗೆ ಎಂದ ಮೇಲೆ ಬಿಜೆಪಿ ನಾಯಕರು ಎಷ್ಟೇ ಕಡೆಗಣಿಸಿದರು ಯಾವ ಬದಲಾವಣೆ ಆಗುವುದಿಲ್ಲ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply