ಬೆಂಗಳೂರು: ರಾಜ್ಯದ ಬಾಕಿ ಇರುವ ಐದು ಲೋಕಸಭಾ ಕ್ಷೇತ್ರಗಳಿಗೆ ಇದೇ 22ರಂದು ಕೇಂದ್ರ ವರಿಷ್ಠರು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಲಾಗಿದೆ. 22ರಂದು ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಚರ್ಚಿಸಿದ ಬಳಿಕ ಅಂತಿಮ ಪಟ್ಟಿ ಘೋಷಣೆಯಾಗಲಿದೆ ಎಂದರು.
ಬೆಳಗಾವಿ, ಉತ್ತರಕನ್ನಡ, ಕೋಲಾರ, ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲಾಗಿದೆ. ಕೆಲವು ಕಾರಣಗಳಿಂದ ಚಿತ್ರದುರ್ಗ ಮತ್ತು ರಾಯಚೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದರು.
ಬಹುತೇಕ ಮೂರು ಕ್ಷೇತ್ರಗಳಿಗೆ 22ರಂದು ಅಭ್ಯರ್ಥಿ ಹೆಸರು ಘೋಷಣೆಯಾಗಬಹುದು. ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆ. ವರಿಷ್ಠರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಪ್ರಧಾನಿ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾದರೆ ನಾವು ಎಲ್ಲದಕ್ಕೂ ಸಿದ್ಧರಾಗಬೇಕು ಎಂದರು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಕೋಲಾರ ಕ್ಷೇತ್ರವನ್ನು ನಾವು ಜೆಡಿಎಸ್ಗೆ ಬಿಟ್ಟುಕೊಡಬೇಕು. ನಮ್ಮ ಸಂಸದರಾಗಿರುವ ಮುನಿಸ್ವಾಮಿಯವರಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಇದಕ್ಕೆ ಅವರು ಸಮ್ಮತಿಸಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದರು.
ಟಿಕೆಟ್ ಆಕಾಂಕ್ಷಿಗಳಾಗಿದ್ದ ಜೆ.ಸಿ.ಮಾಧುಸ್ವಾಮಿ, ಕರಡಿ ಸಂಗಣ್ಣ ಸೇರಿದಂತೆ ಅಸಮಾಧಾನಿತರ ಜೊತೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರಿಗೆ ಯಾವುದೇ ರೀತಿಯ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಲಾಗಿದೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದರು.
ಇನ್ನು ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಪುತ್ರನಿಗೆ ನಾನೇಕೆ ಟಿಕಟ್ ತಪ್ಪಿಸಲಿ? 25 ಕ್ಷೇತ್ರಗಳಿಗೆ ನಾನೊಬ್ಬನೆ ತೀರ್ಮಾನಿಸುವುದಿಲ್ಲ. ವರಿಷ್ಠರು ಅಳೆದುತೂಗಿ ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂದರು.
ಈಶ್ವರಪ್ಪನವರಿಗೆ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಲಾಗಿದೆ. ನಾನೇ ಅವರ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಆದರೆ ಅವರು ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.
ರಾಜ್ಯಪಾಲರನ್ನಾಗಿ ಮಾಡುವ ಆಶ್ವಾಸನೆ ನೀಡಲಾಗಿತ್ತು. ಸ್ಥಾನಮಾನಕ್ಕಿಂತ ಪಕ್ಷದ ಹಿತ ಮುಖ್ಯ ಎಂಬ ಕಾರಣಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿದ್ದೇನೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ದುಡುಕಿನಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸಲಹೆ ನೀಡಿದರು.
28 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಾತಾವರಣವಿದೆ. ಜೆಡಿಎಸ್ ಮತ್ತು ನಾವು ಒಗ್ಗಟ್ಟಾಗಿ ಪ್ರಚಾರ ನಡೆಸಿದರೆ ಇದೇನೂ ಕಷ್ಟಕರವಲ್ಲ. ಕಾಂಗ್ರೆಸ್ ಸರ್ಕಾರದಿಂದ ಜನರು ಬೇಸತ್ತು ಬಿಜೆಪಿಯತ್ತ ನೋಡುತ್ತಿದ್ದಾರೆ. ಇದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನಾನೇ ಪ್ರಚಾರ ಮಾಡುತ್ತೇನೆ. ಮೋದಿಯವರನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರಬೇಕೆಂದರೆ ನಾವೆಲ್ಲರೂ ಶ್ರಮಿಸಬೇಕು. ಇದಕ್ಕಾಗಿ ಎಲ್ಲರೂ ಒಂದಾಗಬೇಕು ಎಂದರು.




