ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ಬಿಕ್ಕಟ್ಟು

2 years ago

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಬೇಕು ಎಂದು ಹವಣಿಸುತ್ತಿರುವ ಬಿಜೆಪಿಗೆ ಬೆಳಗಾವಿ ಸೇರಿದಂತೆ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

ಪ್ರಮುಖವಾಗಿ ಬೆಳಗಾವಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಗೆ ತಲೆನೋವಾಗಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಘಟಾನುಘಟಿ ನಾಯಕರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬಂಡಾಯ ಕಟ್ಟಿಟ್ಟ ಬುತ್ತಿ ಎಂಬ ವಾತಾವರಣ ಸೃಷ್ಟಿಯಾಗಿದೆ. ಅದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡಲು ಹೈಕಮಾಂಡ್ ಚರ್ಚೆ ನಡೆಸಲಾಗಿದೆ.

ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ ಇವರಿಗೆ ಟಿಕೆಟ್ ಕೊಡುವುದಕ್ಕೆ ಹಾಲಿ ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಸಂಜಯ್ ಪಾಟೀಲ್, ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವು ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿರುವ ನಾಯಕರ ಜೊತೆ ಮಾತನಾಡಿ ಬಿಕ್ಕಟ್ಟು ಪರಿಹರಿಸುವಂತೆ ಹೈಕಮಾಂಡ್ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದೆ.

ಇನ್ನು ಉತ್ತರ ಕನ್ನಡದಿಂದ ಕಣಕ್ಕಿಳಿಯಲು ಹಾಲಿ ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಜಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟಿಗಾಗಿ ಪ್ರಬಲ ಲಾಬಿ ನಡೆಸಿದ್ದಾರೆ. ಹೀಗಾಗಿ ಒಮ್ಮತದ ಆಯ್ಕೆ ಕಷ್ಟವಾಗಿದೆ.

ರಾಯಚೂರಿನಲ್ಲಿ ಹಾಲಿ ಸಂಸದ ಅಮರಸಿಂಹ ನಾಯಕ್ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದ್ದಾರೆ. ಆದರೆ ಈ ಕ್ಷೇತ್ರದಿಂದ ಮಾಜಿ ಸಂಸದ ಬಿ.ವಿ.ನಾಯಕ್ ಟಿಕೆಟಿಗೆ ಬೇಡಿಕೆ ಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬಂಡಾಯ ನಿಶ್ಚಿತ. ಟಿಕೆಟ್ ವಂಚಿತರು ಕಾಂಗ್ರೆಸ್ ಸೇರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡುವುದು ಖಚಿತ.

ಚಿತ್ರದುರ್ಗ ಕ್ಷೇತ್ರದಲ್ಲೂ ಇದೇ ರೀತಿಯಲ್ಲಿ ಪೈಪೋಟಿ ಉಂಟಾಗಿದ್ದು, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಕಷ್ಟ ಎನ್ನುವ ವರದಿಗಳು ತಲುಪಿವೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಅವರ ನಡುವೆ ಟಿಕೆಟ್ ಪಡೆಯಲು ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಚಿಕ್ಕಬಳ್ಳಾಪುರದಿಂದ ಸದಾನಂದಗೌಡರಿಗೆ ಅದೃಷ್ಟ ಖುಲಾಯಿಸುವ ಸಂಭವವಿ ಇದೆ ಎನ್ನಲಾಗಿದೆ.

ಜೊತೆಗೆ ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳ ವಿರುದ್ಧ ಬಂಡಾಯ ಸಾರಿರುವ ನಾಯಕರ ಕಾರ್ಯವೈಖರಿ ಕೂಡ ಸವಾಲಾಗಿ ಪರಿಣಮಿಸಿದೆ. ಅವರ ಮನವೊಲಿಕೆ ಕಾರ್ಯ ನಡೆದಿದೆ.

Leave a Reply