ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕಾರ್ಯಕ್ರಮ
ಬೆಂಗಳೂರು: ಉಡುಪಿ ಆತಿಥ್ಯ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕನ್ನಡ ಪರಿಚಾರಕರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕ.ರಾ.ರ.ಸಾ.ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಗೌರವ ಸಲಹೆಗಾರ ವ.ಚ.ಚನ್ನೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭುಸ್ವಾಮಿ, ರಾಜ್ಯ ಸಂಚಾಲಕ ಕೆ.ಎಸ್.ಹುಸೇನ್, ರಾಜ್ಯ ಜಂಟಿ ಕಾರ್ಯದರ್ಶಿ ಹೆಚ್.ಕೆ.ಸುರೇಶ್ 16 ಕನ್ನಡ ಪರಿಚಾರಕರಿಗೆ ಸಾರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ಮನು ಬಳಿಗಾರ್, ಕನ್ನಡ ಕಟ್ಟಾಳುಗಳನ್ನು ಸನ್ಮಾನಿಸುವುದು ಹೃದಯಸ್ಪರ್ಶಿ ಸನ್ನಿವೇಶ. ಕಾಯಕಯೋಗಿಗಳು ಸ್ವಂತ ಹಣದಲ್ಲಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಂಘ ಕ್ರಿಯಾಶೀಲವಾಗಿ ಕನ್ನಡ ಸೇವೆ ಮಾಡುತ್ತಿದೆ. ಕನ್ನಡ ಜಲ, ನೆಲ ಭಾಷೆ ಕುರಿತು ಧಕ್ಕೆಯಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡಿದೆ ಎಂದರು.
ಕನ್ನಡ, ನೆಲ, ಭಾಷೆಗೆ ಕೇಂದ್ರದಲ್ಲಿ ಸತತವಾಗಿ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೆ ಇಡೀ ದೇಶವನ್ನೆ ಆಳಿದ ಇತಿಹಾಸವಿದೆ. ಇಮ್ಮಡಿಪುಲಕೇಶಿ, ಚಾಲುಕ್ಯರು ದೇಶವನ್ನಾಳಿದರು. ಕನ್ನಡಿಗರು ಸಿಗಬೇಕಾದ ಮಾನ್ಯತೆ, ಹಕ್ಕು ಸಿಗುತ್ತಿಲ್ಲ, ಪೋಸ್ಟ್ ಆಫೀಸ್, ರೈಲ್ವೆ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸುತ್ತಿಲ್ಲ. ಕನ್ನಡ ತಾಯಿಯ ಸೇವೆ ಸದಾ ಮಾಡುತ್ತಾ ಕನ್ನಡ ಉಳಿಸಿ, ಬೆಳೆಸೋಣ ಎಂದು ಕರೆನೀಡಿದರು.
ವ.ಚ.ಚನ್ನೇಗೌಡ ಮಾತನಾಡಿ, ಉದ್ಯೋಗದ ಜೊತೆಯಲ್ಲಿ ಕನ್ನಡ ಸೇವೆ ಮಾಡುವ ಮತ್ತು ಕುಟುಂಬದ ಕಡೆ ಗಮನಹರಿಸದೇ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಕನ್ನಡತಾಯಿ ಮಕ್ಕಳು. ಕನ್ನಡವೆ ತಾಯಿ, ಕನ್ನಡವೆ ಧರ್ಮ, ಕನ್ನಡವೆ ಜಾತಿ ನಮ್ಮದು ಎಂದರು.
ಪ್ರಧಾನಿ ನರೇಂದ್ರಮೋದಿರವರು ಸಾರಿಗೆ ನೌಕರರಾದ ಕೆ.ಧನಪಾಲ್ ರವರನ್ನು ಮನ್ ಕಿ.ಬಾತ್ ನಲ್ಲಿ ಹಾಡಿ ಹೊಗಳಿದ್ದಾರೆ. ಕನ್ನಡ ಭಾಷೆಗೆ ದುಡಿದವರಿಗೆ, ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದರು.
1 ಲಕ್ಷ 26 ಸಾವಿರ ಸಾರಿಗೆ ಉದ್ಯೋಗಿಗಳು ಬಹುತೇಕ ಕನ್ನಡಿಗರು ಎಂಬುದು ಸಂತೋಷದಾಯಕವಾಗಿದೆ. ನಮ್ಮ ಸಾರಿಗೆ ಸಂಸ್ಥೆಯಲ್ಲಿ ಸಂಪೂರ್ಣ ಆಡಳಿತ ಭಾಷೆ ಕನ್ನಡವಾಗಿದೆ. ಸರ್ಕಾರ ಮತ್ತು ಖಾಸಗಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಬೇಕು. ಕೃಷಿ, ಸಾಹಿತ್ಯ ಸಾಹಿತ್ಯ, ಸಂಸ್ಕೃತಿ ಕನ್ನಡನಾಡು ಶ್ರೀಮಂತವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಕೆತ್ತಿದ ಶಿಲ್ಪಿ ನಾಡಿನ ಹೆಸರಾಂತ ಕಲಾವಿದ ಅರುಣ್ ಯೋಗಿರಾಜ್ ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಬಿ.ಎಂ.ಶ್ರೀ ರವರು ಕನ್ನಡ ಭಾಷೆ ಉಳಿಸಲು ಕಾವಲು ನಾಯಿಯಾಗಿ ಕಾಯುತ್ತೇನೆ ಎಂದು ಹೇಳಿದ್ದರು. ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡಿರುವ ನಾಡು ಕರ್ನಾಟಕ, ಇಲ್ಲಿ ಹುಟ್ಟಿರುವುದು ಏಳು ಜನ್ಮದ ಪುಣ್ಯದ ಫಲ ಎಂದರು.




