ಕೃಷಿ ಮಸೂದೆ ಕುರಿತ ವಿವಾದಾಸ್ಪದ ಹೇಳಿಕೆ ಕುರಿತು ಕ್ಷಮೆ ಕೋರಿದ ಕಂಗನಾ ರಣಾವತ್

2 years ago

ದೆಹಲಿ: ತಮ್ಮ ಮಾತಿನಿಂದ ಯಾರಿಗಾದರೂ ನಿರಾಸೆಯಾಗಿದ್ದರೆ ಪಶ್ಚಾತ್ತಾಪ ಪಡುತ್ತೇನೆ ಎಂದು ಬಿಜೆಪಿ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೆ ತಂದಿದ್ದ ವಿವಾದಾಸ್ಪದ ಮೂರು ಕೃಷಿ ಕಾನೂನುಗಳನ್ನು 1000ಕ್ಕೂ ಹೆಚ್ಚು ರೈತರು ಪ್ರತಿಭಟನಾ ಸ್ಥಳದಲ್ಲೇ ಮಡಿದ ನಂತರ ವಾಪಸ್ ತೆಗೆದುಕೊಳ್ಳಲಾಗಿತ್ತು. ಸದರಿ ಕಾನೂನುಗಳನ್ನು ಮರಳಿ ತರಬೇಕು ಎಂದು ಕಂಗನಾ ರಣಾವತ್ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯಿಂದ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡಿತ್ತು.

2024ರ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಮಂಡಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದೆಯಾಗಿರುವ ತಮ್ಮ ಹೇಳಿಕೆಗೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ವ್ಯಾಪಕ ಖಂಡನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ತಾವು ನೀಡಿದ್ದ ವಿವಾದಾಸ್ಪದ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.

ಮಾಧ್ಯಮದವರು ನನಗೆ ಕೃಷಿ ಕಾನೂನುಗಳ ಬಗ್ಗೆ ಪ್ರಶ್ನಿಸಿದ್ದರು. ಈ ಕಾನೂನುಗಳನ್ನು ಮರಳಿ ತರಲು ರೈತರು ಪ್ರಧಾನಿಗೆ ಮನವಿ ಮಾಡಬೇಕು ಎಂದು ನಾನು ಸಲಹೆ ನೀಡಿದ್ದೇನೆ. ನನ್ನ ಈ ಹೇಳಿಕೆಯಿಂದ ಅನೇಕರಿಗೆ ಬೇಸರವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಕೃಷಿ ಕಾನೂನುಗಳನ್ನು ಜಾರಿಗೊಳಿಸಿದಾಗ, ನಮ್ಮಲ್ಲಿ ಅನೇಕರು ಬೆಂಬಲ ವ್ಯಕ್ತಪಡಿಸಿದರು. ಆದರೆ ಸೂಕ್ಷ್ಮ ಮತ್ತು ಸಹಾನುಭೂತಿಯಿಂದ ಪ್ರಧಾನಿ ಕಾನೂನುಗಳನ್ನು ಹಿಂತೆಗೆದುಕೊಂಡರು. ಅವರ ಮಾತಿನ ಘನತೆ ಕಾಪಾಡುವುದು ನಮ್ಮ ಎಲ್ಲ ಕಾರ್ಯಕರ್ತರ ಕರ್ತವ್ಯ. ಇನ್ನು ಮುಂದೆ ನಾನು ಕಲಾವಿದೆಯಲ್ಲ, ಬಿಜೆಪಿ ಕಾರ್ಯಕರ್ತೆ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ನನ್ನ ಅಭಿಪ್ರಾಯಗಳು ನನ್ನದೇ ಆಗಬಾರದು, ಪಕ್ಷದ ನಿಲುವು ಇರಬೇಕು. ತಮ್ಮ ಆಲೋಚನೆಗಳು ಯಾರಿಗಾದರೂ ನಿರಾಸೆ ತಂದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಕಂಗನಾ ರಣಾವತ್ ಅವರು ಮಾರುಕಟ್ಟೆಯಲ್ಲಿ ಕಾರ್ಮಿಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕೃಷಿ ಕಾನೂನುಗಳ ಬಗ್ಗೆ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ಹೇಳಿಕೆ ಆಧರಿಸಿ ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದವು. ಹರಿಯಾಣ ವಿಧಾನಸಭಾ ಚುನಾವಣೆ ವೇಳೆ ಇಂತಹ ಹೇಳಿಕೆಯಿಂದ ನಷ್ಟವಾಗುವ ಸಾಧ್ಯತೆ ಇತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಕಂಗನಾ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.

Leave a Reply