ಉತ್ತರಕನ್ನಡ: ಸಿಎಂ ಸಿದ್ದರಾಮಯ್ಯ ಮತ್ತು ಮಸೀದಿ ಕುರಿತು ವಿವಾದಾಸ್ಪದ ಹೇಳಿಕೆ ನೀಡಿದ್ದ ಕೇಂದ್ರದ ಮಾಜಿ ಸಚಿವ ಮತ್ತು ಉತ್ತರಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗಿರುವ ಹಿನ್ನೆಲೆಯಲ್ಲಿ ಸೆಕ್ಷನ್ 153ಎ ಮತ್ತು 505ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಕುಮಟಾದಲ್ಲಿ ನಡೆದ ಸಭೆಯಲ್ಲಿ ಸಂಸದರು ಮಾಡಿರುವ ಭಾಷಣ ಆಕ್ಷೇಪಾರ್ಹವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಶನಿವಾರ ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ್ದ ಅನಂತಕುಮಾರ ಹೆಗಡೆ, ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವು. ಅವುಗಳನ್ನು ಬಾಬ್ರಿ ಮಸೀದಿ ಮಾದರಿಯಲ್ಲಿ ಕೆಡವಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಜೊತೆಗೆ, ಸಿದ್ದರಾಮಯ್ಯ ಅವರು ಮೊದಲು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿಲ್ಲ ಎಂದು ಹೇಳಿದರು. ಆಹ್ವಾನ ಬಂದ ಮೇಲೆ ನಾನು ಹೋಗುವುದಿಲ್ಲ ಎಂದು ಹೇಳೀದರು. “ನೀನು ಬಾ ಅಥವಾ ಬಿಡು. ಆದರೆ, ರಾಮ ಜನ್ಮಭೂಮಿಯಲ್ಲಿ ನಡೆಯೋದು ಏನೂ ನಿಲ್ಲೋದಿಲ್ಲ ಮಗನೇ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಜೊತೆಗೆ, ಈ ಹಿಂದೆ ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಬಳಿಕ, ಜನವರಿ 22ರ ಬಳಿಕ ಯಾವಾಗಲಾದರೂ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು ಎಂದು ಸಿದ್ದರಾಮಯ್ಯ ವಿರುದ್ಧು ಸುಳ್ಳುಗಳನ್ನು ಹೇಳಿದ್ದರು.
ಕೇಂದ್ರ ಸಚಿವ ಸಂಪುಟವನ್ನು ಪುನರ್ ರಚಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅನಂತಕುಮಾರ ಹೆಗಡೆಯವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದರು. ಅದಾದ ನಂತರ ಬಹುತೇಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ನಾಪತ್ರೆಯಾಗಿದ್ದ ಇವರು, ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವರದಿಗಳ ನಂತರ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಆಗಮಿಸುತ್ತಿದ್ದಾರೆ. ಜೊತೆಗೆ ವಿವಾದಾಸ್ಪದ ಹೇಳಿಕೆ ನೀಡುವ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.
ಈ ಹಿಂದೆ ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು’ ಎಂದು ಹೇಳಿಕೆ ನೀಡಿದ್ದರು. ದೇಶಾದ್ಯಂತ ಹೇಳಿಕೆ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅನಂತರ ದೇಶದ ಕ್ಷಮೆ ಕೋರಿದ್ದರು.




