ಬೆಂಗಳೂರು: ರೈತರ ಕುರಿತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ನೀಡಿರುವ ಹೇಳಿಕೆ ವಿವಾದಕ್ಕೆ ತಿರುಗಿದ್ದು, ಅನ್ನದಾತರನ್ನು ಅಪಮಾನಿಸಿರುವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸಿವೆ.
ಈ ಹಿಂದೆ ಕೂಡ ರೈತರ ಸಾಲಮನ್ನಾ ಕುರಿತು ಶಿವಾನಂದ ಪಾಟೀಲ್ ನೀಡಿದ ಹೇಳಿಕೆ ವಿವಾದದ ಕಿಡಿ ಏಳಿಸಿತ್ತು. ಅನಂತರ ಕ್ಷಮೆ ಯಾಚನೆಯೊಂದಿಗೆ ವಿವಾದಕ್ಕೆ ತೆರೆಬಿದ್ದಿತ್ತು. ಮತ್ತೊಮ್ಮೆ ಅವರು ಇಂತಹ ವಿವಾದದಲ್ಲಿ ಸಿಲುಕಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕೃಷಿ ಸ್ವಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದ್ದ ಅವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದರು. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟು ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬಿತ್ತನೆ ಬೀಜ, ಗೊಬ್ಬರವನ್ನೂ ಕೊಟ್ಟಿದ್ದಾರೆ. ಇನ್ನೂ ರೈತರಿಗೆ ಒಂದು ಆಸೆ ಇದೆ… ಪದೇ ಪದೇ ಬರಗಾಲ ಬರಲಿ ಎಂಬುದು. ಕಾರಣ ಸಾಲ ಮನ್ನಾ ಆಗುತ್ತೆ ಎಂದು. ಈ ರೀತಿಯಾಗಿ ಬಯಸಬಾರದು ಎಂದಿದ್ದರು.
ಅವರ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ, ‘ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು’ಎಂದಿದ್ದಾರೆ.
‘ನಾನು ಕೃಷಿ ಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು, ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಅಶ್ವಥ್ ನಾರಾಯಣ ಸೇರಿದಂತೆ ಅನೇಕರು ಖಂಡಿಸಿದ್ದಾರೆ.
ರೈತರ ಕುರಿತು ಅಪಮಾನಕರ ಹೇಳಿಕೆ ನೀಡಿರುವ ಶಿವಾನಂದ ಪಾಟೀಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇಲ್ಲವಾದರೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ 196 ತಾಲ್ಲೂಕುಗಳು ಬರಕ್ಕೆ ತುತ್ತಾಗಿವೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಒಂದು ಕಡೆ ಸಚಿವರು ಮುಖ್ಯಮಂತ್ರಿಗಳು ಐಷಾರಾಮಿ ವಿಮಾನದಲ್ಲಿ ಮಜಾ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಚಿವರು ದಿನಕ್ಕೊಂದು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಇದೇ ಸಚಿವರು ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅಂದೇ ಇವರ ವಿರುದ್ಧ ಕ್ರಮ ಕೈಗೊಂಡಿದ್ದರೆ ಈ ರೀತಿಯ ಹೇಳಿಕೆಗಳು ಬರುತ್ತಿರಲಿಲ್ಲ. ಕೂಡಲೇ ಸಚಿವರು ರೈತರಲ್ಲಿ ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಸಚಿವ ಶಿವಾನಂದ ಪಾಟೀಲ್ ಹಿಂದೆಯೂ ಸಹ ರೈತರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮೊದಲು ಒಂದು ಲಕ್ಷ ಪರಿಹಾರ ಇತ್ತು, ಈಗ 5 ಲಕ್ಷ ರೂ. ಕೊಡುತ್ತಾರೆ. ಅದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದಿದ್ದಾರೆ.
ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಭವಿಷ್ಯ ನೂಡಿದಿದ್ದಾರೆ.
ಶಾಸಕ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಶಿವಾನಂದ್ ಪಾಟೀಲ್ ಸ್ವತಃ ಒಬ್ಬ ರೈತರಾಗಿ ಇಂತ ಹೇಳಿಕೆ ದುರದೃಷ್ಟಕರ. ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು. ಇದು ರೈತ ವಿರೋ ಸರ್ಕಾರ. ಸಾಲಮನ್ನಾಕ್ಕಾಗಿ ರೈತರು ಬರಗಾಲಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ಸೂಕ್ತವಲ್ಲ. ಅವರು ಮಾನಸಿಕರಾಗಿ ಅಸ್ವತ್ಥರಾಗಿದ್ದಾರೆ. ಕರ್ನಾಟಕಕ್ಕೆ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಸ್ಥಾನದಿಂದ ವಜಾ ಆಗಬೇಕು ಎಂದಿದ್ದಾರೆ.
ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ. ಇದು ಸರ್ಕಾರದ ಅಹಂಕಾರದ ಒಂದು ಭಾವನೆ. ಸಿಎಂಗೆ ಮನವಿ ಮಾಡುತ್ತೇನೆ, ನೀವೇ ನಿಮ್ಮ ಸಚಿವರ ಮದ ಇಳಿಸಿ. ಇಲ್ಲವಾದರೆ ಜನ ನಿಮ್ಮನ್ನೂ ಸೇರಿಸಿ ಎಲ್ಲಾ ಸಚಿವರ ಮದ ಇಳಿಸುತ್ತಾರೆ ಎಂದರು.




