ಕೊಲ್ಲಲು ಬಂದವರು ಧರ್ಮ ಕೇಳಿ ಕೊಂದರಂತೆ. ಧರ್ಮದ ಹೆಸರಿನಲ್ಲಿ, ಧರ್ಮದ ಕಾರಣಕ್ಕೆ ಕೊಲೆ ಮಾಡಬಾರದು ಎನ್ನುವ ಪ್ರಜ್ಞೆ ಅವರಿಗೆ ಇದ್ದಿದ್ದರೆ ಅವರು ಭಯೋತ್ಪಾದಕರಾಗುತ್ತಿರಲಿಲ್ಲ, ಮನುಷ್ಯರಾಗಿರುತ್ತಿದ್ದರು. ಆ ಪ್ರಜ್ಞೆ ಇಲ್ಲದ ಕಾರಣಕ್ಕೇ, ಧರ್ಮದ ನಿಜಾರ್ಥವನ್ನು ಅರ್ಥೈಸಿಕೊಳ್ಳಲಾಗದೆ ಹೇಳಿಕೆಮಾತು ನಂಬಿ, ಉನ್ಮಾದಕ್ಕೆ ಒಳಗಾಗಿ ನರರಾಕ್ಷಸ ಭಯೋತ್ಪಾದಕರಾಗಿದ್ದಾರೆ. ವಾಸ್ತವ ಇಷ್ಟೆ. ಧರ್ಮದ ಹೆಸರಲ್ಲಿ ದ್ವೇಷಿಸುವುದಾಗಲಿ, ಕೊಲ್ಲುವುದಾಗಲಿ ಮಾಡಬಾರದು ಎನ್ನುವ ಪ್ರಜ್ಞೆಯೇ ಧರ್ಮ. ಧರ್ಮಕ್ಕಾಗಿ ಮತ್ತೊಬ್ಬರನ್ನು ದ್ವೇಷಿಸುತ್ತೇವೆ, ಕೊಲ್ಲುತ್ತೇವೆ ಎನ್ನುವುದೇ ಭಯೋತ್ಪಾದಕತೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಇಲ್ಲಿ ಒಂದು ವಿಚಾರ ಅರ್ಥವಾಗುತ್ತಿಲ್ಲ. ಅವರೇನೊ ಮನುಷ್ಯಪ್ರಜ್ಞೆ ಕಳೆದುಕೊಂಡ ಭಯೋತ್ಪಾದಕರು; ಹಾಗಾಗಿ ಧರ್ಮದ ನೆಪ ಮಾಡಿಕೊಂಡು ಕೊಂದರು. ಆದರೆ, ಪ್ರಜ್ಞಾವಂತರು ನಾವು ಮಾಡುತ್ತಿರೋದೇನು? ಭಯೋತ್ಪಾದಕರ ಜನ್ಮಜಾತ ಧರ್ಮವನ್ನು ನೆಪಮಾಡಿಕೊಂಡು, ಆ ಧರ್ಮದ ಪ್ರತಿಯೊಬ್ಬರ ಮೇಲೆ ಸಾಮೂಹಿಕ ದ್ವೇಷ ಉಕ್ಕುವಂತೆ ಇಡೀ ಸಮಾಜವನ್ನು ಪ್ರಚೋದಿಸುತ್ತಿದ್ದೇವೆ! ಧರ್ಮದ ಹೆಸರಿನಲ್ಲಿ ಕೊಂದ ಅವರಿಗೂ, ಅದೇ ಧರ್ಮದ ನೆಪದಲ್ಲಿ ದ್ವೇಷವನ್ನು ಉತ್ಪತ್ತಿಸುತ್ತಿರುವ ನಮಗೂ ವ್ಯತ್ಯಾಸವಿದೆ ಅನ್ನಿಸುತ್ತಿದೆಯೇ? ಅಂತಹ ನರಹಂತಕ ಕುಕೃತ್ಯವೆಸಗಿದ ಆ ಭಯೋತ್ಪಾದಕರನ್ನು ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಿಬಿಡೋಣ. ಆ ವಿಚಾರದಲ್ಲಿ ಮುಲಾಜೇ ಬೇಡ. ಆದರೆ ಅವರ ಧರ್ಮವನ್ನು ನೆಪ ಮಾಡಿಕೊಂಡು ಅದಕ್ಕೂ ತಮಗೂ ಸಂಬಂಧವಿಲ್ಲದವರ ಮೇಲೆ ದ್ವೇಷೋತ್ಪಾದನೆ ಮಾಡುವುದನ್ನು ಧರ್ಮ ಒಪ್ಪುವುದೇ?
ಕೊಂದವರ ಧರ್ಮವನ್ನೇನೋ ನಾವು ದ್ವೇಷೋತ್ಪಾದನೆಗೆ ಬಳಸುತ್ತಿದ್ದೇವೆ. ಆದರೆ, ಅದೇ ಘಟನೆಯಲ್ಲಿ ಪ್ರವಾಸಿಗರ ರಕ್ಷಣೆಗಾಗಿ ತಮ್ಮದೇ ಧರ್ಮದ ಭಯೋತ್ಪಾದಕನ ಜೊತೆ ಹೋರಾಡುತ್ತಾ ಗುಂಡೇಟಿಗೆ ಪ್ರಾಣ ಬಿಟ್ಟ ಕುದುರೆ ಸವಾರ ಸೈಯದ್ ಆದಿಲ್ ಹುಸೇನನ ಧರ್ಮವನ್ನು ನಾವೇಕೆ ಪ್ರಸ್ತಾಪಿಸುತ್ತಿಲ್ಲ; ಭಯೋತ್ಪಾದಕರ ಗುಂಡೇಟಿನಿಂದಾಗಿ ತನ್ನ ಪತಿ ಪ್ರಾಣ ಕಳೆದುಕೊಂಡಾಗ ಶಿವಮೊಗ್ಗದ ತಾಯಿಗೆ ಧೈರ್ಯ ತುಂಬಿ, ಆಕೆಯ ಮಗನನ್ನು ಹೆಗಲಮೇಲೆ ಹೊತ್ತುಕೊಂಡು ಕಾಡುದಾರಿಯಲ್ಲಿ ಓಡಿ ರಕ್ಷಿಸಿದ ಆ ಮೂವರು ಸ್ಥಳೀಯರ ಧರ್ಮವನ್ನೇಕೆ ನಾವು ಪ್ರಸ್ತಾಪಿಸುತ್ತಿಲ್ಲ. ದಾರಿಯುದ್ದಕ್ಕೂ ಬಿಸ್ಮಿಲ್ಲಾ ಬಿಸ್ಮಿಲ್ಲಾ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಸ್ವಂತ ಸೋದರರಂತೆ ನಮ್ಮನ್ನು ರಕ್ಷಿಸಿದರು ಎಂದು ಆ ತಾಯಿಯೇ ಹೇಳಿದ್ದನ್ನು ನಿರ್ಲಕ್ಷಿಸಿ ಕೇವಲ ಭಯೋತ್ಪಾದಕರ ದೇಹಕ್ಕಂಟಿದ ಧರ್ಮದ ನೆಪದಲ್ಲಿ ಇಡೀ ಆ ಧರ್ಮವನ್ನೇ ದ್ವೇಷದ ತಕ್ಕಡಿಗೆ ತಳ್ಳುವುದಾದರೆ ಸೈಯದ್ ಹುಸೇನ್ ಸತ್ತದ್ದು ಯಾವ ಧರ್ಮಕ್ಕಾಗಿ? ಒಳ್ಳೆಯವರು ಮತ್ತು ಕೆಟ್ಟವರು ಎಲ್ಲ ಕಡೆಯೂ ಇರುತ್ತಾರೆ. ಒಳ್ಳೆಯವರನ್ನು ಸ್ಮರಿಸಬೇಕು, ಕೆಟ್ಟವರನ್ನು ಧಿಕ್ಕರಿಸಬೇಕು. ಇದರಲ್ಲಿ ಧರ್ಮಕ್ಕಾಗಲಿ, ಜಾತಿ-ಭಾಷೆ-ಪ್ರಾದೇಶಿಕತೆಗಾಗಲಿ ಯಾವುದೇ ಪಾತ್ರವಿಲ್ಲ. ನಮಗೆ ತುರ್ತಾಗಿ ಅರ್ಥವಾಬೇಕಿರುವ ಸತ್ಯ ಇಷ್ಟೆ…
ಕೊಲೆಪಾತಕರಿಗೆ ಕೊಲೆ ಮಾಡಲು ಧರ್ಮ ಒಂದು ನೆಪವಷ್ಟೆ. ಧರ್ಮದ ಹೆಸರಿನಲ್ಲಿ ಮನುಷ್ಯಪ್ರಜ್ಞೆಯನ್ನು ಕಳೆದುಕೊಂಡು ನಾವೂ ಅವರಂತಾಗಬೇಕೆ? ಒಂದು ಸಂಗತಿ ಮರೆಯದಿರೋಣ, ಭಯೋತ್ಪಾದಕನಿಗೆ ಧರ್ಮವಿರಬಹುದು; ಆದರೆ, ಭಯೋತ್ಪಾದನೆಗೆ ಧರ್ಮವಿಲ್ಲ. ಇದ್ದಿದ್ದರೆ ಮಸೀದಿಗಳೂ ಭಯೋತ್ಪಾದಕರ ಬಾಂಬುಗಳಿಗೆ ಆಹುತಿಯಾಗುತ್ತಿರಲಿಲ್ಲ.
ವಿಪರ್ಯಾಸ ಏನು ಗೊತ್ತಾ? ಇಂತಹ ಬಹುದೊಡ್ಡ ವೈಫಲ್ಯಕ್ಕೆ ಕಾರಣರಾದವರನ್ನು ಆಕ್ರೋಶದಿಂದ ಪ್ರಶ್ನಿಸಬೇಕಿದ್ದ ನಮ್ಮನ್ನು ಧರ್ಮದ ವ್ಯಾಖ್ಯಾನೆಯಲ್ಲಿ ತಲ್ಲೀನರಾಗುವಂತೆ ಮಾಡಿದ್ದಾರೆ. ಇದೇ ಅಲ್ಲವಾ ಅವರ ಗೆಲುವು…..
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




