ಸಿದ್ದು ಲಿಂಗಾಯತರ ಪರವೋ ವಿರುದ್ಧವೋ?

4 years ago

ಸಿದ್ದು ಲಿಂಗಾಯತರ ಪರವೋ ವಿರುದ್ಧವೋ?

ಬೆಂಗಳೂರು: ಸಿದ್ದರಾಮಯ್ಯ ಅವರೇ, ವೀರಶೈವ – ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ. ಈಗ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. #ಲಿಂಗಾಯತವಿರೋಧಿಸಿದ್ದರಾಮಯ್ಯ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಬಿಜೆಪಿ ಟ್ವೀಟ್ ಮಾಡಿದ್ದು, ವಾಸ್ತವ ಸಂಗತಿ ಏನು ಎಂಬ ಸಂಗತಿ ಕುರಿತು ಚರ್ಚೆ ನಡೆಯುವ ಅಗತ್ಯವಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ವೀರಶೈವ – ಲಿಂಗಾಯತರಲ್ಲಿ ಒಡಕನ್ನು ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು. ಆದರೆ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದ ಸಂದರ್ಭದಲ್ಲಿ ಲಿಂಗಾಯತರು ಮತ್ತು ವೀರಶೈವರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೆ ಏರಿತು. ವಿಶೇಷವಾಗಿ ಪಂಚಪೀಠಗಳು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಬೆಂಬಲಿಸಲಿಲ್ಲ. ಇದರೊಂದಿಗೆ ಬಹುತೇಕ ಲಿಂಗಾಯತ ಮಠಗಳು ಕೂಡ ಅಂತರ ಕಾಯ್ದುಕೊಂಡವು.

ಆದರೆ ವಾಸ್ತವ ಸಂಗತಿಯೆಂದರೆ, ಸಿದ್ದರಾಮಯ್ಯ ವೀರಶೈವ – ಲಿಂಗಾಯತರಲ್ಲಿರುವ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ ಎಂದು ಸಲಹೆಕೊಟ್ಟದ್ದು ಮಾತ್ರವಲ್ಲದೆ ತಮ್ಮ ಆಡಳಿತದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಪ್ರಸ್ತಾವನೆ ಕುರಿತು ಮೌನಕ್ಕೆ ಜಾರಿದೆ. ಪ್ರತ್ಯೇಕ ಧರ್ಮ ಸ್ಥಾಪನೆಯಾದರೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಸಿಕ್ಕು, ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತರಿಗೆ ವಿಶೇಷ ಸವಲತ್ತುಗಳು ಸಿಗಲಿವೆ. ಆದರೆ, ಇದನ್ನು ಅರಿಯದ ಬಹುತೇಕ ವೀರಶೈವ ಮತ್ತು ಕೆಲವು ಲಿಂಗಾಯತ ಮಠಾಧೀಶರು ಈ ಹೋರಾಟದ ವಿರುದ್ಧ ಇದ್ದಾರೆ. ಇದರ ಸದುಪಯೋಗಪಡೆದುಕೊಳ್ಳುತ್ತಿರುವ ಬಿಜೆಪಿ ಇದೇ ಒಡಕನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡಿದೆ.

ಲಿಂಗಾಯತ ಮತ್ತು ವೀರಶೈವ ಸಮುದಾಯದ ಬಡವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸೇರಿದಂತೆ ಇನ್ನಿತರ ಲಾಭಗಳು ಸಿಗಲು ಅವಕಾಶ ಮಾಡಿಕೊಡುವ ಪ್ರತ್ಯೇಕ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯನ್ನು ಈ ಸಮುದಾಯದವರು ಅರಿಯಬೇಕಿದೆ.

Leave a Reply