ನಾಮಫಲಕಗಳಲ್ಲಷ್ಟೇ ಕನ್ನಡ ಕಡ್ಡಾಯ ಮಾಡಿದರೆ ಸಾಕೇ?

3 years ago

ನಾಮಫಲಕಗಳಲ್ಲೇನೋ ಕನ್ನಡ ಬಂದಿತು. ಆದರೆ, ಬಹಳಷ್ಟು ಮಳಿಗೆಗಳು ಅಂಗಡಿಗಳಲ್ಲಿ ಇನ್ನೂ ಹಲವಾರು ಫಲಕಗಳು ಕೇವಲ ಆಂಗ್ಲ ಭಾಷೆಯಲ್ಲಿಯೇ ಇವೆ. ನಗರದ ಉದ್ಯಾನವನಗಳಲ್ಲಿ ಹಿಂದಿ ಭಾಷೆಯಲ್ಲಿ ಮತ್ತು ತೆಲುಗು ಭಾಷೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುವವರ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉದ್ಯಾನವನಗಳಲ್ಲಿ ಕನ್ನಡವಿನ್ನು ಮಾಯವಾಗುವಂತಹ ದಿನಗಳು ಬರಬಹುದು. ಆದುದರಿಂದ ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿಯೇ ಮಾತನಾಡುವಂತೆ ಜಾಗೃತಿಯನ್ನ ಮೂಡಿಸುವಂತಹ ಅವಶ್ಯಕತೆಯೂ ಇದೆ.

ವ್ಯವಹಾರದಲ್ಲೂ ಸಹ ಕನ್ನಡ ಭಾಷೆ ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಕಾಣಲು ಸಾಧ್ಯವಿಲ್ಲ. ಬಹಳಷ್ಟು ಅಂಗಡಿ ಮತ್ತು ಮಳಿಗೆಗಳಲ್ಲಿ ಉತ್ತರ ಭಾರತೀಯರ ಹಿಂದಿ ಭಾಷೆಯಲ್ಲಿಯೇ ಮಾತನಾಡುವಂತಹ ಜನಗಳಿಗೂ ಕಡಿಮೆ ಇಲ್ಲ. ನಮ್ಮ ಭಾಷೆ ಬಂದರೂ ಸಹ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡುವಂತಹ ನಮ್ಮ ಕನ್ನಡಿಗರಿಗೆ ಏನು ಕೊರತೆ ಇಲ್ಲ. ಆದುದರಿಂದ ವ್ಯವಹಾರದಲ್ಲೂ ಸಹ ಕನ್ನಡ ಭಾಷೆ ಉಳಿಸಬೇಕಾದದ್ದು ಅನಿವಾರ್ಯವಾಗಿದೆ. ಇಲ್ಲಿಯೂ ಸಹ ಜಾಗೃತಿಯ ಅವಶ್ಯಕತೆ ಇದೆ.

ಮನೆಯ ಮಾತು, ಮನದ ಮಾತು, ಮಾರುಕಟ್ಟೆಯ ಮಾತು, ಕನ್ನಡವಾಗಲೇಬೇಕು. ಶಿಕ್ಷಣದಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲೂ ಸಹ ಸರ್ಕಾರಗಳ ಪ್ರಯತ್ನ ನಿರಂತರವಾಗಿ ಸಾಗಬೇಕು. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಹುದ್ದೆಗಳನ್ನು ನೀಡುವಂತಹ ಡಾ.ಸರೋಜಿನಿ ಮಹಿಷಿಯ ಪರಿಷ್ಕೃತ ವರದಿ ಮಂಡನೆ ಯಾಗುವುದರ ಜೊತೆಗೆ ಕೇಂದ್ರ ಸರ್ಕಾರ ಆಯಾ ರಾಜ್ಯದ ಜನರಿಗೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಶೇ.80ರಷ್ಟು ಮೀಸಲಿಡುವ ಮಸೂದೆಯನ್ನು ಮಂಡನೆ ಮಾಡುವಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ಒತ್ತಡವನ್ನ ಹಾಕಿ ಮುಂದಿನ ದಿನಗಳಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದರೆ ಮಾತ್ರವೇ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರನ್ನು ಕಾಣಲು ಸಾಧ್ಯವಿರುತ್ತದೆ.

ಇಲ್ಲದಿದ್ದರೆ ಬ್ಯಾಂಕುಗಳಲ್ಲಿ ಮತ್ತು ವಿವಿಧ ಕೇಂದ್ರದ ಇಲಾಖೆಗಳಲ್ಲಿ ನಮ್ಮದಲ್ಲದ ಭಾಷೆಯನ್ನ ಮಾತನಾಡುತ್ತಾ ನಮ್ಮದಲ್ಲದ ಭಾಷೆಯನ್ನ ಪ್ರತಿಕ್ಷಣವೂ ಕೇಳುತ್ತಲೇ ಇರಬೇಕಾಗುತ್ತದೆ. ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಲೇ ಇರಬೇಕಾಗುತ್ತದೆ. ಇವೆಲ್ಲವೂ ಕನ್ನಡಿಗರ ಬದುಕಿನ ಪ್ರಶ್ನೆ ಆಗಿರುತ್ತದೆ. ಎಲ್ಲಿಯ ತನಕ ಕನ್ನಡ ಭಾಷೆ ಅನ್ನದ ಭಾಷೆಯ ಆಗುವುದಿಲ್ಲ ಅಲ್ಲಿಯತನಕ ಈ ಭಾಷೆಯನ್ನ ಎಲ್ಲರೂ ಸಂಪೂರ್ಣವಾಗಿ ಪ್ರೀತಿಸುವುದಿಲ್ಲ. ಅದಕ್ಕಾಗಿ ಕನ್ನಡ ಭಾಷೆಯನ್ನ ಅನ್ನದ ಭಾಷೆಯನ್ನಾಗಿಸಬೇಕು. ಉದ್ಯೋಗ ಮತ್ತು ಶಿಕ್ಷಣ ಹಾಗೂ ಸವಲತ್ತು ಬೇಕೆಂದರೆ ಕನ್ನಡವನ್ನ ಕಲಿಯಲೇಬೇಕೆಂಬ ಕಾನೂನು ಹಾಗೂ ವಾತಾವರಣವನ್ನು ನಿರ್ಮಾಣ ಮಾಡಬೇಕು.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply