ಮದುವೆ, ಜಾತಕ, ವಾಸ್ತು, ಗೃಹಪ್ರವೇಶದ ಮೂಢನಂಬಿಕೆಗಳು

2 years ago

ಮೌಢ್ಯದ ಬಗೆಗೆ ಅರಿವು ಮೂಡಿಸಬೇಕಲ್ಲವೇ?

ಸಮಾಜದಲ್ಲಿ ಹೆಚ್ಚಾಗಿ ಅಂದರೆ ಕುಟುಂಬದಲ್ಲಿ ನಡೆಯುವ ಸಂಪ್ರಾದಾಯ ಹೆಸರಿನಲ್ಲಿ ನಡೆಯುವ ಜಾತಕ, ವಾಸ್ತು, ಗೃಹ ಪ್ರವೇಶ ಮೊದಲಾದ ವೇಳೆ ಮೂಢನಂಬಿಕೆಗಳನ್ನು ಆಚರಿಸಲಾಗುತ್ತದೆ. ಮೊದಲು ಜಾತಕ ಬಗೆ ವಿಮರ್ಶೆ ಮಾಡೋಣ. ಸುಮಾರು 30/40 ವರ್ಷಗಳ ಹಿಂದೆ ಮದುವೆ ಸಂಧರ್ಭದಲ್ಲಿ ಹೆಚ್ಚಿನದಾಗಿ ರಕ್ತ ಸಂಬಂದಗಳಲ್ಲಿ ನಡೆಯುತ್ತಿತ್ತು. ಆಗ ಈ ಜಾತಕ ಹೆಸರು ಬಲ ಏನು ನೋಡುತ್ತಿರಲಿಲ್ಲ, ಸಂಬಂಧ ಮುಖ್ಯ ಎ೦ದೂ ಮದುವೆಗಳನ್ನು ಮಾಡುತ್ತಿದ್ದರು. ಆದರೆ ವೈದಿಕರು ಹಾಗೂ ವೈಶ್ಯರು ಮಾತ್ರ ಜಾತಕದ ಬಗೆಗೆ ಮಾತಾನಾಡುತ್ತಿದ್ದರು. ಇದು ವಾಸ್ತವ ಹೌದು.

ಆದರೆ ಇತಿಹಾಸದಲ್ಲಿ ನೋಡಿದರು ಸಹಾ ರಾಜರ ಮಕ್ಕಳು ಇನ್ನೊಬ್ಬ ರಾಜರ ಮಕ್ಕಳೊಂದಿಗೆ ಸಂಬಂದ ಬೆಳೆಸುತ್ತಿದ್ದರು. ಕಾರಣ ಶ್ರತೃಗಳು ದಾಳಿ ಮಾಡಿದರೆ ಸಂಬಂಧ ಮಾಡಿದ ರಾಜನು ಸಹ ಸಹಾಯ ಮಾಡಬಹುದು ಎಂದೂ ಸಂಬಂಧ ಬೆಳೆಸುತ್ತಿದ್ದರೆ ಹೊರತು ಜಾತಕ ನೋಡುತ್ತಿರಲಿಲ್ಲ.

ಇನ್ನು ಹೇಳಬೇಕಾದರೆ ಯುವರಾಜರು ತಮಗೆ ಬೇಕಾದ ಹೆಣ್ಣುನ್ನು ಮದುವೆ ಮಾಡಿಕೊಳ್ಳುತ್ತಿದ್ದರು. ಹೆಣ್ಣಿನ ಸಂಬಂಧಿಕರಿಗೆ ಒಪ್ಪಿಗೆ ಇರಲಿ ಇಲ್ಲದೆ ಇರಲಿ ವಿವಾಹ ನಡೆಯುತ್ತಿತ್ತು. ಕೆಲವು ಸಂಧರ್ಭದಲ್ಲಿ ಬಲತ್ಕಾರದಿಂದಲೂ ಮಾಡಿಕೊಳ್ಳುತ್ತಿದ್ದರು. ಅಥವಾ ಪ್ರೀತಿಸಿ ಸಹಾ ಮದುವೆಗಳು ನಡೆಯುತ್ತಿದ್ದವು ಹೊರತು ಜಾತಕ ನೋಡಿ ಅಲ್ಲ. ಅದರಲ್ಲೂ ರಾಜರು ಹಲವಾರು ಹೆಣ್ಣು ಮಕ್ಕಳನ್ನು ಮದುವೆ ಆದ ಉದಾಹರಣೆ ಇದೆ. ಇಲ್ಲಿ ಜಾತಕ ಮುಖ್ಯ ಎನ್ನಿಸುತ್ತಿರಲಿಲ್ಲ.

ಇನ್ನು ಹಿಂದೂ ಧರ್ಮೀಯರ ಪ್ರಕಾರ ಪುರಾಣ ಕಥೆಗಳನ್ನು ನೋಡಿದಾಗಲೂ ಸಹಾ ಸ್ವಯ೦ವರ ಪದ್ಧತಿ ಅಸ್ತಿತ್ವದಲ್ಲಿತ್ತು. ಪ್ರೀತಿಸಿ ಮದುವೆಗಳು ಹಾಗೂ ರಾಕ್ಷಸ ಪ್ರವೃತಿ (ಬಲಾತ್ಕಾರ) ಪದ್ಧತಿಗಳು ಕಂಡುಬರುತ್ತವೆಯೇ ಹೊರತು ಇಲ್ಲಿ ಜಾತಕ ನೋಡಿ ಹೆಸರು ಬಲ ನೋಡಿ ಮದುವೆಗಳು ಕಾಣುವುದಿಲ್ಲ. ಆದರೆ ಇತ್ತೀಚೆಗೆ 25 ವರ್ಷಗಳ ಈಚೆಗೆ ಎಲ್ಲಾ ಜನಾಂಗದಲ್ಲೂ ಸಹ ಜಾತಕ ಹೆಸರು ಬಲ ನೋಡುವ ಪದ್ಧತಿ ಹೆಚ್ಚಾಗುತ್ತಿದೆ. ಇದರಿಂದ ಹೆಣ್ಣು-ಗಂಡು ಮನೆಯ ಹಿರಿಯರಿಗೆ ಹಾಗೂ ಗಂಡು – ಹೆಣ್ಣಿಗೆ ಒಪ್ಪಿತ ರಾದರೂ ಜಾತಕ ಹೆಸರು ಬಲ ಸರಿಯಾಗಿ ಕೂಡಿ ಬಂದಿಲ್ಲ ಎಂದೂ ಮದುವೆಗಳು ಮುರಿದು ಬೀಳುತ್ತಿವೆ. ಇದೆಲ್ಲಾ ಬೇಕಾ?

ಯಾವ ಧರ್ಮದಲ್ಲೂ ಇಂತಹ ಮೌಢ್ಯ ಕಾಣುವುದಿಲ್ಲ. ಆದರೆ ಪುರೋಹಿತಶಾಹಿ ಸೃಷ್ಟಿಸಿದ ಈ ಪಂಚಾಂಗದ ಮೇಲೆ ಬಹುಸಂಖ್ಯಾತರು ಅವಲಂಬನೆ ಆಗುತ್ತಿರುವುದು ಮೌಢ್ಯತೆ / ಮುರ್ಖತನ ಅಲ್ಲವೇ? ಇದರಿಂದ ಎಷ್ಟೊ ಹೆಣ್ಣು-ಗಂಡು ಮಕ್ಕಳಿಗೆ ವಿವಾಹಗಳು ಆಗದೇ ಇರುವುದು ಕಂಡು ಬರುತ್ತದೆ. ಜಾತಕ ಹೆಸರು ಬಲದಿಂದ ಆದಾಗ ಕುಟುಂಬಗಳು ಸರಿ ಇವೆಯಾ ? ಇದನ್ನು ವಿಮರ್ಶೆ ಮಾಡಬೇಕಲ್ಲವೆ? ಇಲ್ಲಿ ಕುಟುಂಬದಲ್ಲಿ ಯಾವ ಬಲವು ಬೇಕಾಗಿಲ್ಲ, ದಂಪತಿ ಹೊಂದಾಣಿಕೆಯಿಂದ ಅರ್ಥ ಮಾಡಿಕೊಂಡು ಹೋದರೆ ಮಾತ್ರ ಸುಖಿಕುಟುಂಬ ಆಗಲು ಸಾಧ್ಯ.

ಪುರೋಹಿತಶಾಹಿಗಳ ಮಾತುಗಳನ್ನು ಕೇಳುತ್ತಾ ಹೋದರೆ ಆ ದೋಷ ಇದೆ ಈ ದೋಷ ಇದೆ ಎಂದೂ ಖರ್ಚಿನ ದಾರಿ ತೋರಿಸಿ ನಿಮ್ಮನ್ನು ಮಂಗಗಳನ್ನು ಮಾಡುವುದು ಇದೆ ಎಂಬುದು ಅರ್ಥ ಮಾಡಿಕೊಳ್ಳಬೇಕಾಗಿದೆ.

ಇನ್ನು ವಾಸ್ತು ವಿಷಯಕ್ಕೆ ಬಂದರೆ ಸುಮಾರು 40/50 ವರ್ಷಗಳ ಹಿಂದಿನ ಯಾವ ಮನೆಯಾದರೂ ನೋಡಿ ಇವರು ಹೇಳುವಂತೆ ವಾಸ್ತು ಇದೆಯಾ ಎಂದರೆ ಯಾವುದು ಇಲ್ಲ. ಜಾಗವನ್ನು ನೋಡಿ ತಮಗೆ ಅನುಕೂಲವಾಗುವಂತೆ ಮನೆ ಕಟ್ಟಿಕೊಂಡಿದ್ದಾರೆ. ಉದಾ: ನಮ್ಮ ಪೂರ್ವಜರು ಕಟ್ಟಿದ ಮನೆ ವಾಸ್ತುವನ್ನು ಹೇಳುವರ ಪ್ರಕಾರ ಯಾವುದು ಇರಲಿಲ್ಲ. ಆದರೂ ನಮಗಿಂತ ಚೆನ್ನಾಗಿ ಬದುಕಿ ಬಾಳಿದವರು ಅಂದ ಮೇಲೆ ಈಗ ಮನೆ ಕಟ್ಟಲು ವಾಸ್ತುವೇ ಮುಖ್ಯ ಎಂಬ ಕೂಗೂ ಕೇಳಿಬರುತ್ತದೆ. ಇನ್ನು ಒಂದು ಪರಿಕ್ಷೆ ಮಾಡಿ ಮನೆ ಕಟ್ಟುವಾಗ ವಾಸ್ತು ಹೇಳುವರ ನಾಲ್ಕು ಅಥವ ಐದು ಮಂದಿ ಕಂಡು ವಾಸ್ತು ಪ್ರಕಾರ ನಕ್ಷೆ ಹಾಕಿಸಿಕೊಳ್ಳಿ. ಅವರು ಐದು ಜನ ಹಾಕಿಕೊಟ್ಟ ನಕ್ಷೆ ಒಂದೇ ರೀತಿಯಲ್ಲಿ ಇರುವುದಿಲ್ಲ.

ಇನ್ನು ಹೇಳಬೇಕಾದರೆ, ವಾಸ್ತು ಪ್ರಕಾರವೇ ಕಟ್ಟಿಸಿ ಮನೆ ನೋಡಲು ಬರುವವರು ಸಹಾ ನಾಲ್ವರು ಹೆಸರು ಇಡುತ್ತಾರೆ. ಹಾಗೇ ಇರಬೇಕಾಗಿತ್ತು, ಈ ವಾಸ್ತು ಸರಿ ಇಲ್ಲ ಎ೦ದೂ ಹುಳ ಬಿಡುವರು ಇರುತ್ತಾರೆ. ಇನ್ನು ಕೆಲವು ವರ್ಷ ಹೋದರೆ ಏನಾದರೂ ಕುಟುಂಬದಲ್ಲಿ ಸಮಸ್ಯೆ ಬಂದರೆ ಆಗಲೂ ನಿಮಗೆ ಜ್ಯೋತಿಷಿಗಳು ಹುಳ ಬಿಡುತ್ತಾರೆ. ಮನೆಯ ವಾಸ್ತು ಸರಿ ಇಲ್ಲ ಎಂದು ನೀವು ಅವರ ಮಾತಿಗೆ ಒತ್ತುಕೊಟ್ಟರೆ ಮನೆಯನ್ನು ಕೆಡವಿಸುತ್ತಾರೆ. ಇಲ್ಲ ಎಂದರೆ ಬಾಗಿಲುಗಳನ್ನು / ಕಿಟಕಿಗಳನ್ನು ಬದಲಾಯಿಸಿಲು ಹೇಳಿ ನಿಮ್ಮಲ್ಲಿರುವ ಸಮಸ್ಯೆಗೆ ಮತ್ತೊಂದು ಹಣ ಖರ್ಚಿನ ಸಮಸ್ಯೆ ತಂದು ಒಡ್ಡುತ್ತಾರೆ.

ನಮ್ಮ ಮನೆಯಲ್ಲಿನ ಸಮಸ್ಯೆಗಳ ಬಗೆ ಸರಿಯಾದ ಮಾರ್ಗದಲ್ಲಿ ಆಲೋಚಿಸಿ ಹೆಜ್ಜೆ ಇಟ್ಟರೆ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದೇ ಹೊರತು ಕಿಟಕಿ ಬಾಗಿಲುಗಳು ಗೋಡೆಗಳು ಏನು ಮಾಡುವುದಿಲ್ಲ. ಇದೊಂದು ಮನೋರೋಗವೇ ಹೊರತು ವಾಸ್ತವ ಅಲ್ಲ, ವಾಸ್ತು ಎಂಬುದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳುಬೇಕೆಂದರೆ ಮನೆಗೆ ಬೆಳಕು ಗಾಳಿ ಬರುವ ರೀತಿಯಲ್ಲಿ ಕಟ್ಟಿಕೊಂಡರೇ ಸಾಕು.

ನಮಗೆ ಮನೆ ಯಾವ ರೀತಿ ಕಟ್ಟಿಕೊಳ್ಳಬೇಕು ಎಂದೂ ಮನವರಿಕೆ ಆಗದೆ ಇದ್ದರೆ ಸೀವಿಲ್ ಇಂಜನೀಯರಿಗೆ ನಮಗೆ ಇರುವ ಮನೆ ಕಲ್ಪನೆ ಬಗೆ ಹೇಳಿದ್ದರೆ ಇಂಜನೀಯರರು ಸೂಕ್ತವಾದ ಪ್ಲಾನ್ ಹಾಕಿ ಕೊಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡಾಗ ವಾಸ್ತು ಎಂಬ ಭ್ರಮೆಯಿಂದ ಹೊರಬರಲು ಸಾಧ್ಯ. ನಂತರವೂ ಸಹ ನಮಗೆ ಬರುವ ಸಮಸ್ಯೆಗಳ ಬಗ್ಗೆ ನಾವೇ ಯೋಚಿಸಿದರೆ ಒಳ್ಳೆಯದು ವಾಸ್ತು ಪಂಚಾಂಗದವರ ಹತ್ತಿರ ಹೋದರೆ ನಿಮ್ಮ ಕಥೆ ಮುಗಿಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇನ್ನೊಂದು ಮೌಢ್ಯ ಎಂದರೆ ಗೃಹ ಪ್ರವೇಶ. ಇದರ ಬಗ್ಗೆ ಕೆಲವು ದಶಕಗಳ ಹಿಂದೆ ನೋಡಿದರೆ ಬಹುಸಂಖ್ಯಾತ ಜನಾಂಗದವರು ಮಾಡುತ್ತಿದ್ದ ಗೃಹ ಪ್ರವೇಶವನ್ನು ನೋಡಿದಾಗ ಮನೆಯ ಮಹಿಳೆಯರು ಹೊಸ ಒಲೆಯ ಮೇಲೆ ಹಾಲನ್ನು ಉಕ್ಕಿಸಿ. ಗೋವು / ಹಸುನ್ನು ಮನೆ ಒಳಗೆ ಕರೆದುಕೊಂಡು ಅದಕ್ಕೆ ಅಕ್ಕಿ ಬೆಲ್ಲ ಇತ್ಯಾದಿ ನೀಡಿ, ತಮ್ಮ ಬಂಧುಗಳಿಗೆ ಊಟೋಪಚಾರ ಮಾಡಿ ಗೃಹ ಪ್ರವೇಶಕ್ಕೆ ತೆರೆ ಎಳೆಯುತ್ತಿದ್ದರು.

ಆದರೆ ಇತ್ತೀಚೆಗೆ ಕರಕುಶಲ ಕರ್ಮಿಗಳು ಅಂದರೆ ಟೈಲರ್ ಗಳು ಕಾರ್ಪೆಂಟರ್ ಗಳು ಕ್ಷೌರಿಕರು ಹೊಸ ಹೊಸ ಡಿಜೈನುಗಳನ್ನು ಕಲಿತುಕೊಡಂತೆ ಅಥವಾ ಡಿಜೈನರುಗಳು ಸೃಷ್ಟಿಸಿದಂತೆ ಪುರೋಹಿತ ವರ್ಗವು ಸಹ ಸುಮಾರು ಕೆಲವಾರು ದಶಕಗಳ ಹಿಂದೆ ಇದ್ದಂತ ತಮ್ಮ ವೃತ್ತಿಯನ್ನು ಹೊಸ ಹೊಸ ಕಲೆಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಮೊದಲು ನವಗ್ರಹ ಪೂಜೆ ಒಂದು ಇತ್ತು. ಬರಬರುತ್ತಾ ಸತ್ಯನಾರಾಯಣ ಪೂಜೆ ಸೇರಿಕೊಂಡಿತು. ಈಗ ಹೋಮ-ಹವನ ಸೇರ್ಪಡೆ ಆಗಿವೆ.

ಬಹುಸಂಖ್ಯಾತರಲ್ಲಿ (ಶೂದ್ರರು) ಅನುಕೂಲಸ್ಥರು ಅಂದರೆ ಅರ್ಥಿಕವಾಗಿ ಉತ್ತಮವಾಗಿ ಇರುವರು ವೈದಿಕರು ವೈಶ್ಯರು ಮಾತ್ರ ಗೃಹ ಪ್ರವೇಶದ ಪ್ರಭಾವ ಇವರ ಮೇಲೆ ಬಿದ್ದು ಇವರು ಆರಂಭ ಮಾಡಿದ್ದರು. ಇವರಲ್ಲಿ ಇದ್ದಂತ ನಂಬಿಕೆಯೊ ಅಥಾವ ಪ್ರತಿಷ್ಟೆಯ ಸಂಕೇತವೊ ಅಥವಾ ಮೌಢ್ಯತೆಯೊ ಗೊತ್ತಿಲ್ಲ. ಅರ್ಥಿಕವಾಗಿ ಉತ್ತಮರಾಗಿದ್ದವರು ನವಗ್ರಹ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ಆರಂಭಗೊಂಡು ಈಗ ಹೋಮ ಹವನ ಮಾಡಿಸಲು ಹೆಜ್ಜೆ ಇಟ್ಟಿದ್ದಾರೆ.

ಈ ಪ್ರಭಾವ ಈಗ ಮಧ್ಯಮ ವರ್ಗ ಬಡವರ ಮೇಲೂ ಪ್ರಭಾವ ಬೀರಿದೆ. ಇದೊಂದು ಅಂಟು ರೋಗ ಇದ್ದಂತೆ. ಏಕೆಂದರೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಅಂಟು ಜಾಡ್ಯಕ್ಕೆ ಬಿದ್ದಂತೆ ಆಗಿದೆ. ಈ ಪೂಜೆ ಕಾರ್ಯಗಳಿಂದ ಏನು ಪವಾಡ ಬೀರುತ್ತದೆ ಅಂದರೆ ಅದು ಗೊತ್ತಿಲ್ಲ. ಈ ಕಾರ್ಯಗಳಿಂದ ಲಾಭ ಏನು ಎಂದರೆ ಒಳ್ಳೆದು ಆಗುತ್ತದೆ ಅಷ್ಟೆ ಗೊತ್ತು ಇನ್ನೇನು ಇಲ್ಲ.

ಇನ್ನು ಕೆಲವರು ಇದು ನಮ್ಮ ಸಂಪ್ರಾದಾಯ ಎಂದೂ ತೇಲಿ ಬಿಡುತ್ತಾರೆ ಹೊರತು ಇದರಿಂದ ಆಗುವ ಲಾಭ-ನಷ್ಟದ ಬಗೆ ಚಿಂತನೆ ಮಾಡುವುದಿಲ್ಲ. ಇದೊಂದು ಮಾನಸಿಕ ಕಾಯಿಲೆ ರೂಪ ತಾಳುತ್ತಿದೆ. ಇನ್ನೂ ಒಂದು ಪ್ರಶ್ನೆ ಬರುತ್ತದೆ ಪ್ರಜ್ಞಾವಂತರನ್ನು ಅಂಧ ಭಕ್ತರು ಪ್ರಶ್ನೆ ಮಾಡುವುದು! ಏನೆಂದರೆ ನಿಮ್ಮ ಮನೆಯಲ್ಲಿ ಈ ಕಾರ್ಯ ನಡೆಯುದಿಲ್ಲವೇ? ಈ ಪ್ರಶ್ನೆ ಸಹಜ ಎಲ್ಲಾ ಕುಟುಂಬದಲ್ಲೂ ಪ್ರಜ್ಞಾವಂತರು ಹಾಗೆಯೇ ಅಂಧ ಭಕ್ತರು ಇರುತ್ತಾರೆ. ಆದರೆ ಇಲ್ಲಿ ಅಂಧ ಭಕ್ತರ ಸಂಖ್ಯೆ ಹೆಚ್ಚು ಇರುವುದರಿಂದ ಅದರಲ್ಲೂ ಮಹಿಳೆಯರಲ್ಲಿ ಹುಟ್ಟಿರುವ ಮೌಢ್ಯ ಹಾಗೂ ಹಠಮಾರಿತನ. ಅವರ ಅಜ್ಞಾನದ ಕಾರಣದಿಂದ ಈ ಕುಟುಂಬಗಳಲ್ಲಿ ಪ್ರಜ್ಞಾವಂತರು ತಟಸ್ಥ ಸ್ಥಿತಿ ತಲುಪುವಂತೆ ಆಗಿದೆ.

ದಲಿತ ಸ್ವಾಮೀಜಿ ಒಬ್ಬರು ಅಥವ ನಿಜಗುಣಸ್ವಾಮೀಜಿಗಳು ಹೇಳುವಂತೆ ಮನೆಗೆ ಹಾಕಿರುವ ಪಿಲ್ಲರ್ ಗಳು ಸಿಮೆಂಟ್ ಹಾಗೂ ಇಜೀ೦ನೀಯರ್ ಪ್ಲಾನ್ ಮೇಲೆ ಈ ನಂಬಿಕೆ ಇಲ್ಲ, ಅಂಧ ಭಕ್ತರಿಗೆ ಪುರೋಹಿತರು ಕಟ್ಟುವ ದಾರ ಅಥವಾ ಬೂದು ಕುಂಬಳಕಾಯಿ ಮೇಲೆ ನಂಬಿಕೆ ಇಡುತ್ತಾರೆ ಹೊರತು ವೈಜ್ಞಾನಿಕವಾಗಿ ಚಿಂತನೆ ಮಾಡುವುದಿಲ್ಲ ಎಂಬುದು ಸತ್ಯ.

ಈ ಪುರೊಹಿತಶಾಹಿಯ ಗೃಹಪ್ರವೇಶದಿಂದ ಯಾವುದಾದರೂ ಪವಾಡ ನಡಿದಿದೆಯಾ ಎಂದರೆ ಅದಕ್ಕೆ ಉತ್ತರ ಇಲ್ಲ, ಒಳ್ಳೆದು ಆಗುತ್ತದೆ ಇದೇ ವಿತಂಡವಾದ ಕೇಳಿ ಬರುತ್ತದೆ. ಬೇರೆ ವೃತ್ತಿ ಆಧುನಿಕ ಶೈಲಿ ಎಂದೂ ಒಪ್ಪಿಕೊಳ್ಳಬಹುದು. ಆದರೆ ಪೂಜೆ ಪುನಸ್ಕಾರದಿಂದ ಏನೋ ಒಂದು ಮೂಢನಂಬಿಕೆ ಅಷ್ಟೆ ಬಿಟ್ಟರೆ ಇನ್ನೆನು ಇಲ್ಲ ಎಂಬುದು ವೈಚಾರಿಕ ಸ್ವಾಮಿಗಳು ಅರಿವು ಮೂಡಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಒಪ್ಪಿಕೊಳ್ಳವ ಮನಸ್ಸು ಇಲ್ಲದೆ ಇರುವುದು ವೈಜ್ಞಾನಿಕತೆ ವೈಚಾರಿಕತೆಯ ಜ್ಞಾನದ ಕೊರತೆ ಎನ್ನಬಹುದು ಅಷ್ಟೆ.

ಸಮಾಜದಲ್ಲಿ ಯಾವಾಗ ವೈಜ್ಞಾನಿಕತೆ ವೈಚಾರಿಕತೆ ಹೆಚ್ಚಾಗಿ ಬೆಳೆಯುತ್ತದೋ ಆಗ ಪ್ರಜ್ಞಾವಂತರ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಕುಟು೦ಬದಲ್ಲಿ ಬರಬಹುದು. ಇದರಿಂದ ಲಾಭ ಯಾರಿಗೆ ಹೋಗುತ್ತದೆ ಎಂಬುದು ಮುಖ್ಯವಲ್ಲ, ಆದರೆ ಇದರಿಂದ ಕುಟುಂಬಸ್ಥರಿಗೆ ಲಾಭವೇನು ಎಂದು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ.

  • N.S.ಈಶ್ವರಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲೂಕು

Leave a Reply