ಜನಸ್ನೇಹಿ ಹಾಗೂ ಪರಿಣಾಮಕಾರಿಯಾಗಿ ‘ಸಹಾಯ 3.0’ ತಂತ್ರಾಂಶ ಅಭಿವೃದ್ಧಿ: ಕೃಷ್ಣ ಬೈರೇಗೌಡ

1 day ago

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕರ ದೂರುಗಳ ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿ, ಪಾರದರ್ಶಕ ಹಾಗೂ ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ‘ಸಹಾಯ 3.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದಲ್ಲಿ ‘ಸಹಾಯ 3.0’ ತಂತ್ರಾಂಶ ಹಾಗೂ ರಸ್ತೆ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RIMS) ಕುರಿತು ಇಂದು ಜಿಬಿಎ ಕೇಂದ್ರ ಕಛೇರಿಯ ನೌಕರರ ಭವನದಲ್ಲಿ ನಾಗರಿಕರೊಂದಿಗೆ ನಡೆದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ‘ಸಹಾಯ 2.0’ ತಂತ್ರಾಂಶದಲ್ಲಿ ಈಗಾಗಲೇ ಕೆಲವು ಬದಲಾವಣೆಗಳನ್ನು ತರಲಾಗಿದೆ. ಇದೀಗ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ, ಅವರು ನೀಡುವ ಮೌಲ್ಯಯುತ ಸಲಹೆಗಳನ್ನು ಅಳವಡಿಸಿಕೊಂಡು ‘ಸಹಾಯ 3.0’ ತಂತ್ರಾಂಶವನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದರು.

ನಾಗರಿಕರು ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಫೋಟೋ ಮತ್ತು ಲೊಕೇಶನ್ ಜೊತೆಗೆ ಧ್ವನಿ ಸಂದೇಶ (Voice Note) ಅಪ್‌ಲೋಡ್ ಮಾಡುವ ಸೌಲಭ್ಯವೂ ಇರಬೇಕು. ಇದರಿಂದ ದೂರುದಾರರಿಗೆ ತಮ್ಮ ದೂರುಗಳನ್ನು ದಾಖಲಿಸಲು ಮತ್ತಷ್ಟು ಅನುಕೂಲವಾಗಲಿದ್ದು, ದೂರು ಬರೆಯಲು ತೆಗೆದುಕೊಳ್ಳುವ ಸಮಯವೂ ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಇನ್ನೂ ಹಲವು ಅಗತ್ಯತೆಗಳಿದ್ದು, ಸಾರ್ವಜನಿಕರು ಹಾಗೂ ತಜ್ಞರಿಂದ ಉತ್ತಮ ಸಲಹೆ-ಆಲೋಚನೆಗಳನ್ನು ಸ್ವೀಕರಿಸಿ ‘ಸಹಾಯ 3.0’ ತಂತ್ರಾಂಶವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದು ಈ ಸಮಾಲೋಚನಾ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಕಾಮಗಾರಿಗಳ ಪೋರ್ಟಲ್ ಅಭಿವೃದ್ಧಿ: ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ನಮ್ಮ ರಾಜ್ಯದ ಅತ್ಯಂತ ಹಳೆಯ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗಾಗಿ ಎಲ್ಲಾ ಇಲಾಖೆಗಳನ್ನೂ ಒಳಗೊಂಡ ಒಂದು ಸಮಗ್ರ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ರಸ್ತೆ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RIMS) ಎಂಬ ಹೆಸರಿನಲ್ಲಿ ದತ್ತಾಂಶಗಳನ್ನು ಸ್ವೀಕರಿಸಲಾಗುತ್ತಿದೆ. ಶೀಘ್ರದಲ್ಲೇ ಈ ಪೋರ್ಟಲ್‌ಗೆ ಸೂಕ್ತವಾದ ಹೆಸರನ್ನು ಇಡಲಾಗುವುದು ಎಂದರು.

ರಸ್ತೆ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ವಿದ್ಯುತ್ ಕೇಬಲ್ ಅಳವಡಿಕೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಪೋರ್ಟಲ್ ಸಹಕಾರಿಯಾಗಬೇಕು. ಯಾವುದೇ ರಸ್ತೆ ಅಥವಾ ಮೂಲಸೌಕರ್ಯ ಕಾಮಗಾರಿ ಆರಂಭವಾಗುವ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವಂತಿರಬೇಕು. ಇದರಿಂದ ಸಾರ್ವಜನಿಕರು ತಮ್ಮ ವೈಯಕ್ತಿಕ ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ರಸ್ತೆ ಗುಂಡಿ, ಬೀದಿ ದೀಪದಂತಹ ಪ್ರತಿಯೊಂದು ಸಮಸ್ಯೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೇರೆ ಬೇರೆ ತಂತ್ರಾಂಶಗಳ ಅಗತ್ಯವಿಲ್ಲ. ಒಂದೇ ತಂತ್ರಾಂಶದ ಮೂಲಕ ಸಾರ್ವಜನಿಕರಿಂದ ದೂರು ಸ್ವೀಕರಿಸುವುದು, ದೂರು ಪರಿಹರಿಸುವುದು, ಕಾಮಗಾರಿಗಳ ಯೋಜನೆ ಹಾಗೂ ಪ್ರಗತಿ ಪರಿಶೀಲನೆ, ದತ್ತಾಂಶ ನಿರ್ವಹಣೆ ಮತ್ತು ಬ್ಯಾಕ್‌ಎಂಡ್‌ನಲ್ಲಿ ಪಾವತಿ (Payment Generation) ಪ್ರಕ್ರಿಯೆಗಳನ್ನು ಕೈಗೊಳ್ಳುವಂತಿರಬೇಕು ಎಂದರು.

ಈ ವೇಳೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್., ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಉಪ ಆಯುಕ್ತರಾದ ಗಾಯತ್ರಿ ನಾಯ್ಕ್, ನಾಗರಿಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply