ಅಪರೂಪದ ಶ್ರೇಷ್ಠ ನಟ ಅನಂತನಾಗ್

8 months ago

ಸಾಹಿತ್ಯ, ಸಂಗೀತದ, ವ್ಯಾಸಂಗದ ಅಭಿರುಚಿಯನ್ನು ಹೊಂದಿರುವ ಕನ್ನಡದ ಶ್ರೇಷ್ಠ ಮತ್ತು ಅಪರೂಪದ ನಟ ಅನಂತನಾಗ್ ರವರು ಕನ್ನಡ ಭಾಷೆಯಲ್ಲದೆ ದೇಶದ ಅನೇಕ ಭಾಷೆಗಳಲ್ಲಿ ತಮ್ಮ ನಟನೆಯ ಮೂಲಕ ಗಮನವನ್ನು ಸೆಳೆದಿದ್ದಾರೆ. ಹಿಂದಿ ಭಾಷೆಯಲ್ಲಿಯೂ ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮ ಪ್ರಬುದ್ಧ ಅಭಿನಯದ ಮೂಲಕ ರಾಷ್ಟ್ರದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಇವರು ರಂಗಭೂಮಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ನಂತರ ಹಿಂದಿ ಚಿತ್ರರಂಗದಲ್ಲಿ ಮತ್ತು ಕೊಂಕಣಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರದಲ್ಲಿ ಅಪರೂಪವೆನಿಸುವ ಮತ್ತು ಜನಪ್ರಿಯವಾಗಿರುವ ನೂರಾರು ಚಲನಚಿತ್ರಗಳಲ್ಲಿ ನಟಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಏಕಕಾಲದಲ್ಲಿ ಸಂಭಾಷಣೆಗಳಿಗೆ ಅನುಗುಣವಾಗಿ ತಮ್ಮ ಮುಖದಲ್ಲಿನ ಭಾವನೆಗಳನ್ನು ನಟನೆಯ ಮೂಲಕ ವ್ಯಕ್ತಪಡಿಸಬಲ್ಲ ಅಪರೂಪದ ನಟ. ಇವರು ಅಭಿನಯಿಸಿರುವ ಕನ್ನಡ ಚಲನಚಿತ್ರಗಳು ಮಹಿಳೆಯರ ಆಕರ್ಷಣೆಗೆ ಗುರಿಯಾಗಿವೆ. ಇವರ ಚಿತ್ರಗಳ ವೀಕ್ಷಣೆಗೆ ಮಹಿಳೆಯರ ಪ್ರೇಕ್ಷಕರ ಸಂಖ್ಯೆ ಅತಿಹೆಚ್ಚಿನ ಪ್ರಮಾಣದಲ್ಲಿ ಚಿತ್ರಮಂದಿರಗಳ ಕಡೆಗೆ ಇಂದಿಗೂ ಧಾವಿಸುತ್ತಾರೆ.

ನವಿರಾದ ಹಾಸ್ಯ, ವ್ಯಂಗ್ಯ, ಗಾಂಭೀರ್ಯ ಎಲ್ಲವನ್ನು ತಮ್ಮ ನಟನೆಯ ಮೂಲಕ ಪ್ರದರ್ಶಿಸಬಲ್ಲ ವಿಶೇಷ ನಟ ಇವರು. ಇವರು ಅಭಿನಯಿಸಿದ ಅನೇಕ ಚಲನಚಿತ್ರಗಳು ಇಂದಿಗೂ ಸಹ ಜನರ ಮನಸಿನಲ್ಲಿ ಉಳಿದಿವೆ.

ನಾಲ್ಕು ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು ನಾಯಕ ನಟರಾಗಿ ಅಭಿನಯಿಸಿರುವ ಚಿತ್ರಗಳು ಎಷ್ಟು ಜನ ಪ್ರಿಯವೋ ಅಷ್ಟೇ ಇವರು ನಟರಾಗಿ ನಟಿಸಿರುವ ಚಿತ್ರಗಳು ಸಹ ಜನಪ್ರಿಯವಾಗಿವೆ. ಕಾರಣ ಆ ಚಿತ್ರದಲ್ಲಿ ಇವರು ನಟಿಸಿದ್ದರೆ ಆ ಚಿತ್ರದ ಮಹತ್ವ ಮತ್ತು ಗೌರವ ಹೆಚ್ಚಾಗಿ ಇರುತ್ತದೆ. ಇಡೀ ಚಿತ್ರ ಅವರ ಪಾತ್ರದ ಕೇಂದ್ರೀಕೃತವಾಗಿರುತ್ತದೆ.

ಬಯಲುದಾರಿ, ಹಂಸಗೀತೆ, ಚಂದನದ ಗೊಂಬೆ, ಸಂಕಲ್ಪ, ನಾ ನಿನ್ನ ಬಿಡಲಾರೆ ಮುಂತಾದವುಗಳು ಇಂದಿಗೂ ಸಹ ಪ್ರೇಕ್ಷಕರ ಮೆಚ್ಚುಗೆಯ ಚಿತ್ರಗಳಾಗಿವೆ. ಈ ಸಾಲಿಗೆ ಮತ್ತಷ್ಟು ಚಿತ್ರಗಳು ಇವೆ, ಇವುಗಳ ಜೊತೆಗೆ ಕಾಸರಗೋಡು ಕನ್ನಡ ಪ್ರಾಥಮಿಕ ಶಾಲೆ, ಗೋದಿ ಮೈಬಣ್ಣ, ಮುಂಗಾರು ಮಳೆ ಚಿತ್ರಗಳಲ್ಲಿ ಇವರ ಅಮೋಘ ಅಭಿನಯ ಸದಾ ಕಾಲ ಪ್ರೇಕ್ಷಕರ ಕಣ್ಮುಂದೆ ಬಂದು ನಿಲ್ಲುತ್ತದೆ. ಗಣೇಶನ ಮದುವೆ ಮುಂತಾದಂತಹ ಸಾಲು ಸಾಲು ಗಂಭೀರ ಹಾಸ್ಯಮಯವಾದ ಚಿತ್ರಗಳು ಇವರ ಅಭಿನಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತು. ಹೀಗೆ ಒಬ್ಬ ನಟ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಾ ನಾಯಕ ನಟರಾಗಿ ಪೋಷಕ ನಟರಾಗಿ ಕನ್ನಡ ಚಲನಚಿತ್ರ ರಂಗವನ್ನು ಹಲವಾರು ದಶಕಗಳ ಕಾಲ ತಮ್ಮ ಅಭಿನಯದ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ದೇಶದ ಹಿರಿಯ ನಟರಾಗಿರುವ ಕಮಲ ಹಾಸನ್ ರವರು ಅನಂತ್ ನಾಗ್ ರವರ ಅಭಿನಯಕ್ಕೆ ಹೃದಯಪೂರ್ವ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಶುದ್ಧವಾದ ಕನ್ನಡದ ಭಾಷೆ ಮತ್ತು ಸಮಯ ಪ್ರಜ್ಞೆಯ ಸಂಭಾಷಣೆಯ ಹಾಗೂ ಭಾವಪೂರ್ಣ ಅಭಿನಯ ಇವರ ವಿಶೇಷತೆಗಳು.

ಚಲನಚಿತ್ರ ರಂಗವಲ್ಲದೆ ರಾಜಕೀಯ ರಂಗದಲ್ಲೂ ಸಾಕಷ್ಟು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಜನತಾಪಕ್ಷ ಮತ್ತು ಜನತಾದಳದ ಪ್ರಮುಖ ಪ್ರಚಾರಕರಾಗಿ ನಾಡಿನಾದ್ಯಂತ ಇವರ ಸಹೋದರ ಶಂಕರ್ ನಾಗ್ ರವರೊಂದಿಗೆ ಪ್ರವಾಸವನ್ನ ಮಾಡಿದ್ದಾರೆ. 1983, 1985 ಮತ್ತು 1994ರಲ್ಲಿ ಜನತಾ ಪಕ್ಷ ಮತ್ತು ಜನತಾದಳ ಸರ್ಕಾರಗಳು ಅಧಿಕಾರಕ್ಕೆ ಬರುವಲ್ಲಿ ಇವರ ಶ್ರಮವೂ ಇದೆ.

ವಿಧಾನಪರಿಷತ್ತಿನ ಸದಸ್ಯರಾಗಿ ಒಂದು ಅವಧಿಗೆ ಮತ್ತು 1994ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ನಂತರ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ. ಬಾಂಡ್ ಯೋಜನೆಯ ಮೂಲಕ ಬೆಂಗಳೂರು ನಗರದ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಯೋಜನೆಗೆ ಇವರ ಕಾಲದಲ್ಲಿ ಚಾಲನೆ ದೊರೆಯಿತು. ನಾಡಿನ ಹಲವಾರು ಕ್ರೀಡಾಪಟುಗಳು ಮತ್ತು ಸಾಹಿತಿ ಕಲಾವಿದರಿಗೆ ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನಗಳನ್ನ ಕಲ್ಪಿಸಿಕೊಟ್ಟು ಅವರ ಸೇವೆಗೆ ಮನ್ನಣೆಯನ್ನ ನೀಡಿರುತ್ತಾರೆ.

ಇವರ ಸಾಧನೆ ಮತ್ತು ಅಭಿನಯಕ್ಕೆ ದೊರೆತಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಾಜ್ಯದ ಬಹುಜನರ ಬಹುದಿನದ ನಿರೀಕ್ಷೆಯಾಗಿದ್ದ ಪದ್ಮಭೂಷಣ ಪ್ರಶಸ್ತಿ 2025 ರಲ್ಲಿ ಕೇಂದ್ರ ಸರ್ಕಾರ ಇವರಿಗೆ ನೀಡುವುದರ ಮೂಲಕ ಕನ್ನಡಿಗರಿಗೆ ಸಂತೋಷವನ್ನುಂಟು ಮಾಡಿದ್ದಾರೆ.

1948ರ ಸೆಪ್ಟೆಂಬರ್ 4ರಂದು ಹುಟ್ಟಿರುವ ಇವರು ತಮ್ಮ 78ರ ವಯಸ್ಸಿನಲ್ಲೂ ಸಹ ಕ್ರಿಯಾಶೀಲವಾಗಿ ಮತ್ತು ಚಟುವಟಿಕೆಯಿಂದ ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆ ಮತ್ತಷ್ಟು ದಶಕಗಳ ಕಾಲ ಕನ್ನಡ ನಾಡಿನ ಸಾಂಸ್ಕೃತಿಕ ಲೋಕಕ್ಕೆ ದೊರಕಲಿ ಎಂದು ಕೋರಿಕೊಳ್ಳೋಣ.

– ಕೆ ಎಸ್ ನಾಗರಾಜ್, ಬೆಂಗಳೂರುz

Leave a Reply