ಮನೆ ನಿವೇಶನ, ವಸತಿ ಯೋಜನೆ ಜಾರಿಗೊಳಿಸಲು ಒತ್ತಾಯ

1 year ago

ಸಿಪಿಐಎಂ ಜಿಲ್ಲಾ ಸಮ್ಮೇಳನದದಲ್ಲಿ ನಿರ್ಣಯ ಅಂಗೀಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ವಸತಿ ರಹಿತರು ಮನೆ, ನಿವೇಶನಕ್ಕಾಗಿ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಸಿಪಿಐಎಂ ಪಕ್ಷ ಈ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ ಎಂದು ಸಿಪಿಐಎಂ ಹೇಳಿದೆ.

ಸಿಪಿಐಎಂ 24 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ, ಕಾಮ್ರೇಡ್ ಸೀತಾರಾಮ ಯೆಚೂರಿ ವೇದಿಕೆ, ಡಾನ್ ಬಾಸ್ಕೊ ಹಾಲ್, ಮಂಗಳೂರು ಇಲ್ಲಿ ನಡೆದ ಸಮಾವೇಶದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ವಿಷಾದದ ಸಂಗತಿಯೆಂದರೆ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಯಾವುದೇ ವಸತಿ ಯೋಜನೆ ಮಂಗಳೂರು ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಯಾವುದೇ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೊಳಿಸಿಲ್ಲ. ನಿವೇಶನ ರಹಿತರ ಪಟ್ಟಿ ಏರುತ್ತಿದ್ದರೂ ಆಳುವವರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ನಿವೇಶನ ರಹಿತರ ಪಟ್ಟಿ ಇದೆ, ಕೆಲವು ಪಂಚಾಯತ್ ಗಳಲ್ಲಿ ಅರ್ಹ ನಿವೇಶನ ರಹಿತರ ಪಟ್ಟಿಯನ್ನೂ ಸಿದ್ದಪಡಿಸಿಲ್ಲ. ಕೆಲವು ಗ್ರಾಮ ಪಂಚಾಯತ್ ಗಳು ಒಂದಿಷ್ಟು ಜಮೀನನ್ನು ವಸತಿ ರಹಿತರಿಗೆ ಎಂದು ಗುರುತು ಮಾಡಿದೆ, ಅಂತಹ ಜಮೀನುಗಳು ಕೆಲವೆಡೆ ಅತಿಕ್ರಮಣಕ್ಕೆ, ಅನ್ಯ ಉದ್ದೇಶಕ್ಕೆ ಬಳಕೆಯಾಗಿದೆ. ಬಹುತೇಕ ಗ್ರಾಮ ಪಂಚಾಯತ್ ಗಳು ವಸತಿ ಯೋಜನೆಗೆ ಜಮೀನು ಗುರುತಿಸುವ ಕಾರ್ಯವನ್ನೂ ಮಾಡಿಲ್ಲ. ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಕನಿಷ್ಟ ಒಂದು ವಸತಿ ಯೋಜನೆಯನ್ನೂ ಜಾರಿಗೊಳಿಸದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂದು ಸ್ವತಹ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಹೇಳಿರುವುದು ಗಮನಾರ್ಹ ಎಂದು ಅಭಿಪ್ರಾಯ ಪಟ್ಟಿದೆ.

ನಾವು ನಡೆಸಿದ ಹೋರಾಟದ ಫಲವಾಗಿ ಇಡ್ಯಾ ಗ್ರಾಮದಲ್ಲಿ ಜಿ + 3 ಮಾದರಿಯಲ್ಲಿ ಆರು ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಯೋಜನೆ ಆರೇಳು ವರ್ಷದ ಹಿಂದೆ ಆರಂಭಿಸಲಾಯಿತು. ಅದೀಗ ಅರ್ಧದಲ್ಲಿ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದೆ.

ಇಡ್ಯಾ ಗ್ರಾಮದಲ್ಲಿ ಅರ್ಧದಲ್ಲಿ ನಿಂತಿರುವ ವಸತಿ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಬೇಕು, ಹಾಗೆಯೆ, ಜಿಲ್ಲೆಯಾದ್ಯಂತ ಅರ್ಹ ವಸತಿ ರಹಿತರ ಪಟ್ಟಿ ತಕ್ಷಣ ಸಿದ್ದಪಡಿಸಬೇಕು, ಜಮೀನುಗಳನ್ನು ಪಂಚಾಯತ್ ಮಟ್ಟದಲ್ಲಿ ಆದ್ಯತೆಯಿಂದ ಗುರುತಿಸಿ ಮೀಸಲಿಡಬೇಕು, ಈಗ ಇರುವ ವಸತಿ ರಹಿತರ ಸಂಖ್ಯೆಗೆ ಅನುಗುಣವಾಗಿ ವಸತಿ ಯೋಜನೆಗಳನ್ನು ಜಿಲ್ಲೆಯ ಪ್ರಾಯೋಗಿಕ ಸ್ಥಿತಿಗತಿಯ ಆಧಾರದಲ್ಲಿ ಜಾರಿಗೆ ತರಬೇಕು ಎಂದು ಯೆಯ್ಯಾಡಿಯಲ್ಲಿ ಎಂದು ನವಂಬರ್ 17, 18, 19 ರಂದು ಮಂಗಳೂರು ನಗರದಲ್ಲಿ ಆಯೋಜಿಸಲಾದ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಆಗ್ರಹಿಸುತ್ತದೆ. ಈ ಕುರಿತು ನಿರ್ಣಯವನ್ನು ಅಂಗೀಕರಿಸಿದೆ.

Leave a Reply