ಸಿಪಿಐಎಂ ದ.ಕ. ಜಿಲ್ಲಾ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ
ಮಂಗಳೂರು: ಕಳೆದ ಸುಮಾರು ಮೂರು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಕೋಮುವಾದಿ ಚಟುವಟಿಕೆ, ಸಂಘರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆ ನಲುಗಿ ಹೋಗಿದೆ. ಕೋಮುವಾದದ ಪ್ರಯೋಗ ಶಾಲೆ ಎಂಬ ಕುಖ್ಯಾತಿಗೂ ಒಳಗಾಗಿದೆ. ದಕ್ಷಿಣ ಭಾರತದ ಉಳಿದ ಯಾವುದೇ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ಕೋಮು ಹಿಂಸೆ, ಸಾವು, ನೋವುಗಳು ಬಹುಷ ನಡೆದಿಲ್ಲ. ಸಂಘಪರಿವಾರವು ರಾಜಕೀಯ ಅಧಿಕಾರ ಹಿಡಿಯಲು ವ್ಯವಸ್ಥಿತವಾಗಿ ನಡೆಸಿದ ಮತೀಯವಾದಿ ಚಟುವಟಿಕೆಗಳ ಪರಿಣಾಮ ಇಂದು ಜಿಲ್ಲೆ ಈ ಸ್ಥಿತಿಗೆ ತಲುಪಿದೆ. ಅಲ್ಪಸಂಖ್ಯಾತ ಸಮುದಾಯಗಳು ಇದರ ಪ್ರಧಾನ ಸಂತ್ರಸ್ತರಾದರೆ, ಒಟ್ಟಾರೆ ಇಡೀ ಜಿಲ್ಲೆಯ ಜನಸಮುದಾಯವೇ ಇದರ ದುಷ್ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಸಿಪಿಐಎಂ ಹೇಳಿದೆ.
ಸಿಪಿಐಎಂ 24 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ, ಕಾಮ್ರೇಡ್ ಸೀತಾರಾಮ ಯೆಚೂರಿ ವೇದಿಕೆ, ಡಾನ್ ಬಾಸ್ಕೊ ಹಾಲ್, ಮಂಗಳೂರು ಇಲ್ಲಿ ನಡೆದ ಸಮಾವೇಶದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
ಮುಸ್ಲಿಮರು, ಕ್ರೈಸ್ತರು ಗಣನೀಯ ಪ್ರಮಾಣದಲ್ಲಿರುವ ಈ ಜಿಲ್ಲೆಯಲ್ಲಿ ಹಿಂದು ಸಮುದಾಯದೊಂದಿಗೆ ಅವರು ಬೆರೆತು ಬಾಳಿದ, ಪರಸ್ಪರ ಕೊಡುಕೊಳ್ಳುವಿಕೆಯ ವಿಶಿಷ್ಟ ಸಂಸ್ಕೃತಿ ಈ ನೆಲದ್ದು. ಇಂದು ಅಂತಹ ಸೌಹಾರ್ದತೆಯ ಬದುಕಿಗೆ ಚೇತರಿಸಲಾಗದ ಪೆಟ್ಟು ಬಿದ್ದಿದೆ. ಬಹುಸಂಖ್ಯಾತ ಕೋಮುವಾದ ಉತ್ತುಂಗ ತಲುಪಿದಂತೆ, ಅದಕ್ಕೆ ಪ್ರತಿಕ್ರಿಯೆ ಹೆಸರಿನಲ್ಲಿ ಅಲ್ಪಸಂಖ್ಯಾತ ಮತೀಯವಾದವೂ ತಲೆಯೆತ್ತಿದೆ, ಬಲಗೊಳ್ಳುತ್ತಿದೆ. ಇದು ಬಹುಸಂಖ್ಯಾತ ಕೋಮುವಾದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಈ ಬೆಳವಣಿಗೆಗಳು ಜಿಲ್ಲೆಯಲ್ಲಿ ಶಾಂತಿಯುತ ಬದುಕಿಗೆ ದೊಡ್ಡ ಬೆದರಿಕೆ ಒಡ್ಡಿದೆ. ಇಂತಹ ಮತೀಯ ಅಸಹಿಷ್ಣುತೆ, ಕೋಮುವಾದದ ಬೆಳವಣಿಗೆ ಕಡಿವಾಣ ಹಾಕಲು ಸರಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ, ಸಾಮರಸ್ಯ ಬಲಪಡಿಸಲು ಯೋಜಿತ ಕೆಲಸಗಳನ್ನು ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಆದರೆ, ಸರಕಾರ ಈ ನಿಟ್ಟಿನಲ್ಲಿ ನಿಷ್ಕ್ರಿಯವಾಗಿದೆ. ಕೋಮುವಾದವನ್ನು ಹಿಮ್ಮೆಟ್ಟಿಸಲು ಬೇಕಾದ ದೃಢ ತೀರ್ಮಾನಗಳು ಜಿಲ್ಲಾಡಳಿತದಿಂದ ಕಾಣುತ್ತಿಲ್ಲ. ಬದಲಿಗೆ ಕೋಮುಶಕ್ತಿಗಳಿಗೆ, ಮತೀಯವಾದಿಗಳಿಗೆ ಶರಣಾಗುವ, ಪೂರಕವಾಗಿ ನಡೆದುಕೊಳ್ಳುವ ವಿಷಾದಕರ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನು ಎದುರಿಸಲು ಬೇಕಾದ ರಾಜಕೀಯ ಇಚ್ಚಾಶಕ್ತಿಯನ್ನು ಆಳುವವರು ತೋರಿಸಲುತ್ತಿಲ್ಲ. ಇದು ವಿಷಾದಕರ ವಿದ್ಯಮಾನ ಎಂದಿದೆ.
ಕೋಮುವಾದಿ ಹಿನ್ನಲೆಯ ಸರಕಾರ ಅಧಿಕಾರ ಕಳೆದುಕೊಂಡು, ಜಾತ್ಯತೀತ ನೆಲೆಗಟ್ಟಿನ ಸರಕಾರ ಆಡಳಿತಕ್ಕೆ ಏರಿರುವ ಸಂದರ್ಭದಲ್ಲಿ ಜಾತ್ಯತೀತ ಜನವಿಭಾಗದ ನಿರೀಕ್ಷೆಗಳು ಈ ರೀತಿ ಹುಸಿಹೋಗಬಾರದು. ಸರಕಾರ ಎಚ್ಚೆತ್ತುಕೊಳ್ಳಬೇಕು, ಕೋಮುವಾದವನ್ನು ಹಿಮ್ಮೆಟ್ಟಿಸಲು, ಸಾಮರಸ್ಯ ನೆಲೆಗೊಳಿಸಲು ದೃಢವಾದ, ಯೋಜನಾ ಬದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಂ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.




