ಮನಸ್ಸಿನಲ್ಲಿ ಮೊಳಕೆ ಮೂಡಿದ ಕನಸೊಂದು ಮೊದಲ ಹೆಜ್ಜೆಯಾಗಿದ್ದು ಸರಿಯಾಗಿ ಇಪ್ಪತ್ತೆರಡು ವರ್ಷಗಳ ಹಿಂದಿನ ಇದೇ ದಿನದಂದು 02.02.2002 ‘ನಟನ’ ಸಂಸ್ಥೆ ನೋಂದಾಯಿತ ಸಂಸ್ಥೆಯಾಗಿ ಅಧಿಕೃತವಾಗಿ ಕೆಲಸ ಆರಂಭಿಸಿದ ದಿನ. ಆ ರಿಜಿಸ್ಟ್ರೇಷನ್ ಪತ್ರದ ಡೇಟ್ ನೋಡಿ ಅಚ್ಚರಿಯೊಂದಿಗೆ ಮನಸ್ಸಿನಲ್ಲಿ ಸಣ್ಣ ನಗೆ, ಸಂಭ್ರಮದ ಜತೆಗೆ ಮನ ಮೆಲುಕು ಹಾಕಲಾರಂಭಿಸಿತು. ನೆನಪಿನ ಸಾಗರದ ನೌಕೆಯ ನಾವಿಕ ನಾನೀಗ…
ನಾಗಮಂಗಲ – ಮಂಡ್ಯ-ನೀನಾಸಂ- ರಂಗಾಯಣ – ಸಿನಿಮಾ – ಟಿವಿ – ಧಾರಾವಾಹಿ –ಸಾಕ್ಷ್ಯಚಿತ್ರ – ಜಾಹೀರಾತು ಅಭಿನಯ.. ನಲ್ವತ್ತಮೂರು ವರ್ಷಗಳ ರಂಗಯಾನ, ಇಪ್ಪತ್ತೆಂಟು ವರ್ಷಗಳ ಸಿನಿಮಾ ಯಾನದೊಂದಿಗೆ… ‘ನಟನ’ಕ್ಕೆ ಈ ವರ್ಷ ಇಪ್ಪತ್ತೆರಡನೇ ವರ್ಷದ ಸಡಗರ. 2002 ನನ್ನ ಪಾಲಿಗೆ ಸ್ವಲ್ಪ ವಿಶೇಷವೇ.
ಪ್ರಪಂಚವನ್ನು ಕಾಡಿದ ಎರಡೂ ಲಾಕ್ಡೌನ್ಗಳಲ್ಲಿ ಕೂಡ ಆನ್ಲೈನ್ ರಂಗ ತರಬೇತಿ ಶಿಬಿರ ಮಾಡಿದೆವೇ ಹೊರತು ಚಟುವಟಿಕೆಯನ್ನು ಪೂರ್ಣ ನಿಲ್ಲಿಸಲಿಲ್ಲ!
ನಟನ ಶುರುವಾದ ಮೊದಲ ವರ್ಷದಿಂದ ಈ ಅಷ್ಟೂ ವರ್ಷಗಳಲ್ಲಿ ಒಂದೇ ಒಂದು ವರ್ಷವೂ ಹೊಸ ನಾಟಕಗಳ ತಯಾರಿ, ಪ್ರದರ್ಶನವನ್ನು ಮಕ್ಕಳ ನಾಟಕಗಳನ್ನು, ಪ್ರವಾಸ ಮಾಡುವುದನ್ನು ನಿಲ್ಲಿಸಿಲ್ಲ!
ಏರುಗತಿಯಲ್ಲೇ ಸಾಗಿತ್ತು ಬದುಕು. ಅದೆಷ್ಟು ಮಕ್ಕಳಿಗೆ ಯುವಕರಿಗೆ ಬದುಕಾಯ್ತು. ನಾನು ಲೆಕ್ಕ ಇಟ್ಟಿಲ್ಲ! ಶಿಸ್ತಿಗೆ ಹೆದರಿ ದ್ವೇಷಿಸುವವರ ಸಂಖ್ಯೆ ಕಡಿಮೆಯಿದೆ ಅನ್ನುವುದೊಂದೇ ಸಮಾಧಾನ. ಅಸಂಖ್ಯಾತ ಹಿತೈಷಿಗಳು ಜೊತೆಗಿದ್ದಾರೆ ಎನ್ನುವ ಹೆಮ್ಮೆಯೇ ಬಹಳ.
….ಈ ಯಾನದ ಪ್ರಮುಖ ಭಾಗವಾಗಿ ‘ನಟನ’ ಮೈಸೂರಿನಲ್ಲಿ ಜನ್ಮತಳೆದು ರೂಪುಗೊಳ್ಳುತ್ತಾ ಹೋದ ಕತೆ ಮಾತ್ರ ವಿಚಿತ್ರ- ವಿಸ್ಮಯಗಳ ಸಂತೆ!
ನನ್ನ ಅನುಭವಗಳನ್ನು ಹೇಳಿಕೊಳ್ಳಲೊಂದು ಮಿತ್ರಕೂಟವೊ೦ದು ಆರೋಗ್ಯವಂತ ಮನಸ್ಥಿತಿಯ ಸಮಾನಮನಸ್ಕರನ್ನು ಕಲೆಹಾಕಿ ಸ್ವಸ್ಥಸಮಾಜದತ್ತ ಚಲಿಸುವಂತೆ ಮಾಡಲು ‘ರಂಗಕ್ಷೇತ್ರ’ವನ್ನು ಆಯ್ದುಕೊಂಡ ಪರಿಣಾಮದ ಮೊತ್ತವಾಗಿ ‘ನಟನ’ ರೂಪುಗೊಂಡಿತು.
ಈ ಹಾದಿ ಖಂಡಿತವಾಗಿ ಸುಲಭದ್ದಾಗಿರಲಿಲ್ಲ. ಅದು ಪರಸ್ಪರ ‘ನಂಬಿಕೆ’ಗಳ ಕುರಿತಾಗಿದ್ದಿತ್ತು. ನಮ್ಮೊಳಗಿನ ಅಹಂಕಾರಗಳನ್ನು ಬಿಟ್ಟುಕೊಡುವ ದೊಡ್ಡ ಸವಾಲುಗಳನ್ನು ಎದುರಿಸುವದೇ ‘ಸಂಸ್ಥೆ’ಯೊಂದನ್ನು ಗಟ್ಟಿಯಾಗಿ ರೂಪಿಸುವ ಪರಿ ಎಂಬುದೀಗ ಅನುಭವದ ಮಾತು.
‘ನಟನ’ದ ಆರಂಭ ಮೈಸೂರಿನ ಕುವೆಂಪುನಗರದ ಎಂ.ಬ್ಲಾಕ್ ನಲ್ಲಿದ್ದ ನಮ್ಮ ಪುಟ್ಟ ಮನೆಯ ಮೇಲೆ ತರಗತಿಗಳಿಗಾಗಿಯೇ ಕಟ್ಟಿಸಿದ ಹಾಲ್ ನಲ್ಲಿ ಗುರುಗಳಾದ ಶ್ರೀ ನಾಗಾಭರಣ ಸರ್ ದೀಪ ಹಚ್ಚುವುದರೊಂದಿಗೆ ಆರಂಭವಾಗಿದ್ದು …ಈ 22 ವರ್ಷಗಳ ಪಕ್ಷಿನೋಟ ಮಾಡಲೇ ನನಗೆ ಒಂದೆರಡು ಗಂಟೆಗಳು ಊ..ಹೂ೦… ಒಂದೆರಡು ದಿನಗಳು ಬೇಕಾಗಬಹುದು…
ಶಿಬಿರಗಳು, ನಾಟಕ ಪ್ರದರ್ಶನಗಳು, ಒಂದಷ್ಟು ತರಗತಿಗಳು ಮಾತ್ರ ನಡೆಯುತ್ತಿತ್ತು. ಜನ ತುಂಬತೊಡಗಿದರು. ಸ್ಥಳ ಸಾಲದಾಯಿತು. ಮೊದಲ ವರ್ಷದ ಮಕ್ಕಳ ಶಿಬಿರಕ್ಕೆ ಜಾಗ ಸಾಲದೆ ಹತ್ತಿರದ ಖಾಸಗಿ ಶಾಲೆಯೊಂದಕ್ಕೆ ಮೊರೆಹೋದೆ. ಪ್ರತಿವರ್ಷವೂ ಜನ ಜಾಸ್ತಿಯಾಗಿ… ಗೋಕುಲ್ ಸ್ಕೂಲ್, KEMPS, ಸುಪ್ರೀಂ ಪಬ್ಲಿಕ್ ಸ್ಕೂಲ್, ಸಾಯಿ ಸರಸ್ವತಿ ಶಾಲೆ, ವಿಜಯ ವಿಠಲದಲ್ಲ೦ತೂ ಅದೆಷ್ಟು ವರ್ಷಗಳು, ಧ್ವನ್ಯಾಲೋಕದಲ್ಲಿ ಒಂದಷ್ಟು ವರ್ಷ, ಭಗಿನೀ ಸೇವಾ ಸಮಾಜ, ಈಗ .. ಇನ್ನಷ್ಟು ವರ್ಷಗಳು… ಅದೆಲ್ಲೆಲ್ಲೋ ರಜಾ-ಮಜಾ ಮಕ್ಕಳ ಶಿಬಿರ, ಪ್ರದರ್ಶನಗಳು ಮೈಸೂರಿನ ಗಲ್ಲಿ ಗಲ್ಲಿ ಅಲೆಯುತ್ತಿದ್ದೆ ಜಾಗಕ್ಕಾಗಿ. ನೆಲೆಯಿಲ್ಲದೆ ವರ್ಷದಿಂದ ವರ್ಷಕ್ಕೆ ಕಲಾವಿದರು, ಮಕ್ಕಳು, ಪೋಷಕರು, ಪ್ರೇಕ್ಷಕವರ್ಗ, ಹೆಚ್ಚುತ್ತಲೇ ಹೋಗುತ್ತಿತ್ತು. ಹೇಳಿಕೊಳ್ಳಲಾಗದ ಒದ್ದಾಟ ಮಿತಿ ಮೀರಿತು. ಆದರೇ ಅವತ್ತಿಗೆ ಆ ಸ್ಥಳಗಳನ್ನು ನಮಗೆ ಕೊಟ್ಟ ಆ ಎಲ್ಲಾ ಸ್ಥಳದಾನಿಗಳನ್ನು ಮನಸಾರೆ ನೆನೆಯುತ್ತೇನೆ.
‘ರಂಗ ಗ್ರಾಮ’ವೊಂದನ್ನು ಮಾಡಲು ಸಿನಿಮಾ, ಟಿ.ವಿಯಿಂದ ಬಂದ ಹಣವನ್ನೆಲ್ಲ ಕೂಡಿಸಿ ಗೊರೂರು ಪಕ್ಕದ ಕಳಲವಾಡಿಯ ಒಂದೆರಡು ಎಕರೆ ಜಾಗ ಖರೀದಿಸಿದ್ದೆ. ಆದರೆ ಮಧ್ಯವರ್ತಿಗಳ ಮೋಸದಿಂದ ತೋಟ ಊರ್ಜಿತವಾಗಲಿಲ್ಲ… ಪೆಂಗನಂತಾದೆ!
ಅಷ್ಟು ಹೊತ್ತಿಗಾಗಲೇ ನಟನ ಸಂಸ್ಥೆ ಕಾರ್ಯಶೈಲಿ, ಶಿಸ್ತಿನಿಂದ ಮೈಸೂರಿನಲ್ಲಷ್ಟೇ ಅಲ್ಲದೆ ರಾಜ್ಯದ ತುಂಬೆಲ್ಲ ಹೆಸರಾಗಿತ್ತು. ನನ್ನ ಪ್ರತಿ ಪ್ರಯೋಗಕ್ಕೂ ಜನ ಕೊಟ್ಟ ಪ್ರತಿಕ್ರಿಯೆ ಅದ್ಭುತವಾಗಿತ್ತು! .. ಅಂತೂ ನೂರೆಂಟು ಸಂಕಷ್ಟಗಳ ನಡುವೆ 2010ರ ಹೊತ್ತಿಗೆ ‘ಜಾಗ’ ಆಯಿತು.
ಗರಿ, ಬಿದಿರು, ಶೀಟು ಬಳಸಿ ಕುಟೀರ ಕಟ್ಟಿದೆ. ನೋಡಲು ಚೆಂದವಿತ್ತು!: ನಟನ ರಂಗಮಂಟಪ! ..ಆದರೆ, ತಾತ್ಕಾಲಿಕವಾದ್ದರಿಂದ ಶೀಟು – ಗರಿ ಹಾರತೊಡಗಿತು. ಉಡುಪು- ಪರಿಕರಗಳಿಗೆ ಗೆದ್ದಲು ಹತ್ತುತ್ತಿತ್ತು. ಸೌಂಡ್ ಪ್ರೂಫ್ ಇಲ್ಲದ್ದರಿಂದ ತೊಂದರೆ ಅನಿಸತೊಡಗಿತು. ಒಮ್ಮೆ ಜೋರಾಗಿ ಮಳೆ-ಗಾಳಿ ಬಂದು ಎಲ್ಲವೂ ಛಿದ್ರವಾಯಿತು.
ಮತ್ತೊಂದು ಹೋರಾಟ ಶುರು; ರಂಗಮಂದಿರ, ರಂಗಶಾಲೆ, ರಂಗ ವಿಭಾಗಗಳು, ಗ್ರಂಥಾಲಯ, ಉಡುಪು – ಪರಿಕರಗಳ ವಿಭಾಗ, ಸಂಗೀತ ಕೊಠಡಿ, ಕಚೇರಿ, ಪುಟ್ಟ ಅತಿಥಿಗೃಹ, ಶೌಚಾಲಯಗಳು ಎಲ್ಲವನ್ನೂ ಒಂದೇ ಸೂರಿನಡಿ ತರಲು ಮಾಡಿದ ‘ಸಂಕಲ್ಪ’ ಕೊನೆಗೂ ಸಫಲವಾಯಿತು.
ಈ ಸ್ಥಾವರದಷ್ಟೇ ಮುಖ್ಯ: ಜಂಗಮ.
ಅದು ಒಂದು ವರ್ಷದ ಡಿಪ್ಲೊಮಾ ರಂಗ ಶಾಲೆ, ಮಕ್ಕಳಿಗೆ ವಾರಾಂತ್ಯ ರಂಗ ಶಾಲೆ, ‘ನಟನ ಪಯಣ’ ಒಂದು ಸೀಜನಲ್ ರೆಪರ್ಟರಿ (ಪ್ರವಾಸದ ತಂಡ), ನಟನ ತಾರುಣ್ಯ, ಶಿಬಿರಗಳನ್ನು ನಡೆಸಿ ಕೊಡುವ ‘ನಟನ ಸ್ಪಂದನ’, ‘ಮಿನ್ಕಾಣ್ಕೆ ಶಿಬಿರ’ (Online ತರಗತಿಗಳು)…. ಈಗ ಎಲ್ಲ ವಿಭಾಗಗಳು ವರ್ಷವಿಡೀ ತರಬೇತಿ, ಸಂವಾದ, ವಾರಾಂತ್ಯ ರಂಗ ಪ್ರದರ್ಶನಗಳು…. ಎಲ್ಲವನ್ನೂ ಶಿಸ್ತಿನಿಂದ ನಡೆಸುತ್ತ ಸಾಗಿದ್ದೇವೆ.
ಈ ಚಲನಶೀಲತೆಗೆ ಜೊತೆಗೆ ನಿಂತವರು; ಅಸಂಖ್ಯ ಕಲಾವಿದರು, ತಂತ್ರಜ್ಞರು, ಪೋಷಕರು, ಹಿತೈಷಿಗಳು, ಪ್ರತಿ ವರ್ಷದ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಮಕ್ಕಳು ಮತ್ತು ಕಲಾ ಸಂಪನ್ಮೂಲರು..
ಇಪ್ಪತ್ತೆರಡನೇ ವರುಷದ ಸಡಗರವೆಂದರೇ ಇವತ್ತು ಸುಳ್ಯದ ರಂಗ ಮನೆಯಲ್ಲಿ ನಮ್ಮ ತಂಡದ ಮಹತ್ವದ ನಾಟಕ ‘ಕಣಿವೆಯ ಹಾಡು’ ಸಂಭ್ರಮದಿಂದ ಪ್ರದರ್ಶನ ಗೊಳ್ಳುತ್ತಿದೆ. ನಾಳೆ ‘ನಟನ’ದ ಹೊಚ್ಚ ಹೊಸ ವಿಶಿಷ್ಟ ಪ್ರಯೋಗ ಡಾ, ಶ್ರೀ ಪಾದ ಭಟ್ಟರು ನಿರ್ದೇಶಿಸಿದ ‘ಕನ್ನಡ ಕಾವ್ಯ ಕಣಜ’ ನಟನ ರಂಗಮಂದಿರದಲ್ಲಿ ಸಡಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಾಡಿದ್ದು ಅತಿಥಿ ತಂಡದ ನಾಟಕ ಪ್ರದರ್ಶನಗೊಳ್ಳುತ್ತಿದೆ. ಮಕ್ಕಳ ತಂಡದ ಮುಂದಿನ ನಾಟಕವಾಗಿ ‘ಡಾಣ ಡಂಗುರ’ ತಯಾರಾಗುತ್ತಿದೆ.
ನಿರಂತರತೆ ನಟನದ ಶಕ್ತಿ..ಕಷ್ಟಗಳು ಇಲ್ಲ ಅಂತಲ್ಲಾ, ಎದುರಿಸುವ ಶಕ್ತಿ ತುಂಬಿದ್ದೀರಿ ನೀವು. ಬರೆಯುತ್ತಾ ಹೋದಂತೆ ಕಣ್ಣಂಚಿನಲ್ಲಿ ನೀರು ತುಂಬಿ ಅಕ್ಷರಗಳು ಮಂಜಾಗುತ್ತಿದೆ. ನೀವು ನನ್ನೊಂದಿಗೆ ಇರಿ. ಒಳ್ಳೆಯದನ್ನೇ ಯೋಚಿಸುತ್ತೇನೆ. ‘ನಟನ’ ಒಳಿತನ್ನೇ ಮಾಡುತ್ತಿರುತ್ತದೆ. ಹರಸಿ
- ಮಂಡ್ಯ ರಮೇಶ್, ನಟನ



