ಕಟ್ಟೆಯಲ್ಲಿ ಜೀವತಳೆದ  ‘ನಮ್ಮ ಊರಿನ ರಸಿಕರು’

5 years ago

ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ಕೃತಿ ತೆರೆಯ ಮೇಲೆ

‘ಗೊರೂರು’ಎಂದೇ ಚಿರಪರಿಚಿತರಾಗಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ‘ನಮ್ಮ ಊರಿನ ರಸಿಕರು’ಕೃತಿ ತೆರೆಗೆ ಬರುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ, ಬ್ರಿಟಿಷ್ ರಾಜ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಮಧ್ಯದ ಈ ಕಥೆ ತನ್ನದೇ ಆದ ಕಥಾಹಂದರ ಹೊಂದಿದೆ. ಈ ಕಥೆಯು ಸಂತೋಷ, ದುಃಖ, ನವಿರಾದ ಹಾಸ್ಯ, ನಾಟಕ, ಶೋಷಣೆ, ರಾಜಕೀಯ, ನಿರೀಕ್ಷೆಗಳು, ನಿರ್ಧಾರಗಳು, ಸಂಕೀರ್ಣತೆಗಳು, ಜಾತಿವಾದ, ಅಭಿಪ್ರಾಯಗಳು, ಸ್ನೇಹ, ಸಂಬಂಧಗಳು ಮತ್ತು ಇನ್ನೂ ಅನೇಕ ಮಸಾಲಾಗಳಿಂದ ಕೂಡಿದೆ.

ಪ್ರೀತಿಯಿಂದ ಶಾಮಣ್ಣ ಎಂದು ಕರೆಯಲ್ಪಡುವ ಶಾಮ ಅಯ್ಯಂಗಾರ್ ಅವರು ಕೊಟ್ಟ ಮಾತಿಗೆ ತಪ್ಪದ ಗೋರುರು ಗ್ರಾಮದ ಪ್ರಾಮಾಣಿಕ ವ್ಯಕ್ತಿ. ಪಶ್ಚಿಮ ಘಟ್ಟದ ವೈಭವ ಸಾರುವ, ಬೆರಗುಗೊಳಿಸುವ ಸಣ್ಣ ಗ್ರಾಮವಾದ ಗೊರುರನ್ನು ಕಟ್ಟೆ ಒಟಿಟಿಯಲ್ಲಿ ಕಾಣಬಹುದು.

ಮನಕ್ಕೆ ಮುದ ನೀಡುವ ತೆಂಗಿನ ತೋಟಗಳು, ಹಸಿರು ಭತ್ತದ ಗದ್ದೆಗಳು, ದಟ್ಟ ಕಾಡುಗಳು, ರಮಣೀಯವಾದ ಜಲಪಾತ, ಹಚ್ಚ ಹಸಿರಿನಿಂದ ಆವೃತವಾದ ಮನೆಗಳು, ಹೇಮಾವತಿ ನದಿಯ ತಂಪಾದ ನೀರು, ಹುಲ್ಲಿನ ಗುಡ್ಡಗಳು, ಶ್ರೀಮಂತ ಪರಂಪರೆ, ಪಾಕಪದ್ಧತಿಗಳು ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಸಂಪತ್ತನ್ನು ಒಳಗೊಂಡ ಈ ಕತೆ ತೆರೆಯ ಮೇಲೆ ಇನ್ನಷ್ಟು ಮನೋಜ್ಞವಾಗಿ ಮೂಡಿಬರಲಿದೆ.

ಈ ನೈಸರ್ಗಿಕ ಸ್ವರ್ಗವು ತನ್ನದೇ ಆದ ಕಥೆಗಳನ್ನು ಹೊಂದಿದೆ, ಗೋರೂರು ಎನ್ನುವ ರೋಚಕ ಸ್ಥಳವನ್ನು ಮತ್ತು ಅಲ್ಲಿನ ವೈವಿದ್ಯಮಯ ಜನರನ್ನು ನೇರವಾಗಿ ಕಾಣಲು ಬಯಸಿದರೆ, ‘ನಮ್ಮ ಊರಿನ ರಸಿಕರು’ಮೂಲಕ ವಾಸ್ತವ ಪ್ರವಾಸವನ್ನು ಕೈಗೊಳ್ಳಬೇಕು.

ಶಾಮಣ್ಣ ಅತ್ಯಂತ ಸುಶಿಕ್ಷಿತ, ಉದಾರ ವ್ಯಕ್ತಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾದ ಶಾಮಣ್ಣ ಇಡೀ ಗ್ರಾಮವನ್ನು ತನ್ನ ನಿರ್ವಿವಾದದ ತೀರ್ಪಿನಿಂದ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾನೆ. ಸರಸ್ವತಿ, ಶಾಮಣ್ಣನ ಸುಂದರ ಪತ್ನಿ. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಇರುವ ಅಪರೂಪದ ಮಹಿಳೆ. ತನ್ನ ಬುದ್ಧಿವಂತಿಕೆ ಮತ್ತು ವಿಶೇಷ ಕಾಳಜಿಯಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಚತುರೆ. ಇವರಿಬ್ಬರೂ ‘ನಮ್ಮ ಊರಿನ ರಸಿಕರು’ಕಥೆಯ ಆಧಾರ ಸ್ತಂಭಗಳು.

ಪ್ರತಿ ಸಂಚಿಕೆಯು ಅಷ್ಟೇ ಮನೋಜ್ಞವಾಗಿದ್ದು, ವಿವಿಧ ಭಾವನೆಗಳು, ತಮಾಶೆಯ ಸನ್ನಿವೇಶಗಳು, ಮೂರ್ಖ ನಡವಳಿಕೆ, ಅಹಂನ ಘರ್ಷಣೆಗಳು, ಪ್ರೀತಿ, ದ್ವೇಷ, ಸೇಡು, ತಪ್ಪುಗ್ರಹಿಕೆ ಮತ್ತು ಸಾಕಷ್ಟು ಹಾಸ್ಯಮಯ ಘಟನೆಗಳಿಂದ ಕೂಡಿದೆ.

ಪ್ರತಿಯೊಂದು ಸಂಚಿಕೆಯು ಒಂದು ಸಮಸ್ಯೆಯೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಸಾಕಷ್ಟು ಗೊಂದಲ ಮತ್ತು ತಪ್ಪುಗ್ರಹಿಕೆಗಳಿರುತ್ತವೆ. ಆದರೆ ಸಂಚಿಕೆಯ ಅಂತ್ಯದ ವೇಳೆಗೆ ಗ್ರಾಮಸ್ಥರು ಸಮಸ್ಯೆಗಳನ್ನು ಚಾಣಾಕ್ಷತನದಿಂದ ಪರಿಹರಿಸುತ್ತಾರೆ. ಹಾಗೆಂದು ಎಲ್ಲಾ ಸಂಚಿಕೆಯೂ ಸುಖಾಂತ್ಯವಾಗುತ್ತದೆ ಎಂದು ಅರ್ಥವಲ್ಲ.

ಈ ಸರಣಿಯು ಜೀವನದ ಶುದ್ಧ ರೂಪಕವಾಗಿರುತ್ತದೆ ಮತ್ತು ಇದು ಒಂದು ಆಚರಣೆಯಾಗಿರುತ್ತದೆ. ಎಲ್ಲಾ ಒಂಬತ್ತು ಭಾವನೆಗಳ ಮಿಶ್ರಣವಾಗಿರುವ ಕಥೆ ಪ್ರೇಕ್ಷಕರಿಗೆ ಹೊಸ ದೃಷ್ಟಿಕೋನ ಒದಗಿಸಲಿದೆ.

 ‘ನಮ್ಮ ಊರಿನ ರಸಿಕರು’ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರಕ್ಕೆ ನಿರ್ದೇಶಕಿ, ನಂದಿತಾ ಯಾದವ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಅವರು ‘ರಾಜಸ್ಥಾನ್ ಡೈರೀಸ್‘ (ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ತೆರೆಕಂಡ ದ್ವಿಭಾಷಾ ಚಿತ್ರ) ಚಿತ್ರವನ್ನು ನಿರ್ದೇಶಿಸಿದ್ದರು. ಹಾಗೆಯೇ ರಾಜ್ಯ ಪ್ರಶಸ್ತಿ ಗೆದ್ದ ‘ರಾಜು‘ ಎನ್ನುವ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಅವರು 2 ವರ್ಷಗಳ ಕಾಲ ಡಿಫೈನ್ ಆರ್ಟ್ಸ್‌ನಲ್ಲಿ ಮನರಂಜನಾ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ವಿವಿಧ ವೆಬ್ ಕಂಟೆಂಟ್‌, ಜಿಇಸಿ ಮತ್ತು ಡಿಜಿಟಲ್ ಚಲನಚಿತ್ರಗಳನ್ನು ರಚಿಸಿ, ನಿರ್ಮಿಸಿದ್ದಾರೆ. 5 ವರ್ಷಗಳ ಕಾಲ ಕ್ರಿಯೇಟಿವ್ ಹೆಡ್ ಆಗಿ ಜೀ ಥಿಯೇಟರ್‌ನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಭಾರತದಾದ್ಯಂತ 70 ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ಚಿತ್ರೀಕರಿಸಿದ್ದಾರೆ.

ರಾಜೇಶ್‌ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಮಂಡ್ಯ ರಮೇಶ್‌, ಪಿ. ಶೇಷಾದ್ರಿ, ಶೃಂಗ, ಬಿ. ಸುರೇಶ,  ಸುನೇತ್ರಾ ಪಂಡಿತ್‌, ರಮೇಶ್‌ ಪಂಡಿತ್‌, ಸುಜಯ್‌ ಶಾಸ್ತ್ರಿ, ಸುಂದರ್‌ ವೀಣಾ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರ ತಂಡ ಚಿತ್ರದಲ್ಲಿದೆ.

ತಾಂತ್ರಿಕ ತಂಡದಲ್ಲಿ ಅಶೋಕ್‌ ಕಶ್ಯಪ್‌ (ಸಿನಿಮಾಟೋಗ್ರಾಫರ್‌), ಸುರೇಶ್ ಅರಸ್ (ಎಡಿಟಿಂಗ್), ಪ್ರಕಾಶ ಸೊಂಟಕ್ಕೆ (ಸಂಗೀತ) ಮತ್ತಿತರ ಹೆಸರಾಂತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಮಲೆನಾಡ ಪರಿಸರದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.

Leave a Reply