ಭಾರತರತ್ನ, ಪದ್ಮಶ್ರೀ, ಪದ್ಮಭೂಷಣ ಪಡೆದವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಅವಶ್ಯಕತೆ ಇರುವುದಿಲ್ಲ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಅಕಾಡೆಮಿಗಳ ಪ್ರಶಸ್ತಿಗಳನ್ನು ಪಡೆದವರು ರಾಜ್ಯೋತ್ಸವ ಪಟ್ಟಗೆ ಸೇರಬೇಕಾದ ಅವಶ್ಯಕತೆ ಇಲ್ಲ.
ಕೇಂದ್ರ ಸರ್ಕಾರವೇ ಇವರನ್ನು ಗುರುತಿಸಿ ವಿವಿಧ ಕ್ಷೇತ್ರಗಳಲ್ಲಿ ಇವರಿಗೆ ಗೌರವ ನೀಡಿರಬೇಕಾದರೆ, ಮತ್ತೆ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವುದರ ಬದಲಿಗೆ ಇಂತಹ ಪ್ರಶಸ್ತಿಗಳನ್ನು ಪಡೆದ ಸಾಧಕರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಗೌರವವನ್ನು ಸಲ್ಲಿಸಿ.
ಅದೇ ರೀತಿಯಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ಅಕಾಡೆಮಿಗಳಿಂದ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದವರನ್ನು ಮತ್ತೆ ರಾಜ್ಯೋತ್ಸವದ ಪಟ್ಟಿಗೆ ಸೇರಿಸುವುದು ಬೇಡ. ಈಗಾಗಲೇ ಅವರಿಗೆ ರಾಜ್ಯ ಮಟ್ಟದಲ್ಲಿ ಅವರು ಸಾಧನೆ ಮಾಡಿರುವ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿರುವುದರಿಂದ ಅವರ ಹೆಸರನ್ನು ಸೇರಿಸುವುದು ಸೂಕ್ತವಲ್ಲ.
ಇದರ ಬದಲಿಗೆ ಕೇಂದ್ರದ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಪ್ರಶಸ್ತಿಗಳನ್ನು ಪಡೆಯದಿರುವ ಸಾಧಕರನ್ನು ರಾಜ್ಯೋತ್ಸವ ಪಟ್ಟಿಗೆ ಸೇರಿಸಿದರೆ ಒತ್ತಡ ಕಡಿಮೆಯಾಗುತ್ತದೆ. ವಿಶೇಷವಾದ ಪ್ರಕರಣಗಳಲ್ಲಿ ಮಾತ್ರ ಸಾಧಕರನ್ನು ಗುರುತಿಸಿ ವಿಶೇಷ ಗೌರವವನ್ನು ನೀಡುವಂತಹ ಸಂಪ್ರದಾಯವನ್ನು ರಾಜ್ಯೋತ್ಸವದ ವೇದಿಕೆಯಲ್ಲಿಯೇ ಆರಂಭಿಸಿ, ಕೇಂದ್ರ ಸರ್ಕಾರದ ಪ್ರಶಸ್ತಿಗಳನ್ನು ಪಡೆದವರು, ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದವರು ಸಹ ರಾಜ್ಯೋತ್ಸವಕ್ಕೆ ಪೈಪೋಟಿ ನಡೆಸಿದರೆ ಈಗಾಗಲೇ ಜನಪ್ರಿಯರು ಮತ್ತು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾರಣದಿಂದ ಸಹಜವಾಗಿ ಆಯ್ಕೆ ಸಮಿತಿಯ ಆದ್ಯತೆಗೆ ಪಾತ್ರರಾಗುತ್ತಾರೆ.
ಸದ್ದುಗದ್ದಲವಿಲ್ಲದೆ, ಪ್ರಚಾರ ಪಡೆಯದೆ, ದುಡಿಯುವ ಸಾಧಕರ ಹೆಸರುಗಳು ಯಾರ ಕಣ್ಣಿಗೂ ಕಾಣುವುದಿಲ್ಲ. ಅಂಥವರು ಯಾವ ಗೌರವವಕ್ಕೂ ಪಾತ್ರರಾಗದೆ ಮಾಯವಾಗುತ್ತಾರೆ.
- ಕೆ.ಎಸ್. ನಾಗರಾಜ್, ಬೆಂಗಳೂರು



