ಪಾಳು ಮನೆಯಲ್ಲಿ ಐದು ಅಸ್ತಿಪಂಜರಗಳು ಪತ್ತೆ

2 years ago

ಚಿತ್ರದುರ್ಗ: ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪದ ಪಾಳು ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಪಾಳುಬಿದ್ದ ಸ್ಥಿತಿಯಲ್ಲಿರುವ ಈ ಮನೆ ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಸಿವಿಲ್ ಎಂಜಿನಿಯರ್ ಜಗನ್ನಾಥ ರೆಡ್ಡಿ ಎನ್ನುವವರಿಗೆ ಸೇರಿದೆ. ಆದರೆ, ಮನೆಯಲ್ಲಿ ಮೃತಪಟ್ಟಿರುವ ದೇಹಗಳು ಯಾರವು ಎನ್ನುವ ಖಚಿತ ಮಾಹಿತಿ ಇಲ್ಲ. ಕಳೆದ ನಾಲ್ಕೈದು ವರ್ಷದಿಂದ ಈ ಕುಟುಂಬದವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳಿವೆ ಎಂಬ ಸುದ್ದಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದಾಗ ಮನೆಯ ಪ್ರತಿ ಕೋಣೆಯಲ್ಲೂ ಮೃತಪಟ್ಟ ವ್ಯಕ್ತಿಗಳ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ.

ಪೋಸ್ಟ್ ಮಾರ್ಟ್ಂ ಪೂರ್ಣಗೊಳಿಸಿದ ನಂತರ ಅಸ್ತಿ ಪಂಜರಗಳನ್ನು ದಾವಣಗೆರೆಯಿಂದ ಆಗಮಿಸಿದ ವಿಧಿ ವಿಜ್ಞಾನ ತಜ್ಞರ ತಂಡಕ್ಕೆ ನೀಡಲಾಯಿತು. ಈ ತಂಡ ಪರಿಶೀಲನೆ ನಡೆಸುವಾಗ ತಲೆಯ ಬುರುಡೆಗಳು ಪತ್ತೆಯಾಗಿವೆ. ಮನೆಯಲ್ಲಿ ಮೃತಪಟ್ಟಿರುವವರ ಸಂಖ್ಯೆ ನಾಲ್ಕು ಅಥವಾ ಐದು ಜನ ಎಂಬುದನ್ನು ಪೊಲೀಸರು ಅಧಿಕೃತವಾಗಿ ಖಚಿತಪಡಿಸಬೇಕಿದೆ. ಜೊತೆಗೆ, ಸಾವಿಗೆ ಖಚಿತ ಕಾರಣ ತಿಳಿಯಬೇಕಿದೆ. ವಿ

ಧಿವಿಜ್ಞಾನ ಪ್ರಯೋಗಾಲಯ ತಜ್ಞರು ಎಲ್ಲ ಅಸ್ಥಿಗಳ ಮಾದರಿ ಸಂಗ್ರಹಿಸಿದ್ದು, ಮುಂದಿನ ತನಿಖೆಯಿಂದ ಇಲ್ಲಿ ಮೃತಪಟ್ಟವರು ಯಾರು ಎಂಬುದನ್ನು ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸ್ಥಳೀಯರು, ಕಳೆದ ನಾಲ್ಕೈದು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿದ್ದೇ ನೋಡಿಲ್ಲ ಎಂದರು. ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಗನ್ನಾಥ ರೆಡ್ಡಿ ನಿವೃತ್ತರಾಗಿ ಮೂವತ್ತು ವರ್ಷವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ, ಮಗಳು ತ್ರಿವೇಣಿ ಇದ್ದರು ಎಂದು ಕೆಲವರು ಮಾಹಿತಿ ನೀಡಿದ್ದಾರೆ.

2019ರಲ್ಲಿ ಮನೆಯಿಂದ ವಾಸನೆ ಬರುತ್ತಿತ್ತು. ಆಗ ಇಲಿ ಸತ್ತಿರಬಹುದು ಎಂದು ಭಾವಿಸಲಾಗಿತ್ತು. ಕೆಲ ದಿನ ವಾಸನೆ ಬಂದು ನಿಂತಿತ್ತು. ಆನಂತರ ಯಾರೂ ಆ ಮನೆಯ ಕಡೆಗೆ ಗಮನ ಹರಿಸಿರಲಿಲ್ಲ ಎಂಬದು ಕೆಲವರ ಅಭಿಪ್ರಾಯವಾಗಿದೆ.

ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ ವೇಳೆ ಮನೆಯ ಆವರಣದಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಪತ್ತೆಯಾಗಿವೆ. ಈ ನಡುವೆ ಡೆತ್ ನೋಟ್ ಕೂಡ ಸಿಕ್ಕಿದೆ ಎನ್ನಲಾಗುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳು ಅದನ್ನು ನಿಖರವಾಗಿ ತಿಳಿಸಿಲ್ಲ.

Leave a Reply