ಮೈಸೂರು: ಉದ್ಯಮಿಗಳು, ಹಣವಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ತಂಡವನ್ನು ಮೈಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವಾಸಕ್ಕೆಂದು ಮೈಸೂರು, ಮಡಿಕೇರಿ, ಚಾಮರಾಜನಗರ ಮತ್ತು ಬೆಂಗಳೂರಿಗೆ ಬರುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ವಂಚನೆಯ ಜಾಲ ಬೀಸುತ್ತಿದ್ದ ಜಾಲವನ್ನು ಈ ಮೂಲಕ ಪತ್ತೆಹಚ್ಚಿದಂತಾಗಿದೆ. ಫಜಲುಲ್ಲಾ ರೆಹಮಾನ್, ರಿಜ್ವಾನ್, ಮೋನಾ ಪೊಲೀಸರ ಬಲೆಗೆ ಬಿದ್ದಿರುವ ಹನಿಟ್ರ್ಯಾಪ್ ಖದೀಮರು.
ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ಕೇರಳದ ಉದ್ಯಮಿ ಸುನ್ನಿ ಎಂಬುವರನ್ನು ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್ಗೆ ಬೀಳಿಸಿ 5 ಲಕ್ಷ ರೂ. ದೋಚಿದ, ಅವರನ್ನು ಹನಿಟ್ರ್ಯಾಪ್ ಜಾಲದಲ್ಲಿ ಬೀಳಿಸಿ ಹಣ ಸುಲಿದ ಈ ಸುಲಿಗೆಗೋರರ ತಂಡ ಈಗ ಜೈಲುಪಾಲಾಗಿದ್ದು, ಪೊಲೀಸರ ವಿಚಾರಣೆ ವೇಳೆ ಈ ತಂಡದ ವಂಚನೆಯ ಜಾಲ ಬಹಿರಂಗವಾಗಿದೆ.
ಆರೋಪಿ ಮೋನಾ ಈ ಕೃತ್ಯದಲ್ಲಿ ಉದ್ಯಮಿಯನ್ನು ಸೆಳೆಯುವ ಕೆಲಸ ಮಾಡಿದ್ದರೆ, ಫಜಲುಲ್ಲಾ ರೆಹಮಾನ್, ರಿಜ್ವಾನ್ ಉದ್ಯಮಿಯನ್ನು ಬಲೆಗೆ ಕೆಡವಿದ್ದಾರೆ. ಈ ತಂಡ ಹೆದ್ದಾರಿಯಲ್ಲಿ ಹೋಗುವವರನ್ನು ಇದೇ ರೀತಿಯಾಗಿ ಬಲೆಗೆ ಬೀಳಿಸಿಕೊಡು ದೋಚುವು ಕೆಲಸವನ್ನು ನಡೆಸುತ್ತಿದ್ದರು.
ಕೇರಳದ ತಿರುನೆಲ್ಲಿ ಮೂಲದ ಉದ್ಯಮಿ ಸುನ್ನಿ ಮೈಸೂರಿಗೆ ಬಂದಿದ್ದರು. ಅವರನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ ಮೋನಾ ಅತ್ಯಂತ ಸಲುಗೆಯಿಂದ ವರ್ತಿಸತೊಡಗಿದ್ದಾಳೆ. ನಂತರ ಅವರನ್ನು ಪುಸಲಾಯಿಸಿ ಮಾನಂದವಾಡಿಯಲ್ಲಿನ ಮನೆಯೊಂದಕ್ಕೆ ಕರೆದುದೊಯ್ದಿದ್ದಾಳೆ.
ಅಲ್ಲಿ ಮೋನಾ ಜತೆ ಸುನ್ನಿ ಖಾಸಗಿ ಕ್ಷಣಗಳನ್ನು ಕಳೆಯಲು ಮುಂದಾಗಿ ನಗ್ನರಾಗಿದ್ದಾರೆ. ಈ ವೇಳೆ ತಕ್ಷಣ ಮನೆಯೊಳಗೆ ನುಗ್ಗಿದ ಫಜಲುಲ್ಲಾ ರೆಹಮಾನ್, ರಿಜ್ವಾನ್ ಮಾರಕಾಸ್ತ್ರಗಳನ್ನು ತೋರಿಸಿ ಉದ್ಯಮಿಯನ್ನು ಬೆದರಿಸಿ ಮಹಿಳೆ ಜೊತೆ ಅವರನ್ನು ನಗ್ನವಾಗಿ ಮಲಗಿಸಿದ್ದಾರೆ. ಬಳಿಕ ಇದರ ಫೋಟೊ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆನಂತರ ಸುನ್ನಿ ಅವರಿಗೆ ಅವರು ಮೋನಾ ಜೊತೆ ನಗ್ನವಾಗಿರುವ ವಿಡಿಯೊ ಮತ್ತು ಫೋಟೊಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾರೆ.
ಫೋಟೊ ಮತ್ತು ವಿಡಿಯೊ ತೋರಿಸಿದ ಆರೋಪಿಗಳು ನಮಗೆ 10 ಲಕ್ಷ ರೂ. ಕೊಡಬೇಕು ಇಲ್ಲವಾದಲ್ಲಿ ಈ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಬೆದರಿಸಿದ್ದಾರೆ. ಬೇರೆ ದಾರಿ ಇಲ್ಲದೆ ಸುನ್ನಿ 5 ಲಕ್ಷ ರೂ. ಕೊಟ್ಟಿದ್ದಾರೆ. ಬಳಿಕ ಆರೋಪಿಗಳು ಸುನ್ನಿ ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಅನಂತರ ಸುನ್ನಿ ತಮ್ಮ ಕಾರಿನ ಬಳಿ ಬಂದು ನೇರವಾಗಿ ಕೇರಳದ ತಮ್ಮ ಮನೆಗೆ ತೆರಳಿದ್ದಾರೆ. ಅಲ್ಲಿ ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ತಿರುನೆಲ್ಲಿ ಪೊಲೀಸರು ಸಂಪೂರ್ಣ ಮಾಹಿತಿ ಪಡೆದು ಪ್ರಕರಣವನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದರು.
ತಕ್ಷಣ ಕಾರ್ಯಾಚರಣೆಗೆ ಇಳಿದ ಮೈಸೂರು ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದು, ಬಂಧಿತರಿಂದ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.




