ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಮಹಿಳಾ ಭಾರತ ತಂಡ

8 months ago

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಐತಿಹಾಸಿಕ ಕ್ಷಣವನ್ನು ಸೃಷ್ಟಿಸಿ ದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾದ ವಿರುದ್ಧ 52 ರನ್‌ಗಳಿಂದ ಗೆದ್ದು, ಐಸಿಸಿ ಮಹಿಳಾ ವಿಶ್ವಕಪ್ 2025 ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತು.

ಇದು ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆಲುವಾಗಿದ್ದು, 2005 ಮತ್ತು 2017ರ ಫೈನಲ್‌ಗಳಲ್ಲಿ ಅನುಭವಿಸಿದ ನಿರಾಶೆಯ ನಂತರ ಬಂದ ದಾಖಲೆಯ ಜಯವಾಗಿದೆ. ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಡಿ.ವೈ. ಪಾಟೀಲ್ ಕ್ರೀಡಾಂಗಣ. ಈ ಕ್ಷಣವನ್ನು ಮೈದಾನದಲ್ಲಿ ಸಾವಿರಾರು ಜನ ಮತ್ತು ಮನೆಯಲ್ಲಿ ಕುಳಿತೇ ವೀಕ್ಷಿಸಿದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಣ್ತುಂಬಿಕೊಂಡರು. ಈ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ದಕ್ಷಿಣ ಆಫ್ರಿಕಾಗೆ 299 ರನ್ ಗಳ ಬೈಹತ್ ಮೊತ್ತವನ್ನು ಗುರಿಯಾಗಿ ನೀಡಿತು. ಇದಕ್ಕೆ ಪ್ರತ್ಯುತ್ತರ ನೀಡುವಲ್ಲಿ ಯತ್ನಿಸಿದ ದ.ಆಫ್ರಿಕಾ ತಂಡ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 52 ರನ್ ಗಳಿಂದ ಭಾರತ ತಂಡ ಗೆದ್ದು ಬೀಗಿತು. 

ಮಳೆಯ ಕಾರಣದಿಂದ 3 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಯಿತು. ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಆಕ್ರಮಣಕಾರಿ ಆಟದಿಂದಾಗಿ ದಕ್ಷಿಣ ಆಫ್ರಿಕಾದ ವಿಶ್ವಕಪ್ ಗೆಲ್ಲುವ ಆಸೆಯನ್ನು ನುಚ್ಚುನೂರು ಮಾಡಿತು.

ಭಾರತದ ಇನ್ನಿಂಗ್ಸ್‌ಗೆ ಶಾಫಾಲಿ ವರ್ಮಾ (87, 78 ಎಸೆತ) ಮತ್ತು ಸ್ಮೃತಿ ಮಂದಾನಾ (45) ರನ್ ಗಳಿಸಿದರು. ಶಾಫಾಲಿ, ಸೆಮಿಫೈನಲ್‌ನಲ್ಲಿ ಗಾಯಗೊಂಡ ಪ್ರತಿಕಾ ರಾವಳ್‌ ಅವರ ಬದಲಿಗೆ ಆಟವಾಡಿದ್ದು, ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಅವರ ಆಕ್ರಮಣಕಾರಿ ಇನ್ನಿಂಗ್ಸ್ ಲ್ಲಿ 5 ಬೌಡರಿಗಳಿದ್ದವು.

ದೀಪ್ತಿ ಶರ್ಮಾ (58) ಮತ್ತು ರಿಚಾ ಘೋಷ್ (34ಯ ಸ್ಫೋಟಕ ಇನ್ನಿಂಗ್ಸ್ ಗಳು ಭಾರತವನ್ನು 300 ರನ್‌ಗಳ ಗಡಿಗೆ ತಂದು ನಿಲ್ಲಿಸಿದವು. ದಕ್ಷಿಣ ಆಫ್ರಿಕಾದ ಬೌಲರ್ ಅಯಬೊಂಗಾ ಖಾಕಾ 58ರನ್ ನೀಡಿ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಭಾರತದ ಸ್ಕೋರ್ 298/7ಕ್ಕೆ ಮುಕ್ತಾಯವಾಯಿತು. ಇದು ಮಹಿಳಾ ವಿಶ್ವಕಪ್ ಫೈನಲ್‌ ಗಳಲ್ಲೇ ಎರಡನೇ ಅತಿ ದೊಡ್ಡ ಮೊತ್ತವಾಗಿದೆ.

ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಲಾರಾ ವೊಲ್ವಾರ್ಟ್ (101) ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ 571 ರನ್‌ ಗಳಿಸುವುದೊರೊಂದಿಗೆ ಹೊಸ ದಾಖಲೆ ಬರೆದರು. ಆದರೂ, ಭಾರತದ ಸ್ಪಿನ್ ದಾಳಿ – ವಿಶೇಷವಾಗಿ ದೀಪ್ತಿ ಶರ್ಮಾ (5/39) – ಅವರನ್ನು ಕುಸಿತಕ್ಕೆ ತಳ್ಳಿತು. ದೀಪ್ತಿಯವರು 5 ವಿಕೆಟ್‌ ಗಳಿಸಿ ಪಂದ್ಯದ ನಿರ್ಣಾಯಕ ಹಂತದಲ್ಲಿ ಭಾರತಕ್ಕೆ ನೆರವಾದರು. ಶಾಫಾಲಿ (2/36)ಯ ಬೌಲಿಂಗ್ ಕೂಡ ಪರಿಣಾಮಕಾರಿಯಾಗಿತ್ತು. ಕಡೆಗೆ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್ ಗಳಿಸಿ ಆಲ್‌ಔಟ್ ಆಯಿತು.

21 ವರ್ಷದ ಶಾಫಾಲಿ ವರ್ಮಾ, ಬ್ಯಾಟಿಂಗ್ ಮತ್ತು ಬಾಲಿಂಗ್ ವಿಭಾಗದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾದರು.  

ಭಾರತ ತಂಡದ ಸಂಭ್ರಮಾಚರಣೆ: ಪಂದ್ಯದ ನಂತರ, ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯರ ಉತ್ಸಾಹದ ಧ್ವನಿ ಮಂಜು ಗಟ್ಟಿಯಾಗಿತ್ತು. ಹರ್ಮನ್‌ಪ್ರೀತ್ ಕೌರ್ ಟ್ರೋಫಿಯನ್ನು ಎತ್ತಿ, ತಂಡದ ಸದಸ್ಯರು ಸಂತೋಷದಿಂದ ನಲಿದರು. ಬಿಸಿಸಿಐ ತಂಡಕ್ಕೆ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಗಮನಾರ್ಹ ಸಾಧನೆಯನ್ನು ತೋರಿಸುತ್ತದೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರೇರಣೆ ನೀಡುವ ಸಾಧನೆಯಾಗಿದೆ.

Leave a Reply