ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ ಸಿ‌ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

2 months ago

ಬೆಂಗಳೂರು: ವಿದ್ಯಾರ್ಥಿ ಜೀವನದ ಅತ್ಯಂತ ನಿರ್ಣಾಯಕ ಘಟ್ಟ ಎಂದು ಪರಿಗಣಿಸಲಾಗಿರುವ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ ಸಿ‌ ಪರೀಕ್ಷೆಯ ಅಂತಿಮ ವೇಳಾಪಟ್ಟಿಗಳನ್ನು ಪ್ರಕಟಿಸಲಾಗಿದೆ.

ಫೆಬ್ರವರಿ 28 ರಿಂದ ಮಾರ್ಚ್‌ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಸಿದ್ದಾರೆ.

ಈ ಬಾರಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಗೊಂದಲಗಳು ಮತ್ತು ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅವರು ಪೊಲೀಸರ ನೆರವಿನೊಂದಿಗೆ ಸುಗಮ ಪರೀಕ್ಷೆ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸಿಸಿ ಕ್ಯಾಮರಾಗಳ ನಿಗಾ ವಿಧಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರು ಹೊರತುಪಡಿಸಿ ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ಮೊಬೈಲ್ ಫೋನ್ ಬ್ಲೂಟೂತ್, ವೈರಲ್ಸ್ ಸೆಟ್ ಗಳು ಹಾಗೂ ಇತ್ಯಾದಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಉಪಯೋಗಿಸುವುದನ್ನು ಸಹ ಕರ್ನಾಟಕ ಪೊಲೀಸ್ ಅಧಿನಿಯಮ-1963ರ ಕಲಂ-35(ಸಿ) ರಡಿಯಲ್ಲಿ ನಿಷೇಧಿಸಲಾಗಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 6,46,801 ಹೊಸಬರು, 50,540 ಪುನರಾವರ್ತಿತರು, 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ. ವಿಜ್ಞಾನ ವಿಷಯದಲ್ಲಿ 2,92,645, ವಾಣಿಜ್ಯ ವಿಷಯದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದಾರೆ ಎಂದರು.

ಪರೀಕ್ಷೆಗಾಗಿ 5174 ಕಾಲೇಜುಗಳು ನೊಂದಾಯಿಸಿಕೊಂಡಿವೆ. 1217 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಏ.7ರಂದು ಪರೀಕ್ಷಾ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ವಿಫಲಗೊಂಡ ವಿದ್ಯಾರ್ಥಿಗಳಿಗಾಗಿ ಏ.25ರಿಂದ ಮೇ 9ರ ನಡುವೆ ಪರೀಕ್ಷೆ-2ನ್ನು ನಡೆಸಲು ದಿನಾಂಕ ನಿಗದಿಪಡಿಸಿದ್ದು, ಮೇ 22ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 8,12,855 ವಿದ್ಯಾರ್ಥಿಗಳು ಹೊಸಬರು, 62,845 ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳು 27,189 ಮಂದಿ ಇದ್ದಾರೆ. ಪರೀಕ್ಷೆಗಾಗಿ 15,941 ಶಾಲೆಗಳು ನೋಂದಾಯಿಸಿಕೊಂಡಿವೆ. 2,871 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಾ.18ರಿಂದ ಏ.2ರವರೆಗೆ ಪರೀಕ್ಷೆ ನಡೆಯಲಿದ್ದು, ಏ.24ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ:

ಫೆಬ್ರವರಿ 28 ಕನ್ನಡ, ಅರೇಬಿಕ್
ಮಾರ್ಚ್ 2 ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3 ಇಂಗ್ಲಿಷ್
ಮಾರ್ಚ್ 4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5 ಇತಿಹಾಸ
ಮಾರ್ಚ್ 6 ಭೌತಶಾಸ್ತ್ರ
ಮಾರ್ಚ್ 7 ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
ಮಾರ್ಚ್ 9 ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10 ಅರ್ಥಶಾಸ್ತ್ರ
ಮಾರ್ಚ್ 11 ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12 ಹಿಂದಿ
ಮಾರ್ಚ್ 13 ರಾಜ್ಯಶಾಸ್ತ್ರ
ಮಾರ್ಚ್ 14 ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16 ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 17 ಹಿಂದುಸ್ತಾನಿ ಸಂಗೀತ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ

ಎಸ್ಎಸ್ಎಲ್ ಸಿ ಪರೀಕ್ಷೆ-೧ ವೇಳಾಪಟ್ಟಿ:

ಮಾರ್ಚ್ 18 ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ, ಇತ್ಯಾದಿ)
ಮಾರ್ಚ್ 23 ವಿಜ್ಞಾನ
ಮಾರ್ಚ್ 25 ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮಾರ್ಚ್ 28 ಗಣಿತ
ಮಾರ್ಚ್ 30 ತೃತೀಯ ಭಾಷೆ (ಹಿಂದಿ, ಕನ್ನಡ, ಇತ್ಯಾದಿ)
ಏಪ್ರಿಲ್ 2 ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-೨ ವೇಳಾಪಟ್ಟಿ
ಮೇ 18 ಪ್ರಥಮ ಭಾಷೆ
ಮೇ 19 ವಿಜ್ಞಾನ
ಮೇ 20 ದ್ವಿತೀಯ ಭಾಷೆ
ಮೇ 21 ಗಣಿತ
ಮೇ 22 ತೃತೀಯ ಭಾಷೆ
ಮೇ 23 ಸಮಾಜ ವಿಜ್ಞಾನ

Leave a Reply