ಫಾತಿಮಾ ರಲಿಯಾ ಮುಡಿಗೆ ಛಂದ ಪುಸ್ತಕ ಬಹುಮಾನ – 2022

4 years ago

ಛಂದ ಪುಸ್ತಕ ಬಹುಮಾನ – 2022

ನಮಸ್ಕಾರಗಳು. ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಫಾತಿಮಾ ರಲಿಯಾ ಪಡೆದುಕೊಂಡಿದ್ದಾರೆ. ಫಾತಿಮಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿರಂತರವಾಗಿ ಮೂರು ವರ್ಷ ಮಹಿಳೆಯರೇ ಈ ಬಹುಮಾನವನ್ನು ತೆಗೆದುಕೊಂಡಿರುವುದನ್ನು ಗಮನಿಸಿದಾಗ (ಛಾಯಾ ಭಟ್ – 2020, ಕಾವ್ಯ ಕಡಮೆ – 2021, ಫಾತಿಮಾ ರಲಿಯಾ – 2022) ಸದ್ಯದ ಕನ್ನಡ ಕಥನಲೋಕದಲ್ಲಿ ಕತೆಗಾರ್ತಿಯರು ಹೆಚ್ಚು ಚಟುವಟಿಕೆಯಿಂದ ಮುಂಚೂಣಿಯಲ್ಲಿ ಇದ್ದಾರೆನ್ನುವುದು ತಿಳಿಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರು, ’ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷವೇ ಪ್ರಕಟಿಸಿದ್ದಾರೆ.

93 ಕತೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಹುಮಾನ ಕೇವಲ ಒಬ್ಬರಿಗೇ ನೀಡಲಾಗುತ್ತದೆಂಬ ಕಾರಣದಿಂದ ಇತರರಿಗೆ ಬೇಸರ ಮಾಡುತ್ತೇವೆಂಬ ಅಳುಕು ನಮಗಿದೆ. ಆದರೆ ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸುವುದು, ಮೊದಲ ಮತ್ತು ಎರಡನೆಯ ಸುತ್ತಿನಲ್ಲಿ ಆಯ್ಕೆಯಾಗುವುದನ್ನು ನಾವು ಅತ್ಯಂತ ಗೌರವದ ಸಂಗತಿಯೆಂದು ಭಾವಿಸುತ್ತೇವೆ. ಅದನ್ನು ನಾಡಿನ ಓದುಗರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎನ್ನುವ ವಿಶ್ವಾಸ ನಮಗಿದೆ. ಆದ್ದರಿಂದ ಭಾಗವಹಿಸಿದ ಎಲ್ಲರಿಗೂ ಈ ಮೂಲಕ ಅಭಿನಂದನೆಗಳನ್ನೂ, ಧನ್ಯವಾದಗಳನ್ನೂ ಅರ್ಪಿಸುತ್ತಿದ್ದೇವೆ.

ಈ ಬಾರಿಯ ನಮ್ಮ ಈ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ದೇಶದ ಹೆಮ್ಮೆಯ ಸಿನಿಮಾ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ ಅವರು ಮಾಡಿದ್ದಾರೆ. ಸಾಹಿತ್ಯದ ಅಂತರಾಳವನ್ನು ತಿಳಿದು ಅದನ್ನು ದೃಶ್ಯದಲ್ಲಿ ಅಷ್ಟೇ ಸಮರ್ಥವಾಗಿ ನಿರೂಪಿಸುವ ಕಾಸರವಳ್ಳಿ ಈ ನಾಡು ಕಂಡ ಅತಿ ದೊಡ್ಡ ಪ್ರತಿಭೆ. ಸಾಹಿತ್ಯ ಲೋಕದೊಡನೆ ಯಾವತ್ತೂ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ಗಿರೀಶ್ ಅವರು ಹಲವು ಸಿನಿಮಾಗಳಲ್ಲಿ ಕತೆಗಳನ್ನು ವಿಸ್ತರಿಸಿದ ಪರಿಯನ್ನು ಗಮನಿಸಿದರೆ, ಅವರೊಬ್ಬ ಸೂಕ್ಷ್ಮ ಸಾಹಿತಿಯೂ ಆಗಬಹುದಿತ್ತು ಎಂಬುದು ಯಾರಿಗಾದರೂ ತಿಳಿಯುತ್ತದೆ. ಇಂತಹ ಪ್ರತಿಭಾವಂತರು ಛಂದದ ಕೋರಿಕೆಗೆ ಮನ್ನಣೆಯನ್ನಿತ್ತು, ಆಸಕ್ತಿಯಿಂದ ಹಸ್ತಪ್ರತಿಗಳನ್ನು ಓದಿ, ಅವುಗಳನ್ನು ಧ್ಯಾನಿಸಿ, ತಮ್ಮ ನಿರ್ಣಯವನ್ನು ಕೆಳಗಿನ ಟಿಪ್ಪಣಿಯ ಮೂಲಕ ವ್ಯಕ್ತಪಡಿಸಿದ್ದಾರೆ.

“ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವನ್ನು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ. ಕೇವಲ ಪರ-ವಿರೋಧಗಳ ಯಾವುದೋ ಧ್ರುವದಲ್ಲಿ ನಿಲ್ಲದೆ, ಹಲವು ಆಯಾಮಗಳಿಂದ ಬದುಕನ್ನು ನೋಡುವ ಒಳನೋಟ ಇವರಿಗೆ ದಕ್ಕಿದೆ. ಹಿಂದೂ-ಮುಸ್ಲಿಂ ಸಂಬಂಧಗಳ ಸಾಮರಸ್ಯಗಳನ್ನು ಚಿತ್ರಿಸುತ್ತಲೇ, ಕ್ಷುಲ್ಲಕ ಘಟನೆಗಳಿಂದಾಗಿ ಅವು ಸಿಡಿದು ಹೋಗುವ ಅಸಹಾಯಕ ಸನ್ನಿವೇಶಗಳನ್ನು ಇವರು ಚಿತ್ರಿಸುತ್ತಾರೆ. ವಸ್ತು ವಿವರಗಳಲ್ಲಿ ನಾವಿನ್ಯತೆಯನ್ನು ತೋರುವ ರಲಿಯಾ, ಬದುಕಿನ ಘಟನೆಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಲೇ ಪರೋಕ್ಷವಾಗಿ ಅದರ ಇನ್ನೊಂದು ಮಗ್ಗುಲನ್ನು ದರ್ಶಿಸುವುದರಿಂದ ಕಥಾವಸ್ತು ಹೆಚ್ಚು ಸಾಂದ್ರವಾಗಿ ಓದುಗರ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.”

ಈ ಪುಸ್ತಕವು ನವೆಂಬರ್ ತಿಂಗಳಲ್ಲಿ ಓದುಗರಿಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಫಾತಿಮಾ ರಲಿಯಾ ಅವರಿಗೆ 40,000 ರೂಪಾಯಿ ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಕೊಡಲಾಗುತ್ತದೆ.

ಗಿರೀಶ ಕಾಸರವಳ್ಳಿ
============

ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರೊಬ್ಬರಾದ ಗಿರೀಶ ಕಾಸರವಳ್ಳಿಯವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಸಲೂರಿನಲ್ಲಿ 1950ರಲ್ಲಿ ಜನಿಸಿದರು. ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ 27 ವರ್ಷಗಳ ವೃತ್ತಿ ಜೀವನದಲ್ಲಿ 14 ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರಗಳ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.

1977 ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ 3 ಸ್ವರ್ಣಕಮಲಗಳನ್ನು (ತಬರನ ಕತೆ, ತಾಯಿಸಾಹೇಬ, ದ್ವೀಪ) ಪಡೆದು ಸತ್ಯಜಿತ್ ರೇ(6 ಸ್ವರ್ಣ ಕಮಲಗಳು) ನಂತರ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ. ಇವರು ’ಘಟಶ್ರಾದ್ಧ’ ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ 27. ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು.

ಇಂತಹ ಹಿರಿಯರು ನಮ್ಮ ಛಂದ ಪುಸ್ತಕ ಹಸ್ತಪ್ರತಿಯ ತೀರ್ಪುಗಾರರಾಗಿದ್ದು ನಮ್ಮ ಅದೃಷ್ಟವೆಂದೇ ಭಾವಿಸುತ್ತೇವೆ.

– ವಸುಧೇಂದ್ರ, ಸಾಹಿತಿ ಮತ್ತು ಪ್ರಕಾಶಕರು

Leave a Reply