ವಲಸೆ ಕಾರ್ಮಿಕರ ಮಕ್ಕಳಿಗಾಗಿ ಹೆಚ್ಚು ಹೆಚ್ಚು ವಸತಿ ಶಾಲೆಗಳನ್ನ ಸ್ಥಾಪಿಸಿ

1 year ago

ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ ಕುಟುಂಬದ ಸಮೇತ ಬೇರೆ ಬೇರೆ ಪ್ರದೇಶಗಳಿಗೆ ಕೆಲಸದ ನಿಮಿತ್ತ ವಲಸೆ ಹೋಗುತ್ತಲೇ ಇದ್ದಾರೆ.

ಇಂತಹ ಸಂದರ್ಭದಲ್ಲಿ ಇವರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗೆ ಯಾವುದೇ ರೀತಿಯ ಸೌಕರ್ಯಗಳಿರುವುದಿಲ್ಲ. ಇಂತಹ ಮಕ್ಕಳು ಶಾಲೆಗಳಿಗೆ ಸೇರಿ ಕಲಿಯುವಂತಹ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತಮ್ಮ ಹೆತ್ತವರ ಜೊತೆಯಲ್ಲಿ ಆ ಟೆಂಟುಗಳಲ್ಲಿ ಜೀವನವನ್ನು ನಡೆಸುತ್ತಾ ಹಾಗೆಯೇ ಬೆಳೆದು ದೊಡ್ಡವರಾದಕ್ಕಿದ್ದಂತೆ ಅವರು ಸಹ ಮತ್ತೆ ಕೂಲಿ ಕಾರ್ಮಿಕರಾಗಿ ವಲಸೆ ಹೋಗುವಂತಹ ಸಂಪ್ರದಾಯ ಮುಂದುವರೆಯುತ್ತದೆ.

ಇಂತಹ ವಲಸೆ ಕಾರ್ಮಿಕರ ಪುಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಒಂದು ವರ್ಗದ ಕುಟುಂಬದ ಮಕ್ಕಳು ಕೇವಲ ದುಡಿಯುವ ಸಲುವಾಗಿಯೇ ಬದುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಯೋಜನೆಯಿಂದ ಸಂಗ್ರಹವಾಗುತ್ತಿರುವ ಅಪಾರ ಪ್ರಮಾಣದ ಹಣದಲ್ಲಿ ಎಲ್ಲ ತಾಲೂಕು ಮಟ್ಟದಲ್ಲಿ ಸಾಧ್ಯವಾದರೆ ಜಿಲ್ಲಾಮಟ್ಟದಲ್ಲಾದರೂ ವಸತಿ ಶಾಲೆಗಳನ್ನ ತೆರೆದು ಕಡ್ಡಾಯವಾಗಿ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಬೇಕು.

ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕವಾದರೂ ಇಂತಹ ವಸತಿ ಶಾಲೆಗಳಲ್ಲಿ ಓದುವಂತಹ ಅವಕಾಶವನ್ನ ಕಲ್ಪಿಸಿ ಕೊಡಬೇಕು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಾಲೆಗೆ ಸೇರಿಸದ ಕಾರ್ಮಿಕರ ಕುಟುಂಬಗಳೊಂದಿಗೆ ಸಂಪರ್ಕವನ್ನು ಸಾಧಿಸಿ ವಿದ್ಯೆಯ ಮಹತ್ವವನ್ನ ಅವರಿಗೆ ತಿಳಿಸಿಕೊಟ್ಟು ಸರ್ಕಾರದಿಂದ ಇರುವ ಯೋಜನೆಗಳನ್ನು ಮನದಟ್ಟು ಮಾಡಿಕೊಟ್ಟು ಶಾಲೆಗಳಿಗೆ ಕಳಿಸುವಂತೆ ವ್ಯವಸ್ಥೆಯನ್ನು ಮಾಡಬೇಕು.

ಪ್ರತಿ ದಿನವೂ ನಾವು ನಗರ ಪ್ರದೇಶಗಳಲ್ಲಿ ಇಲ್ಲವೇ ಪ್ರವಾಸ ಮಾಡುವ ಸಂದರ್ಭದಲ್ಲಿ ಕಟ್ಟಡಗಳನ್ನ ಕಟ್ಟುವ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ, ರಾಜ್ಯ ಹೆದ್ದಾರಿಗಳನ್ನ ಅಭಿವೃದ್ಧಿಪಡಿಸುವ, ಸೇತುವೆಗಳು ಮತ್ತು ಮೆಟ್ರೋ ಕಾಮಗಾರಿ ಮುಂತಾದಂತಹ ಕಡೆಗಳಲ್ಲಿ ಇಂತಹ ಕುಟುಂಬದ ಮಕ್ಕಳು ಶಾಲೆಗೆ ಹೋಗದೆ ರಸ್ತೆಯ ಮೇಲೆ ಮಣ್ಣಿನೊಂದಿಗೆ ಆಟವಾಡುತ್ತಾ ಇರುವುದನ್ನ ನಾವು ಗಮನಿಸಬಹುದು.

ಇಂತಹ ಪುಟ್ಟ ಮಕ್ಕಳಿಗೆ ಸೂಕ್ತವಾದಂತಹ ಬದುಕನ್ನ ಕಲ್ಪಿಸಿಕೊಡದಿದ್ದರೆ ಸಮಾಜಕ್ಕೆ ಮಾಡುವಂತಹ ದೊಡ್ಡ ಅನ್ಯಾಯವಾಗುತ್ತದೆ. ಆ ಪುಟ್ಟ ಮಕ್ಕಳ ಬದುಕು ನಿರಂತರವಾಗಿ ಸ್ಪಷ್ಟ ದಾರಿ ಇಲ್ಲದೆ ಸಾಗುತ್ತದೆ. ಹೀಗೆ ಪ್ರತ್ಯೇಕವಾಗಿ ಎರಡು ವರ್ಗಗಳು ಸೃಷ್ಟಿಯಾಗುತ್ತದೆ. ಉಳ್ಳವರ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಸಿಕ್ಕರೆ, ಶ್ರಮಿಕರ ಮಕ್ಕಳಿಗೆ ವಿದ್ಯೆಯ ಸೌಲಭ್ಯವಿಲ್ಲದೆ ಇರುವಂತಹ ಮತ್ತೊಂದು ವರ್ಗ ಈ ರೀತಿಯ ವರ್ಗಗಳನ್ನು ಸೃಷ್ಟಿಗೆ ಸರಕಾರಗಳು ಕಾರಣವಾಗಬೇಕಾಗುತ್ತದೆ.

ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಹಾಗೂ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯವಾದಂತಹ ಆಲೋಚನೆಯನ್ನು ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಡವನ್ನು ಹೇರಬೇಕೆಂದು ಕೋರುತ್ತೇನೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply