ಮಣ್ಣು ಕುಸಿತದಲ್ಲಿ ಕಾರ್ಮಿಕರಿಬ್ಬರ ಜೀವನ್ಮರಣ ಹೋರಾಟ
ಪರಿಹಾರಕ್ಕೆ ಕಟ್ಟಡ ಕಾರ್ಮಿಕರ ಸಂಘಟನೆ ಆಗ್ರಹ
ಮಂಗಳೂರು: ನಗರದ ಬಲ್ಮಠ ವಾಸುಲೇನ್ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ನಿರತರಾದ ಉತ್ತರಭಾರತ ಮೂಲದ ಕಾರ್ಮಿಕರಿಬ್ಬರು ಮಣ್ಣು .ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಬಿಲ್ಡರ್ ಹಾಗೂ ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ನೇರ ಕಾರಣ. ಈ ದುರಂತದ ಹೊಣೆ ಹೊತ್ತು ಕಾರ್ಮಿಕರಿಗೆ ಸರಕಾರದ ವತಿಯಿಂದ ದೊರಕುವ ವಿಪತ್ತು ಪರಿಹಾರ ನಿಧಿ ಮಾತ್ರವಲ್ಲದೆ, ಸಾವು ಸಂಭವಿಸಿದ್ದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಕಂಪೆನಿ, ಗುತ್ತಿಗೆದಾರರ ಕಡೆಯಿಂದಲೂ ತಲಾ 50 ಲಕ್ಷ ರೂ.ಪರಿಹಾರ ಕೊಡಿಸಬೇಕೆಂದು CITUಗೆ ಸಂಯೋಜಿತಗೊಂಡಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ. ಹಾಗೂ ಪ್ರಾಣಹಾನಿಗೆ ಕಾರಣವಾಗುವ ದುರ್ಘಟನೆಯನ್ನು ಕ್ರಿಮಿನಲ್ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನಗರದೆಲ್ಲೆಡೆ ಬಹುಮಹಡಿ ಕಟ್ಟಡಗಳು ವೇಗವಾಗಿ ತಲೆ ಎತ್ತುತ್ತಿವೆ. ಅವುಗಳ ನಿರ್ಮಾಣ ಕೆಲಸಕ್ಕೆ ಪ್ರಜ್ಞಾಪೂರ್ವಕವಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನಿರಾಕರಿಸಿ ಅತ್ಯಂತ ಕನಿಷ್ಠ ಕೂಲಿಗೆ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಕರೆತಂದು ಯಾವುದೇ ನಿಯಮಗಳನ್ನು ಪಾಲಿಸದೆ ದುಡಿಸಲಾಗುತ್ತದೆ ಎಂದು ಆರೋಪಿಸಿದೆ.
ಇಂತಹ ಕಾರ್ಮಿಕರ ಸಂಪೂರ್ಣ ವಿವರ ಕಾರ್ಮಿಕ ಇಲಾಖೆಯಲ್ಲಿ ಲಭ್ಯ ಇರಬೇಕೆಂದಿದ್ದರೂ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹಾಗೂ ಬಿಲ್ಡರ್ ಗಳು ಅಂತಹ ಯಾವುದೇ ಮಾಹಿತಿಗಳನ್ನು ನೀಡದೆ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದೆ.
ಕಾರ್ಮಿಕ ಇಲಾಖೆಯೂ ಕೂಡ ಈ ಬಗ್ಗೆ ತೀರಾ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ. ಇಂತಹ ಘಟನೆಗಳು ದಕ.ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ ಯಾವುದೇ ಪ್ರದೇಶದ ಬಡಪಾಯಿ ಕಾರ್ಮಿಕರು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜೀವ ತೆರುವುದು, ಅಂಗ ವೈಕಲ್ಯಕ್ಕೆ ಒಳಗಾಗುವುದು ಸಾಮಾನ್ಯ ಎಂಬಂತಾಗಿದೆ. ಕಾರ್ಮಿಕರ ಇಂತಹ ದಯನೀಯ ಸ್ಥಿತಿಗೆ ಹೊಣೆ ಹೊರುವವರು, ಅವರ ಅನಾಥ ಕುಟುಂಬಗಳ ಜವಾಬ್ದಾರಿ ಹೊರುವವರು ಯಾರು ಎಂದು ಕಟ್ಟಡ ಕಾರ್ಮಿಕರ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರು ನಗರದಲ್ಲಿ ಬಹುಮಹಡಿ ನಿರ್ಮಾಣ ಕಾಮಗಾರಿ ಸಂದರ್ಭ ಈ ರೀತಿಯ ಅವಘಡ ಸಂಭವಿಸುವುದು ಪದೇ ಪದೆ ನಡೆಯುತ್ತಿದೆ. ಇಂತಹ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುವ ವಲಸೆ ಕಾರ್ಮಿಕರಿಗೆ ಯಾವುದೇ ಪರಿಹಾರಗಳು ನೀಡುವುದಾಗಲಿ, ನಿರ್ಲಕ್ಷ್ತಕ್ಕೆ ಸಂಬಂಧ ಪಟ್ಟವರನ್ನು ಹೊಣೆಗಾರರನ್ನಾಗಿಸಿ ವಿಚಾರಣೆ ನಡೆಸುವುದಾಗಲಿ ನಡೆಯುತ್ತಿಲ್ಲ ಎಂದು ಹೇಳಿದೆ.
ಕಾರ್ಮಿಕರ ಕುರಿತಾದ ಇಂತಹ ಅನಾದಾರದ ನಡೆಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈಗ ನಡೆದಿರುವ ದುರ್ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಿ, ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಳೆಗಾಲದ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಬೇಕು, ನಿಯಮ ಉಲ್ಲಂಘಿಸುವ ಬಿಲ್ಡರ್ ಗಳು, ಗುತ್ತಿಗೆದಾರರನ್ನು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಇಂತಹ ಘಟನೆಗಳಿಗೆ ಹೊಣೆಗಾರರನ್ನಾಗಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




