ಕೊರೊನೊ ಸಂಕಷ್ಟದ ಸಮಯದಲ್ಲಿ ದೇಶದಲ್ಲಿ ವಲಸೆ ಕಾರ್ಮಿಕರ ನಿಜವಾದಂತಹ ಬದುಕಿನ ಕಷ್ಟದ ಕಣ್ಣೀರಿನ ಕಥೆ ಎಲ್ಲರಿಗೂ ಅರಿವಾಯಿತು. ಸಾವಿರಾರು ಮಂದಿ ನೂರಾರು ಕಿಲೋಮೀಟರ್‌ಗಳು ನಡೆದುಕೊಂಡು ಹೋಗುತ್ತಾ ಪ್ರಾಣವನ್ನು ಕಳೆದುಕೊಂಡಂತಹ ಆ ಚಿತ್ರಗಳು ಇನ್ನೂ ಎಲ್ಲರ ಕಣ್ಣಿನಲ್ಲಿ ಹಾಗೇ ಉಳಿದುಕೊಂಡಿದೆ.
ಭಾರತ ದೇಶದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಗಂಟುಮೂಟೆಗಳನ್ನು ಕಟ್ಟಿಕೊಂಡು ಹೆಂಡತಿ, ಮಕ್ಕಳೊಂದಿಗೆ ತಮ್ಮ ಹುಟ್ಟಿದ ಊರಿನಿಂದ ಮತ್ತು ಯಾವುದೋ ಊರಿಗೆ ಬಂದು ನೆಲೆಸುತ್ತಾರೆ. ಇವರ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ. ದುಡಿಯುವ ಜಾಗದಲ್ಲಿ ಸರಿಯಾದಂತಹ ವಸತಿ ಸೌಲಭ್ಯವೂ ಇರುವುದಿಲ್ಲ, ಸಾಕರ್ಯವೂ ಇರುವುದಿಲ್ಲ.
ಸಣ್ಣಪುಟ್ಟ ಗುಡಿಸಲುಗಳಲ್ಲಿ ಬಯಲಿನಲ್ಲಿ ಬದುಕುತ್ತಾರೆ. ಮಳೆ, ಚಳಿ, ಗಾಳಿ, ಬಿಸಿಲು ಇವುಗಳಿಗೆ ಅನೇಕ ಸಂಕಷ್ಟಗಳನ್ನು ಎದುರಿಸಿ ಎದೆಗಾರಿಕೆಯಿಂದ ಬದುಕುತ್ತಾರೆ. ಭಾರತ ದೇಶದಲ್ಲಿ ಕನಿಷ್ಠ ಪಕ್ಷ 35-40 ಕೋಟಿ ಜನ ಇಂದಿಗೂ ವಲಸೆ ಕಾರ್ಮಿಕರಾಗಿ ಬದುಕುತ್ತಿದ್ದಾರೆ. ಕಾರ್ಮಿಕ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಇವರನ್ನು ದುಡಿಸಿಕೊಳ್ಳುವ ಗುತ್ತಿಗೆದಾರರು ಇವರಿಗೆ ಯಾವ ಸೌಲಭ್ಯವನ್ನು ಕಲ್ಪಿಸಿಕೊಡುವುದಿಲ್ಲ. ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳಲು ಬಿಡುವುದೇ ಇಲ್ಲ.
ಹೀಗಾಗಿ ಈ ಯೋಜನೆಗಳಿಗೆ ನಿಗದಿ ಮಾಡಿರುವ ಹಣವೆಲ್ಲವೂ ಖರ್ಚಾಗದೇ ಉಳಿದಿರುತ್ತದೆ. ವಲಸೆ ಕಾರ್ಮಿಕರದು ಅತಿ ದೊಡ್ಡ ಸಮಸ್ಯೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾದಂತಹ ಇಲಾಖೆಯನ್ನು ಸ್ಥಾಪಿಸಿ ದೂರ ದೃಷ್ಟಿತ್ವದ ಪರಿಣಾಮಕಾರಿಯಾದ ವೈಜ್ಞಾನಿಕ ಚಿಂತನೆಯ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಕನಿಷ್ಠ ಪಕ್ಷ ಇವರ ಪುಟ್ಟಪುಟ್ಟ ಮಕ್ಕಳು ಅನ್ಯ ಮಕ್ಕಳ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ತಮ್ಮ ಬದುಕನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಳ್ಳುವಂತೆ ಮಾಡಿದರೆ ಎಷ್ಟೋ ಸಾರ್ಥಕವಾಗುತ್ತದೆ.
ವಲಸೆ ಕಾರ್ಮಿಕರ ಮಕ್ಕಳು ತಂದೆ, ತಾಯಿಯರಂತೆ ಆ ಮಣ್ಣಿನೊಂದಿಗೆ, ಸಿಮೆಂಟ್ ಧೂಳಿನೊಂದಿಗೆ, ಇಟ್ಟಿಗೆಗಳ ತುಂಡುಗಳೊಂದಿಗೆ ಬಯಲಲ್ಲಿ ಇರುವುದನ್ನು ಕಂಡಾಗ ಎಷ್ಟೊಂದು ತಾರತಮ್ಯ ಇನ್ನು ಇದೆ ಎಂಬ ನೋವು ಕಾಡುತ್ತದೆ. ದಯಮಾಡಿ ಸರ್ಕಾರಗಳು ಗಂಭೀರವಾಗಿ ಈ ಬಗ್ಗೆ ಆಲೋಚಿಸಲಿ.
- ಕೆ.ಎಸ್. ನಾಗರಾಜ್, ಬೆಂಗಳೂರು




