ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆ

2 years ago

ಕಾನೂನು ಅರಿವು ನೆರವು ಕಾರ್ಯಕ್ರಮ

ದಾವಣಗೆರೆ: ಘನ ತ್ಯಾಜ್ಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡಿ ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಪರಿಸರ ಉಳಿದೀತು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್.ಮ.ಕೆರೆಣ್ಣವರ ತಿಳಿಸಿದರು.

ಜೈನ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜೈನ್ ಇಂಜಿನಿಯರಿಂಗ್ ಕಾಲೇಜು ಮತ್ತು ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಘನ ತ್ಯಾಜ್ಯ ನಿರ್ವಾಹಣೆಗೆ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಘನ ತ್ಯಾಜ್ಯ ನಿರ್ವಹಣೆ ಇಂದಿನ ಪರಿಸರಕ್ಕೆ ಒಂದು ಅತಿ ದೊಡ್ಡ ಸವಾಲಾಗಿದ್ದು ಇದನ್ನು ಸೂಕ್ತ ರೀತಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಪರಿಸರ ಉಳಿಯುತ್ತದೆ. ಇಲ್ಲವಾದರೆ ನಮ್ಮ ಪರಿಸರದ ಭವಿಷ್ಯ ಮತ್ತು ಜೀವ ಸಂಕುಲದ ರಕ್ಷಣೆಗೆ ಬಹು ದೊಡ್ಡ ಸಮಸ್ಯೆಯಾಗುತ್ತದೆ ಎಂದರು.

ಜೈನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಲವು ಕಾರಣಗಳಿಗಾಗಿ ಇತರೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಬೇಕಾಗಿದ್ದು ಆ ಸಮಯದಲ್ಲೂ ಕೂಡ ಪರಿಸರ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಘನ ತ್ಯಾಜ್ಯ ನಿರ್ವಹಣೆಯ ಯೋಜನಾಧಿಕಾರಿ ಮಹಾಂತೇಶ ಮಾತನಾಡಿ ದಾವಣಗೆರೆ ನಗರದಲ್ಲಿ ಪ್ರತಿ ದಿನ ಸುಮಾರು 170 ಟನ್ಗಿಂತ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಈ ಬಗ್ಗೆ ಪಾಲಿಕೆಯವರು ಮತ್ತು ಸರ್ಕಾರದವರು ನೀಡುವ ಸಲಹೆ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಿದರೆ ಮಾತ್ರ ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯುತ್ತದೆ. ಇಲ್ಲವಾದರೆ ಭವಿಷ್ಯದಲ್ಲಿ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಇದೇ ರೀತಿ ಜಿಲ್ಲೆಯಲ್ಲಿ ಎಲ್ಲಾ ಕಡೆ ಸಾರ್ವಜನಿಕರು ಇಲಾಖೆಗಳ ಜೊತೆಗೆ ಕೈ ಜೋಡಿಸಿ ತ್ಯಾಜ್ಯ ನಿರ್ವಹಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಾ. ಹೆಚ್.ಲಕ್ಷ್ಮೀಕಾಂತ್ ಮಾತನಾಡಿ, ಜೀವ ಸಂಕುಲಕ್ಕೆ ಮಣ್ಣು, ನೀರು ಮತ್ತು ಮರ ಇವುಗಳ ಅವಶ್ಯಕತೆಯ ಬಗ್ಗೆ ಮತ್ತು ಅವುಗಳು ಜೀವ ರಾಶಿಗಳ ಅಗತ್ಯತೆಗಾಗಿ ನಿರ್ವಹಿಸುತ್ತಿರುವ ಕಾರ್ಯಗಳ ಬಗ್ಗೆ ತಿಳಿಸಿದರು. ಪ್ಲಾಸ್ಟಿಕ್ ಅವಶ್ಯಕತೆ, ಅದರ ಮಿತ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ವಿದ್ಯುನ್ಮಾನ ಉಪಕರಣಗಳ ತಯಾರಿಕೆ, ಬಳಕೆ ಮತ್ತು ನಿರ್ವಹಣೆ ಕುರಿತು ಸಂಪೂರ್ಣ ವಿವರವನ್ನು ನೀಡಿದ ಅವರು ತಂತ್ರಜ್ಞಾನ ಮಾನವ ಜೀವಕ್ಕೆ ಎಷ್ಟು ಅವಶ್ಯಕವಾಗಿದೆಯೋ ಅಷ್ಟಕ್ಕೆ ಮಾತ್ರ ಬಳಸಿಕೊಂಡರೆ ಸೂಕ್ತ. ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ದತಿ, ಜೀವನ ಶೈಲಿ ಮತ್ತು ಪರಿಸರದ ಸಂರಕ್ಷಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರ ಡಾ.ರಾಹುಲ್ ಪಾಟೀಲ್ ಮತ್ತು ಗುರುಪ್ರಶಾಂತ್, ಕಾಲೇಜಿನ ಇತರೆ ಭೋದಕ ಮತ್ತು ಭೋದಕೇತರ ಸಿಬ್ಬಂದಿ ವಿದಾರ್ಥಿಗಳು, ಇದ್ದರು.

Leave a Reply