ಆಡಳಿತ ಭಾಷೆ ಕನ್ನಡವಾದ ಮೇಲೆ ಇಂಗ್ಲಿಷ್ ಪರೀಕ್ಷೆಯ ಅಗತ್ಯವೇನು?: ಟಿ.ಎ. ನಾರಾಯಣಗೌಡ
ಕರ್ನಾಟಕ ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯಲ್ಲಿ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರನ್ನು ಸರ್ಕಾರಿ ಉದ್ಯೋಗಗಳಿಂದ ದೂರವಿಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಪರಭಾಷಾ ಐಎಎಸ್ ಲಾಬಿ ಇರುವುದು ಸ್ಪಷ್ಟ. ಸರ್ಕಾರ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ಇಲ್ಲವಾದಲ್ಲಿ ಇಂಥ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಬೇಕಾಗುತ್ತದೆ.
- ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
- ಸರ್ಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಕಡ್ಡಾಯ: ಕರವೇ ತೀವ್ರ ವಿರೋಧ
- ಡೈವೋರ್ಸ್ ನಂತರ ದುನಿಯಾ ವಿಜಯ್ ಮೊದಲ ಪೋಸ್ಟ್
- ಮೆಟ್ರೋ ಸಾರ್ವಜನಿಕ ಸೇವೆಗೆ ತೆರೆಯುವ ಸಿದ್ಧತೆಗಳನ್ನು ಪರಿಶೀಲಿಸಿದ ಕೃಷ್ಣ ಬೈರೇಗೌಡ
- ಎರಡು ದಶಕಗಳ ಕನ್ನಡಿಗರ ಹೋರಾಟಕ್ಕೆ ಮತ್ತೊಂದು ಮಹತ್ವದ ಜಯ: ಟಿ.ಎ.ನಾರಾಯಣಗೌಡ
ಕನ್ನಡವೇ ಕರ್ನಾಟಕ ಸರ್ಕಾರದ ಆಡಳಿತ ಭಾಷೆ. ಸರ್ಕಾರದ ಕಚೇರಿಗಳಲ್ಲಿ ಆಡಳಿತ, ಕಡತ ವಿಲೇವಾರಿ, ಪತ್ರ ವ್ಯವಹಾರ ಹಾಗೂ ಸಾರ್ವಜನಿಕ ಸೇವೆಗಳು ಕನ್ನಡದಲ್ಲೇ ನಡೆಯಬೇಕೆಂಬುದು ಸರ್ಕಾರದ ನೀತಿಯಾಗಿದೆ. ಹೀಗಿರುವಾಗ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡುವಾಗ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಅಗತ್ಯವಾದರೂ ಏನು? ಐ ಎಎಸ್ ಬಾಬುಗಳಿಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರಲ್ಲವೇ?
ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಪಡೆಯಬೇಕಾದ ಕನ್ನಡಿಗನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮ. ಇದು ಗ್ರಾಮೀಣ ಪ್ರದೇಶದ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಜನರು ಹಾಗೂ ಇಂಗ್ಲಿಷ್ ಶಿಕ್ಷಣದ ಅವಕಾಶ ಸಿಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸರ್ಕಾರದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಸರ್ಕಾರಿ ಸೇವೆಗೆ ಅಗತ್ಯವಿರುವ ಭಾಷಾ ಜ್ಞಾನ ಕನ್ನಡವಾಗಿರಬೇಕು. ಯಾವುದೇ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಇಂಗ್ಲಿಷ್‌ನಲ್ಲಿರುವ ಮಾಹಿತಿಯ ಅಗತ್ಯವಿದ್ದರೆ, ಸರ್ಕಾರದಲ್ಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುವಾದ ಇಲಾಖೆಯ ಮೂಲಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಲು ಅವಕಾಶವಿದೆ. ಅನುವಾದ ವ್ಯವಸ್ಥೆ ಇರುವಾಗ ಸರ್ಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವುದು ಅರ್ಥಹೀನ.
ಕರ್ನಾಟಕ ಸರ್ಕಾರವು ಒಂದು ಕಡೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ, ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವುದು ದ್ವಂದ್ವ ನೀತಿಯಾಗಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸರ್ಕಾರದ ಘೋಷಣೆ ಕೇವಲ ಕಡತಗಳಿಗೆ ಸೀಮಿತವಾಗದೆ, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು.
ಕನ್ನಡಿಗರಿಗೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಯ ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಕೇವಲ ಇಂಗ್ಲಿಷ್ ಜ್ಞಾನದ ಕೊರತೆಯ ಕಾರಣಕ್ಕೆ ತಿರಸ್ಕರಿಸುವ ಯಾವುದೇ ನಿಯಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಒಪ್ಪುವುದಿಲ್ಲ.
ಆದ್ದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ನೇಮಕಾತಿ ಪರೀಕ್ಷೆಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಸಬೇಕು. ಸರ್ಕಾರಿ ಉದ್ಯೋಗಗಳಿಗೆ ಅನಗತ್ಯವಾಗಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೈಬಿಟ್ಟು, ಕನ್ನಡಕ್ಕೆ ಸೂಕ್ತ ಮತ್ತು ನ್ಯಾಯಯುತ ಸ್ಥಾನಮಾನ ಕಲ್ಪಿಸಬೇಕು.
-ಟಿ.ಎ. ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ



