ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಅಧಿಕಾರಿಗಳು ಮತ್ತು ಸಚಿವರು ಕಡತಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಹಾಕುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊರ ರಾಜ್ಯಗಳ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಜತೆ ವ್ಯವಹರಿಸುವಾಗ ಅನಿವಾರ್ಯವಾಗಿ ಇಂಗ್ಲಿಷ್ ಬಳಸಬೇಕಾಗುತ್ತದೆ. ರಾಜ್ಯ ಸರ್ಕಾರದ ಒಳಗಿನ ಆಡಳಿತ ವ್ಯವಹಾರಗಳಲ್ಲಿ ಇಂಗ್ಲಿಷ್ ಬಳಕೆ ಅನಗತ್ಯ. ಆ ರೀತಿ ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಹಾಕುವುದು, ಕಡತ ಮಂಡಿಸುವುದನ್ನು ಕೈಬಿಟ್ಟು ಸಂಪೂರ್ಣವಾಗಿ ಕನ್ನಡ ಬಳಕೆ ಮಾಡಬೇಕು ಎಂದರು.
ಇತರ ಭಾಷೆ, ಧರ್ಮಗಳನ್ನೂ ಪ್ರೀತಿಸಬೇಕು. ಆದರೆ, ಕನ್ನಡವನ್ನೇ ಹೆಚ್ಚು ಬಳಕೆ ಮಾಡಬೇಕು. ಕನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ ಕೆಲಸ ಮಾಡಬೇಕು. ಇತರ ಭಾಷೆಗಳ ಬಗೆಗಿನ ಉದಾರತೆಯು ಕನ್ನಡಕ್ಕೆ ತೊಂದರೆ ಉಂಟುಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ. ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ. ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದರು.
ನೆರೆಯ ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದರು.
ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ , ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು , ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು , ಧರ್ಮದವರನ್ನೂ ಪ್ರೀತಿಸಬೇಕು ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ನಮ್ಮಲ್ಲಿ ಇಂಗ್ಲಿಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲಿಷ್ ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್ ಬಳಸಬಹುದೇ ಹೊರತು , ಇನ್ನುಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬಹಳ ವರ್ಷಗಳಿಂದ ಕನ್ನಡವನ್ನು ಆಡಳಿತ ಭಾಷೆಯಾಗಿದ್ದರೂ ಕೂಡ , ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು. 1983 ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 2023 ನವೆಂಬರ್ 1 ರಿಂದ ಒಂದು ವರ್ಷ ಕರ್ನಾಟಕ ಸಂಭ್ರಮವನ್ನು ಆಚರಿಸುವ ಮೂಲಕ , ಜನರಲ್ಲಿ ಕನ್ನಡ ಭಾಷಾ ಜಾಗೃತಿಯನ್ನು ಮೂಡಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ಏಕೀಕರಣವಾದ್ದು 1956 ನವೆಂಬರ್ 1 ರಂದು. ಕರ್ನಾಟಕ ಏಕೀಕರಣಕ್ಕೂ ಮುನ್ನ ಅನೇಕ ರಾಜ್ಯಗಳಲ್ಲಿ ಕನ್ನಡ ನಾಡು ಹರಿದು ಹಂಚಿಹೋಗಿದ್ದವು. ಭಾಷಾವಾರು ಪ್ರಾಂತ್ಯ ವಿಂಗಡನೆ ಘೋಷಣೆಯಾದ ಮೇಲೆ ಕರ್ನಾಟಕ ಏಕೀಕರಣವಾಗಬೇಕೆಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಅನೇಕರು ಏಕೀಕರಣಕ್ಕಾಗಿ ಹೋರಾಟ ಮಾಡಿದರು. ಸಾಂಪ್ರದಾಯಿಕವಾಗಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದರೂ ಮೈಸೂರು ರಾಜ್ಯವೆಂದೇ ಕರೆಯಲಾಗುತ್ತಿತ್ತು. ಮೈಸೂರು ರಾಜವಂಶಸ್ಥರು ಆಳಿದ್ದರಿಂದ ಆ ಹೆಸರಿತ್ತು ಎಂದರು.
ವಿಶಾಲ ಕರ್ನಾಟಕವಾದ ನಂತರ ಮುಂಬೈ ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಹಲವು ಪ್ರದೇಶಗಳು ಒಗ್ಗೂಡಿ ಕರ್ನಾಟಕವಾಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1973, ನವೆಂಬರ್ 01, ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. ಕರ್ನಾಟಕ ಗತವೈಭವ ಎಂಬ ಆಲೂರು ವೆಂಕಟರಾಯರ ಪುಸಕ್ತದಿಂದ ಆಯ್ದು ಅಖಂಡ ಕರ್ನಾಟಕಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ವಿವರಿಸಿದರು.
ಏಕೀಕರಣ ಕರ್ನಾಟಕಕ್ಕೆ ನವೆಂಬರ್ 01, 2023 ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರದವರು ಮಾಡಿಲ್ಲ. ಈ ಬಾರಿಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಟನೆ. ಇದನ್ನು ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ಸಂಭ್ರಮ-50 ಲಾಂಛನವನ್ನು ಬಿಡುಗಡೆ ಮಾಡಿದ್ದು, ಅದನ್ನು ವಿನ್ಯಾಸಗೊಳಿಸಿದ ರವಿರಾಜ್.ಜಿ.ಹುಲಗೂರು ಅವರನ್ನು ಅಭಿನಂದಿಸಿದರು. ಲಾಂಚನದ ವಿನ್ಯಾಶ ಉತ್ತಮವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.




