ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹ

1 hour ago

ಮೂಡುಬಿದಿರೆಗೆ ತಾಲೂಕು ಆಸ್ಪತ್ರೆ ಮಂಜೂರಿಗೆ ಒತ್ತಾಯ

ಸಿಪಿಐಎಂ ನಿಂದ ಪ್ರತಿಭಟನೆ

ಮಂಗಳೂರು: ಮೂಡುಬಿದಿರೆಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು, ಮೂಡುಬಿದಿರೆ ಸಮುದಾಯ ಆಸ್ಪತ್ರೆಗೆ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಯದೇವ ಹೃದಯದ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ನಿಮ್ಹಾನ್ಸ್ ನರರೋಗದ ಆಸ್ಪತ್ರೆಗಳ ಘಟಕ ಸ್ಥಾಪಿಸಬೇಕು ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಲವರ್ಧನೆಯ ಹಲವು ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ತಾಲೂಕು ಸಮಿತಿಯು ಮೂಡುಬಿದಿರೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿತು.

ಆರೋಗ್ಯ ರಂಗದ ವ್ಯಾಪಾರೀಕರಣದಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣಿಗಳು ವೈದ್ಯಕೀಯ ಕಾಲೇಜುಗಳು, ಕಾರ್ಪೊರೇಟ್ ಆಸ್ಪತ್ರೆಗಳ ಮಾಲಕರ ಆಜ್ಞಾವರ್ತಿಗಳಾಗಿದ್ದಾರೆ, ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಲಾಬಿಗಳಿಗೆ ಧಾರೆ ಎರೆಯುತ್ತಿದ್ದಾರೆ ಎಂದು ಪ್ರತಿಭಟನಾ ಸಭೆಯನ್ನು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಬೇಡಿಕೆ ಈಡೇರುವವರಗೆ ಹೋರಾಟವನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. 

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದಿರೆ ಸಮುದಾಯ ಆಸ್ಪತ್ರೆಗೆ ಕನಿಷ್ಟ ವೈದ್ಯರನ್ನು ಒದಗಿಸುವಂತೆ ಹಲವು ಸಲ ಗಮನ ಸೆಳೆದರೂ ಜನಪ್ರತಿನಿಧಿಗಳು ಮೌನ ಮುರಿಯುತ್ತಿಲ್ಲ. ಜಯದೇವ, ಕಿದ್ವಾಯಿ ಆಸ್ಪತ್ರೆಗಳ ಘಟಕ ಮಂಜೂರು ಆಗದಿರುವುದು ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿತೋರಿಸುತ್ತದೆ ಎಂದರು.

ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಮಾತನಾಡಿ, ಮೂಡುಬಿದಿರೆ ತಾಲೂಕು ಘೋಷಣೆ ಆಗುವಾಗ ಜನತೆ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ಸ್ಥಾಪನೆಯ ಕನಸು ಕಂಡಿದ್ದರು. ತಾಲೂಕು ಆಗಿ ವರ್ಷಗಳು ಕಳೆದರೂ ಅದು ಕನಸಾಗಿಯೆ ಉಳಿದಿದೆ. ಬದಲಿಗೆ ಇರುವ ಸಮುದಾಯ ಆಸ್ಪತ್ರೆಯನ್ನೂ ದುರ್ಬಲಗೊಳಿಸಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಡಿಲಿಗೆ ಹಾಕಲಾಗುತ್ತಿದೆ. ಮೂಡುಬಿದಿರೆಗೆ ತಾಲೂಕು ಆಸ್ಪತ್ರೆ ಮಂಜೂರು ಆಗದೆ ಹೋರಾಟ ನಿಲ್ಲಿಸುವುದಿಲ್ಲ, ಮುಂದಿನ ಹಂತದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಕಚೇರಿ ಮುಂಭಾಗ ಹಗಲು ರಾತ್ರಿ ಧರಣಿ ನಡೆಸುತ್ತೇವೆ ಎಂದು ಘೋಷಿಸಿದರು‌.

ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮಣಿ ಮೂಡುಬಿದಿರೆ ಸ್ವಾಗತಿಸಿದರು. ರಾಧಾ ಪುತ್ತಿಗೆ ಧನ್ಯವಾದ ಸಲ್ಲಿಸಿದರು. ಸಿಪಿಐಎಂ ತಾಲೂಕು ಪ್ರಮುಖರಾದ ಲಕ್ಷ್ಮಿ, ಬೇಬಿ ಶೆಟ್ಟಿ, ಕೃಷ್ಣಪ್ಪ ನಡಿಗುಡ್ಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು‌.

Leave a Reply