ಮಹಿಳಾ ಸ್ವ-ಸಹಾಯ ಸಂಘಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ವತಿಯಿಂದ 2024-25 ನೇ ಸಾಲಿನ ಸಂಜೀವಿನಿ ಯೋಜನೆಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸುವ ಗೃಹಪಯೋಗಿ ಮತ್ತು ಕರಕುಶಲ ವಸ್ತುಗಳ ಜಿಲ್ಲಾ ಮಟ್ಟದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾ ಪಂಚಾಯತ್ ಅತಿಥಿ ಗೃಹದ ಆವರಣದಲ್ಲಿ ಚಾಲನೆ ನೀಡಲಾಗಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡಕುಟುಂಬದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಿ, ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ್ಯ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ವೈಯಕ್ತಿಕ ಉದ್ಯಮ ಹಾಗೂ ಗುಂಪುಗಳಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಪೂರೈಸಲಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಮಾರಾಟ ಮೇಳಕ್ಕೆ ಖಾಯಂ ಸ್ಥಳ ಒದಗಿಸಲು ಕ್ರಮವಹಿಸಲಾಗುವುದು. ಸ್ವ-ಸಹಾಯ ಸಂಘ, ಮಹಿಳೆ ಉದ್ಯಮಿಗಳನ್ನು ಮತ್ತು ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ಅಳ್ನಾವರ, ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ಸೇರಿ ಏಳು ತಾಲೂಕುಗಳ ಗ್ರಾಮ ಪಂಚಾಯತ ಮಟ್ಟದ 34 ಸಂಜೀವಿನಿ ಮಹಿಳಾ ಒಕ್ಕೂಟಗಳ 59 ಉತ್ಪನ್ನಗಳನ್ನು ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆಯ 8 ಸಂಜೀವಿನಿ ಒಕ್ಕೂಟದ 8 ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಿ, ಮಾರಾಟಕ್ಕೆ ಇಡಲಾಗಿದೆ. ಸಾರ್ವಜನಿಕ ಗ್ರಾಹಕರು ಮೇಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಜಿಲ್ಲಾ ಪಂಚಾಯತ್ ಅದೀನದಲ್ಲಿ ಬರುವ ಗ್ರಾಮೀಣ ಮಟ್ಟದ ಸ್ವ-ಸಹಾಯ ಸಂಘಗಳ ಉತ್ಪನ್ನಗಳನ್ನು ಮತ್ತು ಕೈಗಾರಿಕಾ ಇಲಾಖೆಯ ಉದ್ಯಮಿದಾರರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮೇಳದಲ್ಲಿ ಅವಕಾಶ ಮಾಡಲಾಗಿದೆ ಎಂದರು.
ಏಪ್ರಿಲ್ 5 ರಿಂದ 10 ರವರಿಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತದೆ. ಸಂಜೆ 6 ರಿಂದ 8 ಗಂಟೆವರೆಗೆ ಎಸ್.ಎಚ್.ಜಿ ಗ್ರೂಪ್‍ಗಳು ಹಾಗೂ ಇತರರಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನನವರ, ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಎನ್.ಆರ್.ಎಲ್.ಎಂ. ಕಾರ್ಯಕ್ರಮ ಜಿಲ್ಲಾ ವ್ಯವಸ್ಥಾಪಕ ವಿನೋದ ಕಂಠಿ, ಜಿಲ್ಲಾ ವ್ಯವಸ್ಥಾಪಕ ಮಹೇಶ ಪಾಟೀಲ, ವಿನೋದ ಗಾಮನಗಟ್ಟಿ, ಎಲ್ಲ ತಾಲೂಕು ಅಧಿಕಾರಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಮೇಳದ ವೈಶಿಷ್ಟ್ಯ: ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಅರವಟಗಿ, ಮರೇವಾಡ, ಕುರುಬಗಟ್ಟಿ, ಉಪ್ಪಿನಬೇಟಗೇರಿ ಹಳ್ಯಾಳ, ಗಳಗಿ ದುಮ್ಮವಾಡ, ದಾಸ್ತಿಕೊಪ್ಪ, ಜಮ್ಮಿಹಾಳ, ನಲವಡಿ, ಮೊರಬ, ಬೇಗೂರ ಸೇರಿದಂತೆ ಸುಮಾರು 42 ಗ್ರಾಮಗಳ ಸಂಜೀವಿನಿ ಮಹಿಳಾ ಒಕ್ಕೂಟಗಳು ಭಾಗವಹಿಸಿವೆ.
ಮೇಳದಲ್ಲಿ ಖಾದಿ ಉತ್ಪನ್ನ, ಜೇನುತುಪ್ಪ, ಅಗರಬತ್ತಿ, ಮುತ್ತಿನ ಮಾಲೆ, ವಿವಿಧ ತಿಂಡಿ ತಿನಸು, ಸಿರಿಧಾನ್ಯ, ಕಸೂತಿ ವಸ್ತುಗಳು, ಎರೆಹುಳು ಗೊಬ್ಬರ ಸೇರಿದಂತೆ ಸುಮಾರು 100 ಹೆಚ್ಚು ಮನೆಯಲ್ಲಿ ತಯಾರಿಸಿದ್ದ ಉತ್ಪನ್ನಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.



