ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಹಲವು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸರ್ಕಾರ ವಿಚಾರದಲ್ಲಿ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಿಷಯವಾಗಿ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೋರ್ ವೆಲ್‍ಗಳು ಬತ್ತಿಹೋಗಿ ಅಂತರ್ಜಲ ಕುಸಿದಿದೆ. ರಾಜ್ಯದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿದ ಸಮಸ್ಯೆ ತೀವ್ರವಾಗಿದೆ. ಜಲಕ್ಷಾಮ ಉಂಟಾಗಿದೆ. ಬೇಸಿಗೆಗೂ ಮುನ್ನವೇ ಇಂಥ ಗಂಭೀರ ಪರಿಸ್ಥಿತಿಯನ್ನು ರಾಜ್ಯ ಅನುಭವಿಸುತ್ತಿದೆ ಎಂದರು.
ಕಳೆದ 30 ವರ್ಷಗಳಿಗೆ ಹೋಲಿಸಿದರೆ ಗರಿಷ್ಠ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಾಗಿದೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಕೆಆರ್‍ಎಸ್, ಆಲಮಟ್ಟಿ, ಭದ್ರಾ ಸೇರಿದಂತೆ ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಅರ್ಧದಷ್ಟಿದೆ. ಇದು ಎಲ್ಲ ಕ್ಷೇತ್ರಗಳ ಶಾಸಕರ ಸಮಸ್ಯೆಯಾಗಿದೆ. ಸರ್ಕಾರ ತಕ್ಷಣ ಈ ವಿಚಾರದಲ್ಲಿ ಗಮನಹರಿಸಬೇಕು ಎಂದರು.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಹಣವಿದ್ದರೆ ಹೊಸ ಬೋರ್ ವೆಲ್ ಕೊರೆಯಲು ಸಾಧ್ಯವಿಲ್ಲ. ಇರುವ ಬೋರ್ ವೆಲ್‍ಗಳನ್ನು ಡ್ರಿಲ್ ಮಾಡಬಹುದು ಅಷ್ಟೇ. ಇನ್ನು ಮುಂದಿನ ನಾಲ್ಕು ತಿಂಗಳು ಕಷ್ಟಕರವಾಗಿದೆ. ಪ್ರತಿ ಗ್ರಾಮಪಂಚಾಯ್ತಿಯಲ್ಲೂ ಹೊಸ ಬೋರ್ ವೆಲ್ ಕೊರೆಯಲು ಅನುಕೂಲವಾಗುವಂತೆ ಆದೇಶ ಮಾಡಬೇಕು. ಪ್ರತಿ ಗ್ರಾಮಪಂಚಾಯ್ತಿಗೆ 10 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಕುಡಿಯುವ ನೀರಿನ ವಿಚಾರದ ಚರ್ಚೆಗೆ ತಕರಾರಿಲ್ಲ. ಸಭಾಧ್ಯಕ್ಷರು ಯಾವ ರೂಪದಲ್ಲಿ ಚರ್ಚೆಗೂ ಕೊಟ್ಟರೂ ಸರ್ಕಾರ ಸಿದ್ಧವಿದೆ ಎಂದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಈ ವಿಚಾರವನ್ನು ನಿಲುವಳಿ ಸೂಚನೆಗೆ ಬದಲಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.




