ನೆನ್ನೆ ಶಿಗ್ಗಾವಿಯಲ್ಲಿ ಸಂಭವಿಸಿದ ದುರಂತ ಭಾರೀ ನೋವು ಮತ್ತು ಶೋಕದ್ದು. ಇಲ್ಲಿಯ ಹಿರೇಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ಹೋಗಿದ್ದ ಯುವಕನೊಬ್ಬ (ಎರಡು ಹೆಣ್ಣುಮಕ್ಕಳ ತಂದೆ) ತೆಪ್ಪ ಮುಗುಚಿಕೊಂಡು ನೀರಿಗೆ ಬಿದ್ದಿದ್ದಾನೆ. ಅದನ್ನು ಕಂಡು ಅಲ್ಲಿಯೇ ದಡದಲ್ಲಿದ್ದ ಆತನ ಇಬ್ಬರು ಸ್ನೇಹಿತರು ರಕ್ಷಿಸಲು ಹೋಗಿದ್ದಾರೆ. ಅದರಲ್ಲಿ ಮೊದಲು ಹೋದವನು ಯಾವಾಗ ನೀರಿಗೆ ಬಿದ್ದಿದ್ದವನು ಆತನನ್ನು ಗಟ್ಟಿಯಾಗಿ ಹಿಡಿದನೋ, ಅವನಿಂದ ತಪ್ಪಿಸಿಕೊಂಡು ಪಕ್ಕಕ್ಕೆ ಬಂದಿದ್ದಾನೆ. ಅವನ ಹಿಂದೆಯೇ ಹೋಗಿದ್ದ ಇನ್ನೊಬ್ಬ ಯುವಕ (ಮೂವರು ಹೆಣ್ಣುಮಕ್ಕಳ ತಂದೆ, ಹೆಂಡತಿ ಈಗ ನಾಲ್ಕನೇ ಮಗುವಿಗೆ ತುಂಬು ಗರ್ಭಿಣಿ) ಮೊದಲಿಗೆ ನೀರಿಗೆ ಬಿದ್ದವನನ್ನು ಎಳೆದು ತರಲಾಗದೆ ಮತ್ತು ಬಿಡಿಸಿಕೊಳ್ಳಲೂ ಆಗದೆ ಜೊತೆಗೇ ಮುಳುಗಿದ್ದಾನೆ.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ನೆನ್ನೆ ಸಂಜೆ 4ರ ಸಮಯದಲ್ಲಿ ಆದ ದುರ್ಘಟನೆ ಇದು. ನೀರಲ್ಲಿ ಮುಳುಗಿ ಹುಡುಕುವ ಈಜುಗಾರರು ಮತ್ತು ಶೋಧಕಾರ್ಯ ಮಾಡುವ ಸಿಬ್ಬಂದಿ ರಾತ್ರಿ 8ರ ತನಕ ಹುಡುಕಿದರೂ ಶವಗಳು ಪತ್ತೆಯಾಗಿಲ್ಲ. ಈಗ ಬೆಳಗ್ಗೆ ಏಳೂಮುಕ್ಕಾಲು ಗಂಟೆಗೆ ಶೋಧ ಕಾರ್ಯ ಪುನರಾರಂಭವಾಗಿದೆ. ಹರಿಹರದ ಮುಳುಗುತಜ್ಞ ಯುವಕರು ಬಂದಿದ್ದಾರೆ. ಕೆರೆ ದೊಡ್ಡದಿದೆ ಮತ್ತು ಕೋಡಿ ಬಿದ್ದಿದೆ. ದೊಡ್ಡದೊಡ್ಡ ಗುಂಡಿಗಳು ಇರುವ ಮತ್ತು ನೀರಿನ ಹರಿವು ಇರುವ ಕೆರೆಯಲ್ಲಿ ಶವಗಳು ತಾವಾಗೇ ತೇಲದೆ ಅವನ್ನು ಹುಡುಕುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ.
ಈ ಬಾರಿಯ ಭಾರೀಮಳೆಗೆ ಇಲ್ಲಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ತುಂಬಿವೆ. ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಯಾರದು ತಪ್ಪು ಎಂದು ಹೇಳಲಾಗದ ಸ್ಥಿತಿ. ಎಚ್ಚರದಿಂದಿರುವಾಗಲೇ ಅಪಾಯ ತಪ್ಪಿಸಲಾಗದು; ಇನ್ನು ಎಚ್ಚರ ತಪ್ಪಿದರೆ?
ಅಂದಹಾಗೆ, ಗೆಳೆಯನನ್ನು ಉಳಿಸಲು ಹೋಗಿ ತಾನೂ ಮುಳುಗಿದ ಹಜ್ರತ್ ಅಲಿ ಮುಖೇರಿ ಇತ್ತೀಚೆಗೆ ತಾನೇ KRS ಪಕ್ಷದ ಸದಸ್ಯತ್ವ ಪಡೆದಿದ್ದ ಸಂಭಾವಿತ ಮತ್ತು ದೈವಭೀರು ಯುವಕ. ಊರು ಶೋಕದಲ್ಲಿ ಮುಳುಗಿದೆ.
ಅಪಾಯ ಆದನಂತರ ನಾವು ಘಟನೆಯ ಬಗ್ಗೆ ಏನು ಬೇಕಾದರೂ ಹೇಳಬಹುದು, ಆದರೆ ನಡೆದದ್ದನ್ನು ಬದಲಿಸಲು ಆಗದು. ಆದರೆ ಮುಂದಕ್ಕೆ ಎಚ್ಚರದಿಂದ ಇರುವುದನ್ನು ಬಿಟ್ಟುಕೊಡಬಾರದು.
- ರವಿಕೃಷ್ಣಾರೆಡ್ಡಿ, ಅಧ್ಯಕ್ಷ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷ




