ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ
ಅ.1 ರಿಂದ 14 ರ ವರೆಗಿನ ಮಳೆಗೆ ಜಿಲ್ಲೆಯಲ್ಲಿ ಹಾನಿ
ಧಾರವಾಡ: ವಾಯುಭಾರ ಕುಸಿತದಿಂದ ಧಾರವಾಡ ಬೆಲೆಯಲ್ಲಿ ಹಾಗೂ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಅಕ್ಟೋಬರ್ 09 ರಿಂದ 16 ರವರೆಗೆ ಮಳೆಯಾಗುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತಾಲೂಕು ಆಡಳಿತಗಳು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಎಲ್ಲರೂ ಅವರವರ ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ವಿವಿಧ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ, ಮಾತನಾಡಿದರು.
ಜಿಲ್ಲಾಡಳಿತ ಮನ್ನಚ್ಚರಿಕಾ ಕ್ರಮವಾಗಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳ ಅಚ್ಚುಕಟ್ಟು ಪ್ರದೇಶದ ಪ್ರಸ್ತುತ ಹಾಗೂ ಮುಂದಿನ ಎರಡು ದಿನ ಸಂಭವಿಸಬಹುದಾದ ಮಳೆ ಪ್ರಮಾಣದ ವಿವರಗಳನ್ನು ರಾಜ್ಯ ಹವಾಮಾನ ಇಲಾಖೆಯಿಂದ ಪಡೆದುಕೊಂಡು ತಾಲ್ಲೂಕಿನ ಅಧಿಕಾರಿ, ಸಿಬ್ಬಂಧಿಗಳಿಗೆ ಪ್ರತಿ ದಿನ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ ವಿಪತ್ತು ನಿರ್ವಹಣಾ ತಂಡದಿಂದ ಪ್ರವಾಹದ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು ಹಾಗೂ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದ್ದು, ಈ ಕಾರ್ಯಕ್ರಮಗಳಿಂದ ಜನರಲ್ಲಿ ತಿಳುವಳಿಕೆ ಮೂಡಿದೆ. ಜಿಲ್ಲೆಯಲ್ಲಿ ಯಾವುದೇ ಜೀವ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರವಾಹದ ಕುರಿತು ಈ ಮೂಲಕವೂ ಮುನ್ನೆಚ್ಚರಿಕೆಯನ್ನು ನೀಡಲಾಗುತ್ತಿದೆ ಎಂದರು.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ 5 ರಕ್ಷಣಾ ತಂಡಗಳನ್ನು, 2 ಬೋಟ್, 50 ಲೈಪ್ ಜಾಕೇಟ್, 60 ಲೈಪ್ ಬಾಯ್, 150 ರೇನ್ ಕೋಟ್ಗ್ಳು ಸೇರಿದಂತೆ ವಿವಿಧ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳಲಾಗಿದೆ. ಅಕ್ಟೋಬರ 12 ರಂದು ಬೆಣ್ಣಿಹಳ್ಳ ಪ್ರವಾಹದಲ್ಲಿ ಸಿಲುಕಿದ್ದ (ಕಾಲವಾಡ, ಮಂಟೂರ) ಇಬ್ಬರು ವ್ಯಕ್ತಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸಿ, ರಕ್ಷಿಸಲಾಗಿದೆ ಎಂದರು.
ಅ. 1 ರಿಂದ 14 ರವರೆಗಿನ ಮಳೆ ವಿವರ: ಅಕ್ಟೋಬರ 1 ರಿಂದ 14 ರವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಆಗಿದೆ. ದಾಖಲೆ ಪ್ರಕಾರ ಧಾರವಾಡ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 61.2 ಮೀ.ಮೀ. ಬದಲಾಗಿ 141.2 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 61.6 ಮೀ.ಮೀ. ಬದಲಾಗಿ 130.6 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ.
ಕಲಘಟಗಿ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 66.2 ಮೀ.ಮೀ. ಬದಲಾಗಿ 155.1 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಕುಂದಗೋಳ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 60.2 ಮೀ.ಮೀ. ಬದಲಾಗಿ 171.5 ಮೀ.ಮೀ. ರಷ್ಟು ಮಳೆಯಾಗಿದೆ.
ನವಲಗುಂದ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 59.6 ಮೀ.ಮೀ. ಬದಲಾಗಿ 87.7 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 64.3 ಮೀ.ಮೀ. ಬದಲಾಗಿ 129.1 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ.
ಅಳ್ನಾವರ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 62.4 ಮೀ.ಮೀ. ಬದಲಾಗಿ 145 ಮೀ.ಮೀ. ರಷ್ಟು ಹೆಚ್ಚು ಮಳೆಯಾಗಿದೆ. ಅಣ್ಣಿಗೇರಿ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ 63.8 ಮೀ.ಮೀ. ಬದಲಾಗಿ 45.3 ಮೀ.ಮೀ. ರಷ್ಟು ಮಳೆಯಾಗಿದೆ.
25,525 ಹೆಕ್ಟೇರ್ ಬೆಳೆ ಹಾನಿ: ಅಕ್ಟೋಬರ್ 1 ರಿಂದ 14 ರವರೆಗೆ ಆಗಿರುವ ಅತಿಯಾದ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ 25,525 ಹೆಕ್ಟೇರ್ ಭೂ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿ ಆಗಿವೆ.
ಮನೆ ಹಾನಿ, ಬೆಳೆ ಹಾನಿಯನ್ನು ಯಾವುದೇ ವ್ಯತ್ಯಾಸಗಳನ್ನು ಮಾಡದೇ, ಯತಾವತ್ತಾಗಿ ದಾಖಲಿಸಬೇಕು. ತಪ್ಪು ಮಾಹಿತಿ ವರದಿ ಮಾಡಿದರೆ, ಅಂತಹ ಅಧಿಕಾರಿ ಮತ್ತು ಅವರ ಮೇಲಾಧಿಕಾರಿ ಮೇಲೆ ಕ್ರಮ ಕ್ರಮಕೈಗೊಳ್ಳಲಾಗುವುದು.
ಜಂಟಿ ಸಮೀಕ್ಷೆ ಮಾಡುವಲ್ಲಿ ಹಾಗೂ ವರದಿ ದಾಖಲಿಸುವಲ್ಲಿ ಯಾರ ಒತ್ತಡಗಳಿಗೂ ಒಳಗಾಗದೇ ನಿಯಮಾನುಸಾರ ವಾಸ್ತವ ಅಂಶಗಳನ್ನು ವರದಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಕೃಷಿ ಬೆಳೆ ಹಾನಿ: ನವಲಗುಂದ ತಾಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 4500 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 4,200 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 8,950 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಅಣ್ಣಿಗೇರಿ ತಾಲೂಕಿನಲ್ಲಿ 200 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 100 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 500 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 800 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಕುಂದಗೋಳ ತಾಲೂಕಿನಲ್ಲಿ 1,500 ಹೆಕ್ಟೇರ್ ಪ್ರದೇಶದ ನೆಲಗಡಲೆ (ಶೇಂಗಾ), 2,000 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 5,200 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 8,700 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 4,000 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 2,500 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 6,500 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1,950 ಹೆಕ್ಟೇರ್ ನೆಲಗಡಲೆ (ಶೇಂಗಾ), 10,600 ಹೆಕ್ಟೇರ್ ಗೋವಿನಜೋಳ ಹಾಗೂ 12,400 ಹೆಕ್ಟೇರ್ ಹತ್ತಿ ಸೇರಿ ಒಟ್ಟು 24,950 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾದ ವರದಿ ಆಗಿದೆ.
ತೋಟಗಾರಿಕೆ ಬೆಳೆ ಹಾನಿ: ನವಲಗುಂದ ತಾಲೂಕಿನಲ್ಲಿ 15 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಕುಂದಗೋಳ ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 20 ಹೆಕ್ಟೇರ್ ವಿವಿಧ ತರಕಾರಿ ಬೆಳೆ ಹಾಗೂ 40 ಹೆಕ್ಟೇರ್ ಹೂವಿನ ಬೆಳೆಯು ಮಳೆಯಿಂದ ಹಾನಿಯಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 575 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಮಳೆಯಿಂದ ಹಾನಿಯಾಗಿದೆ.
ಜಿಲ್ಲೆಯಲ್ಲಿ ಜೂನ್ 1 ರಿಂದ 30 ರವರೆಗೆ ಆಗಿದ್ದ ಅತಿಯಾದ ಮತ್ತು ಅಕಾಲಿಕ ಮಳೆಯಿಂದಾಗಿ ಒಟ್ಟು 8,778.85 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾನಿಯಾಗಿತ್ತು. ಇದಕ್ಕೆ ಸಂಬಂಧಿಸಿದ ಡಾಟಾಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮತ್ತು ಅಕ್ಟೋಬರ್ 1 ರಿಂದ 14 ರವರೆಗೆ 25,525 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಮಳೆಯಿಂದ ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿ ಸಲ್ಲಿಕೆ ಆಗಿದ್ದು, ಜಂಟಿ ಸಮೀಕ್ಷೆ ಕೈಗೊಂಡ ನಂತರ ಇವುಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
ಒಟ್ಟಾರೆಯಾಗಿ ಜೂನ್ ಮತ್ತು ಅಕ್ಟೋಬರ ಎರಡು ತಿಂಗಳಲ್ಲಿ ಒಟ್ಟು 34,303.85 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಮಳೆಯಿಂದ ಹಾನಿಯಾಗಿವೆ.
ಜನ, ಜಾನುವಾರು ಹಾನಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಅವಧಿಯ ಅಕ್ಟೋಬರ 01 ರಿಂದ 14 ರವರೆಗೆ ಭಾರಿ ಮಳೆ, ಪ್ರವಾಹದಿಂದಾಗಿ ವಿವಿಧ ರೀತಿಯ ಹಾನಿ ಆಗಿದೆ. ತಾಲೂಕಿನ ತಹಶಿಲ್ದಾರರು ಈ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಧಾರವಾಡ ತಾಲೂಕಿನಲ್ಲಿ ಒಂದು ಮನೆ ಪೂರ್ಣವಾಗಿ ಮತ್ತು 60 ಮನೆಗಳು ಭಾಗಶಃ ಹಾನಿ ಆಗಿದ್ದು, 12 ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಅಳ್ನಾವರ ತಾಲೂಕಿನಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 11 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಅದರಗುಂಚಿ ಗ್ರಾಮದಲ್ಲಿ ಒಂದು ಸಣ್ಣ ಜಾನುವಾರು (ಆಡು) ಮೃತಪಟ್ಟಿದೆ.
ಕಲಘಟಗಿ ತಾಲೂಕಿನಲ್ಲಿ ಒಂದು ಮನೆ ಪೂರ್ಣ ಹಾಗೂ ಒಂದು ಗುಡಿಸಲು ಹಾನಿ ಆಗಿದೆ. ಮತ್ತು ತಾಲೂಕಿನಲ್ಲಿ 18 ಮನೆಗಳು ಭಾಗಶಃ ಹಾನಿ ಆಗಿವೆ. ಕುಂದಗೋಳ ತಾಲೂಕಿನಲ್ಲಿ 25 ಮನೆಗಳು ಭಾಗಶಃ ಹಾನಿಯಾಗಿವೆ. ನವಲಗುಂದ ತಾಲೂಕಿನಲ್ಲಿ 56 ಮನೆಗಳು ಭಾಗಶಃ ಹಾನಿ ಆಗಿದ್ದು, 131 ಮನೆಗಳಿಗೆ ಮಳೆ ನೀರು ನುಗ್ಗಿ, ತೊಂದರೆ ಆಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ 4 ಮನೆಗಳಿಗೆ ಭಾಗಶಃ ಹಾನಿ ಆಗಿದ್ದು, ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು, ಒಂದು ದೊಡ್ಡ ಪ್ರಾಣಿ (ಹೋರಿ) ಮೃತಪಟ್ಟಿದೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 3 ಮನೆಗಳು ಭಾಗಶಃ ಹಾನಿ ಆಗಿದ್ದು, ತಾರಿಹಾಳ ವಾಜಪೇಯಿ ನಗರದಲ್ಲಿ ಒಂದು ಎಮ್ಮೆ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.
ಒಟ್ಟಾರೆ ಆಗಿ ಜಿಲ್ಲೆಯ ಎಲ್ಲ ತಾಲೂಕುಗಳು ಸೇರಿ ಮೂರು ಜಾನುವಾರ ಜೀವ ಹಾನಿ ಆಗಿದ್ದು, ನಿಯಮಾವಳಿ ಪ್ರಕಾರ ಪರಿಹಾರ ಹಣ ಮಂಜೂರಿ ಮಾಡಲಾಗಿದೆ. ಮತ್ತು ಎರಡು ಮನೆಗಳು ಪೂರ್ಣವಾಗಿ ಹಾಗೂ 178 ಮನೆಗಳು ಭಾಗಶಃ ಹಾನಿ ಸೇರಿ ಒಟ್ಟು 180 ಮನೆಗಳು, ಒಂದು ಗುಡಿಸಲು ಹಾನಿ ಆಗಿದೆ. ಒಟ್ಟು 143 ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಆಗಿದ್ದು, ಎಲ್ಲ ಪ್ರಕರಣಗಳ ಸಮೀಕ್ಷೆ ಮಾಡಿ ನಿಯಮಾವಳಿ ಪ್ರಕಾರ ಪರಿಹಾರ ವಿತರಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶನ ನೀಡಿದರು.
ಪ್ರಾಥಮಿಕ, ಪ್ರೌಢಶಾಲಾ ಕೊಠಡಿಗಳಿಗೆ ಹಾನಿ: ಅಕ್ಟೋಬರ 9 ರಿಂದ 14 ರವರೆಗೆ ಆಗಾಗ ಸುರಿದ ಭಾರಿ ಮತ್ತು ನಿರಂತರ ಮಳೆಯಿಂದಾಗಿ ಜಿಲ್ಲೆಯ ವಿವಿಧ ಶಾಲೆಗಳ ಕೊಠಡಿಗಳು ಮತ್ತು ಗೋಡೆ, ಮೇಲ್ಛಾವಣಿ ಸೋರಿಕೆ ಆಗಿವೆ.
ಕಲಘಟಗಿ ಕ್ಲಸ್ಟರ್ ಮಿಶ್ರಿಕೋಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹಾಗೂ ಗೋಡೆ ದುರಸ್ತಿ, ಮುಕ್ಕಲ್ ಕ್ಲಸ್ಟರ್ ನೆಲ್ಲಿಹರವಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮೇಲ್ಛಾವಣಿ ಸೋರಿಕೆ, ಕಲಘಟಗಿಯ ಸರಕಾರಿ ಉರ್ದು ಪ್ರೌಢಶಾಲೆಯ ಕೊಠಡಿ ಮೇಲ್ಛಾವಣಿ ಸೋರಿಕೆ, ಹುಬ್ಬಳ್ಳಿ ಶಹರದ ಪೆಂಡಾರಗಲ್ಲಿಯ ಕಮರಿಪೇಟೆ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.6 ರ ಮೇಲ್ಛಾವಣಿ ಸೋರಿಕೆ, ಆನಂದನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸೋರಿಕೆ, ಧಾರವಾಡ ಶಹರದ ಮಾಳಮಡ್ಡಿ ಕ್ಲಸ್ಟರದ ಶ್ರೀರಾಮನಗರ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣೆ ಹಾಗೂ ಗೋಡೆ ದುರಸ್ತಿ ಮತ್ತು ಹುಬ್ಬಳ್ಳಿ ಗ್ರಾಮೀಣದ ರಾಯನಾಳದ ಅಂಚಟಗೇರಿ ಸರಕಾರಿ ಪ್ರೌಢಶಾಲೆಯ ಮೇಲ್ಛಾವಣೆ ಹಾಗೂ ಗೋಡೆ ದುರಸ್ತಿ ಸೇರಿದಂತೆ ಒಟ್ಟು 20 ಆರ್.ಸಿ.ಸಿ. ಕೊಠಡಿಗಳಿಗೆ ಸ್ವಲ್ಪಮಟ್ಟಿಗೆ ಹಾನಿ ಆಗಿದ್ದು, ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವೇದಿಕೆಯಲ್ಲಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಆರ್.ಎಂ.ಸೋಪ್ಪಿಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕರಾದ ಜಯಶ್ರೀ ಹಿರೇಮಠ ಮತ್ತು ಡಾ.ಆರ್.ಜಿ. ಸಂದೀಪ, ತಹಶಿಲ್ದಾರರಾದ ಬಸವರಾಜ ಬೆಣ್ಣಿಶಿರೂರ, ಕೆ.ಆರ್.ಪಾಟೀಲ, ಸುಧೀರ ಸಾಹುಕಾರ, ವಿರೇಶ ಮುಳಗುಂದಮಠ, ರಾಜು ಮಾವರಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ವರದಿ ಸಲ್ಲಿಸಿದರು.




