ಬಿಜೆಪಿಯವರ ಆರ್ಭಟವನ್ನು ನೋಡಿದರೆ ಇವರ ಕಾಲದಲ್ಲಿ ಬೆಲೆಗಳನ್ನ ಹೆಚ್ಚಿಸದೆ ಸ್ವರ್ಗಲೋಕದ ಆಡಳಿತವನ್ನು ನೀಡಿದ್ದರೇನೋ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ರಾಜ್ಯ ಸರ್ಕಾರ ಹಾಲಿನ ದರ ಏರಿಕೆಯನ್ನು ಮಾಡಿರುವುದು ರೈತರಿಗೆ ಪ್ರೋತ್ಸಾಹ ಧನವನ್ನ ಕೊಡುವ ಕಾರಣದಿಂದ. ರೈತರಿಗೂ ಸಹ ಇತ್ತೀಚಿನ ದಿನಗಳಲ್ಲಿ ಹಸು ಸಾಕಾಣೆ ನಡೆಸಲು ಸಾಕಷ್ಟು ಹಣ ಖರ್ಚಾಗುತ್ತಿದೆ. ಈ ನೆಲೆಯಲ್ಲಿ ಹಾಲಿನ ದರವನ್ನು ಹೆಚ್ಚಿಸಿ ಹಣವನ್ನು ರೈತರಿಗೆ ಕೊಡುವಂತಹ ಕೆಲಸ ಮಾಡುತ್ತಿದೆ.
ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ಇಲಾಖೆಗಳ ಖರ್ಚುವೆಚ್ಚಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳ ನಿರ್ವಹಣೆಗಾಗಿ ಒಂದಷ್ಟು ಏರಿಕೆಗಳು ಅನಿವಾರ್ಯವಾಗುತ್ತದೆ.
ಬೆಲೆ ಏರಿಕೆಯನ್ನು ಯಾರೂ ಸಹ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಬೆಲೆ ಏರಿಕೆಯನ್ನು ಮಾಡದೆ ಯಾವುದೇ ಸರ್ಕಾರ ಆಡಳಿತ ನಡೆಸಿರುವುದು ರಾಜ್ಯ ಮತ್ತು ಕೇಂದ್ರದಲ್ಲಿ ಇಲ್ಲವೇ ಇಲ್ಲ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಸಾಕಷ್ಟು ಪ್ರಮಾಣದಲ್ಲಿ ಮಧ್ಯಮ ವರ್ಗದವರ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ. ಕೇಂದ್ರ ಸರ್ಕಾರ ರಾಜ್ಯಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕಾರಣದಿಂದ ವಿರೋಧ ಪಕ್ಷದ ಸರ್ಕಾರಗಳಿರುವ ರಾಜ್ಯಗಳ ಆರ್ಥಿಕ ಪರಿಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗಿಲ್ಲ.
ಬಿಜೆಪಿಯವರು ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಬರಬೇಕಾಗಿರುವ ತೆರಿಗೆಯ ಪಾಲನ್ನು ಕೊಡಿಸುವಲ್ಲಿ ಬಾಯಿ ಬಿಡದೆ ಮೌನವಾಗಿರುತ್ತಾರೆ. ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ರಾಜ್ಯಕ್ಕೆ ಬರಬೇಕಾಗಿರುವ ಅನುದಾನದ ವಿಚಾರದಲ್ಲಿಯೂ ಬಾಯಿ ಬಿಡುವುದಿಲ್ಲ.
2008ರಿಂದ 2013ರವರೆಗೆ ಮತ್ತು 2019ರಿಂದ 2023ರವರೆಗೆ ಬಿಜೆಪಿ ಸರ್ಕಾರ, ಇದೇ ರೀತಿಯಲ್ಲಿ 2006 ರಿಂದ 2008ರವರೆಗೆ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಯಾವುದೇ ಪದಾರ್ಥದ ಬೆಲೆಯನ್ನ ಏರಿಸದೆ ಸರ್ಕಾರವನ್ನು ನಡೆಸಿದ್ದಾರೆಯೇ? ಹಾಲಿನ ದರವನ್ನ, ನೀರಿನ ದರವನ್ನ, ಸಾರಿಗೆ ದರವನ್ನ, ವಿದ್ಯುತ್ ದರವನ್ನ ಏರಿಕೆ ಮಾಡದೆ ಸರ್ಕಾರವನ್ನು ನಡೆಸಿದ್ದಾರೆ ಎನ್ನುವ ರೀತಿಯಲ್ಲಿ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ.
ಎಲ್ಲ ಪಕ್ಷದ ಸರ್ಕಾರಗಳ ಅವಧಿಯಲ್ಲಿಯೂ ಕಾಲಕಾಲದಲ್ಲಿ ಬೆಲೆಗಳು ಏರಿಕೆ ಆಗಿರುತ್ತದೆ. ವಿರೋಧ ಪಕ್ಷಗಳು ಜನರ ಪರವಾಗಿ ಧ್ವನಿಯನ್ನ ತೆಗೆಯಲು ಹೋರಾಟವನ್ನು ಮಾಡಿರುತ್ತಾರೆ. ಆದರೆ ಹೋರಾಟ ಕೇವಲ ರಾಜಕಾರಣಕ್ಕೆ ಸೀಮಿತವಾಗಬಾರದು, ಜನರನ್ನು ತಪ್ಪು ದಾರಿಗೆ ಎಳೆಯಬಾರದು ಇಲ್ಲಿ ವಸ್ತುನಿಷ್ಟ ವಿಮರ್ಶೆಯಾಗಬೇಕು.
ಬಿಜೆಪಿ ನಾಯಕರು ಪದೇಪದೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಕಾರಣದಿಂದ ಬೆಲೆಗಳನ್ನ ಏರಿಸಿದ್ದಾರೆ ಎಂದು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಈ ಹಿಂದೆ ಇವರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಯಾವ ಗ್ಯಾರಂಟಿ ನೀಡದಿದ್ದರೂ ಬೆಲೆಗಳನ್ನು ಏರಿಸಿದ್ದರು. ಕೇಂದ್ರ ಸರ್ಕಾರ ಯಾವುದೇ ರೀತಿಯ ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೂ ಸಹ ಕಳೆದ 11 ವರ್ಷದಲ್ಲಿ ಆಹಾರ ಪದಾರ್ಥ, ಪೆಟ್ರೋಲ್, ಡೀಸೆಲ್ ಬೆಲೆಗಳನ್ನು, ಅಡುಗೆ ಅನಿಲದ ದರವನ್ನು ಏರಿಕೆ ಮಾಡಿದೆ. ಇವುಗಳ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುವುದಿಲ್ಲ?
ಕೇಂದ್ರ ಸರ್ಕಾರ ಹಲವಾರು ರೀತಿಯಲ್ಲಿ ಜನರಿಗೆ ಹೊರೆಯನ್ನ ಹಾಕಿರುತ್ತದೆ. ಬ್ಯಾಂಕುಗಳಲ್ಲಿ ತಮ್ಮ ಖಾತೆಯನ್ನ ನಿರ್ವಹಣೆ ಮಾಡುವ ಸಂದರ್ಭದಲ್ಲಿ ನಿರ್ವಹಣಾ ಶುಲ್ಕವನ್ನ ಹೆಚ್ಚಿಸಿರುತ್ತಾರೆ. ವಿಮೆ ಯೋಜನೆಗಳ ಮೇಲೆ ಜಿಎಸ್ಟಿಯನ್ನ ಹಾಕಿ ಜನರಿಗೆ ಬರೆಯನ್ನ ಹಾಕಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿವರ್ಷವೂ ಟೋಲ್ ಗಳ ದರವನ್ನ ಹೆಚ್ಚಿಸಿ ಜನರಿಗೆ ತೊಂದರೆಯನ್ನು ಕೊಟ್ಟಿದೆ. ಇವುಗಳ ಬಗ್ಗೆ ಬಿಜೆಪಿ ಅವರು ಮಾತನಾಡಲಿ.
ದೇಶದಲ್ಲಿ ಯಾವುದೇ ರಾಜ್ಯದಲ್ಲೂ ಬೆಲೆಗಳು ಹೆಚ್ಚಿಗೆ ಮಾಡಿಲ್ಲ ಕೇವಲ ಕರ್ನಾಟಕದಲ್ಲಿ ಮಾತ್ರವೇ ಎನ್ನುವ ರೀತಿಯಲ್ಲಿ ಆರ್ಭಟಿಸುವುದನ್ನು ಬಿಡಿ, ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ನಮ್ಮ ಪಾಲಿನ ತೆರಿಗೆ ಹಣವನ್ನ ಕೊಡಿಸಿ ಕೊಡಿ, ಅದೇ ರೀತಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಯೋಜನೆಗಳ ಹಣವನ್ನ ರಾಜ್ಯಕ್ಕೆ ನೀಡುವಂತೆ ಒತ್ತಾಯವನ್ನ ಹಾಕಿ, ಇಲ್ಲದಿದ್ದರೆ ಬಿಜೆಪಿಯವರ ಹೋರಾಟ ಕೇವಲ ರಾಜಕಾರಣಕ್ಕಾಗಿ ನಡೆಸುತ್ತಿರುವ ಹೋರಾಟಗಳಾಗುತ್ತವೆ.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ 7ನೇ ವೇತನದ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರಿಗೆ ಹೆಚ್ಚುವರಿಯಾಗಿ ಸಂಬಳವನ್ನು ಘೋಷಣೆ ಮಾಡಿದೆ. ಮುಂಗಡಪತ್ರದಲ್ಲಿ ಅಭಿವೃದ್ಧಿಗೂ ಸಹ ಸಾಕಷ್ಟು ಹಣವನ್ನ ಮೀಸಲಿಟ್ಟು, ಆರ್ಥಿಕ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಿರ್ವಹಣಾ ವೆಚ್ಚ ಸರಿದೂಗಿಸುವ ಸಲುವಾಗಿ ಬೆಲೆ ಏರಿಕೆ ಮಾಡಿದೆ.
ಬಡವರು ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ರೀತಿಯ ಆರ್ಥಿಕ ಹೊಡೆತ ಬೀಳದಂತೆ ಹಲವಾರು ನೆರವಿನ ಕಾರ್ಯಕ್ರಮಗಳನ್ನು ಸಹ ಜೊತೆಜೊತೆಯಲ್ಲಿಯೇ ನೀಡುತ್ತಿರುವುದರಿಂದ ಸಮತೋಲನವಾದಂತಹ ವ್ಯವಸ್ಥೆ ನಿರ್ಮಾಣವಾಗುತ್ತಿದೆ.
ಬಿಜೆಪಿಯವರಿಗೆ ನಿಜಕ್ಕೂ ತಮ್ಮ ಹೋರಾಟದಲ್ಲಿ ಪ್ರಾಮಾಣಿಕತೆ ಇದ್ದರೆ ತಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಬಾರಿ ಯಾವ ಬೆಲೆಯನ್ನು ಹೆಚ್ಚಿಸಿದ್ದಾರೆ ಎಂಬುದನ್ನು ಜನರಿಗೆ ಮಾಹಿತಿ ನೀಡಲಿ. ಅದೇ ರೀತಿಯಲ್ಲಿ 2014 ರಿಂದ ಇತ್ತೀಚಿನ ವರ್ಷದ ತನಕ ಯಾವ ಯಾವ ಪದಾರ್ಥಗಳ ಬೆಲೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದನ್ನು ಜನರಿಗೆ ತಿಳಿಸಿ ನಂತರ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಿದರೆ ಅದರಲ್ಲಿ ಅರ್ಥವಿರುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು



