ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಹಾಗೂ ಇತರೆ ದಲಿತ ಹೋರಾಟಗಾರರು ಒಂದುವೇಳೆ ಅವರವರ ಕಾಲಘಟ್ಟಗಳಲ್ಲಿ ಅಸಂಸದೀಯ ಮತ್ತು ಪ್ರಚೋದನಕಾರಿ ಭಾಷಣದ ಮೂಲಕ ಜನ ಸಂಘಟನೆ ಮಾಡಲು ಹೋಗಿದ್ದರೆ, ಈ ಜಾತಿ ವರ್ತುಲ ಸಮಾಜದೊಳಗೆ ನಮಗೆ ಅವರಾರು ನಮ್ಮ ನಾಯಕರಾಗುತ್ತಿರಲಿಲ್ಲ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಅಂಬೇಡ್ಕರ್ ಚೌಡರ ಕೆರೆಯ ಆಂದೋಲನ ಆರಂಭಿಸಿದ್ದು ಮಾನವೀಯ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ. ಆದರೆ ಅದು ಅವರನ್ನು ಅನೇಕ ಪರ್ಯಾಯ ಚಿಂತನೆಗೆ ಈಡು ಮಾಡಿತು. ಆಮೇಲೆ ಮನುಸ್ಮೃತಿ ಸುಟ್ಟರು, ತರುವಾಯ ಕಾಳರಾಮ ದೇವಸ್ಥಾನ ಪ್ರವೇಶವಾಯಿತು. ಇವುಗಳಿಂದ ಅವರಿಗೆ ಒಂದು ಗುರುತರವಾದ ಆಲೋಚನೆ ಬಂತು. ಅಂದರೆ ಅಸಂಘಟಿತ ಸಮುದಾಯಗಳ ವಿಮೋಚನೆ ರಕ್ತ ರಹಿತ ಹೋರಾಟಗಳ ಮೂಲಕ ಆಗಬೇಕು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಸಾಧ್ಯವಿದೆ ಎಂಬ ಈ ಚಿಂತನೆಗಳಿಗೆ ಬೆಂಬಲಿಗರಾದರು. ಹೋರಾಟ ಮತ್ತು ಹೋರಾಟಗಾರರು ಕಾನೂನು ಬೆಂಬಲ ಪಡೆದಾಗ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮನದಟ್ಟು ಮಾಡಿಕೊಟ್ಟರು. ಈ ಅಂಬೇಡ್ಕರ್ ನಮ್ಮ ನಡುವೆ ಬದುಕಿದ್ದಾರೆ.
ಹಾಗೆಯೇ ಬಾಬೂಜೀ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆ ಬಾರದಂತೆ ಚಳುವಳಿ ಮಾಡಬೇಕೆಂದು ಅಭಿಮತಿಸಿದವರು. ಇಂತಹ ಮಹಾನೀಯರುಗಳು ಒಂದುವೇಳೆ ಸೈದ್ಧಾಂತಿಕವಾಗಿ ಹೋರಾಟ ಮಾಡದೆ ಇಂದಿನ ಕೆಲವು ಅಸ್ವಸ್ಥ ಹೋರಾಟಗಾರರ ನಡಾವಳಿಗಳಂತೆ ಹೋರಾಟ ಹೂಡಿದ್ದರೆ ಶೋಷಿತರ ಬದುಕು ಮೂರಾಬಟ್ಟೆ ಆಗುತ್ತಿತ್ತು.
ಅವರು ಅತ್ಯಲ್ಪ ವಿದ್ಯಾವಂತರು ಮತ್ತು ಬಹುಸಂಖ್ಯಾತ ಅಸಂಘಟಿತರ ಹೋರಾಟ ಮಾಡುವಾಗ ಎಲ್ಲಿಯೂ ಅಸಂಸದೀಯ ಪದ ಪ್ರಯೋಗ ಮಾಡಿ ರಾಜಕೀಯ ವಿಕ್ಷಿಪ್ತತೆಗಳನ್ನು ಎದುರಿಸಲಿಲ್ಲ. ಸಂಘಟಿತ ಮನೋಧರ್ಮವನ್ನು ಬಿತ್ತನೆ ಮಾಡುವ ಮೂಲಕ ರಾಜಕಾರಣ ಹಾದಿಯಲ್ಲಿ ದೀರ್ಘ ಕಾಲ ಪಯಣಿಸಿದರು.
ಅಂದು ಹಸಿವಿತ್ತು ಜೊತೆಗೆ ಮುಂದಿನ ಭವಿಷ್ಯದ ಕನಸಿತ್ತು. ಇಂದು ಇವೆರಡೂ ಮಂಗಮಾಯ ಆದಂತಿದೆ. ಇಂದಿನ ಯುವ ಪೀಳಿಗೆಗೆ ಸತ್ಯ ಮತ್ತು ಅಸತ್ಯದ ಕಿರಣಗಳನ್ನು ಓದಿನಲ್ಲಿ ಕಾಣುತ್ತಿಲ್ಲ. ಹಾಗಾಗಿ ಕೋಮುವಾದದ ಬೇರುಗಳು ಅವರು ಮಗ್ಗುಲಲ್ಲಿ ಚಿಗುರುತ್ತಿವೆ.
ಒಟ್ಟಾರೆಯಾಗಿ ದಲಿತ ಹೋರಾಟದ ಕನಸುಗಳು ಇಂದು ಹಾದಿ ಬೀದಿಯ ಚಿರುಕ್ಕುಳ್ಳಿ ಆಗಿದೆ. ಬೈಯುವುದು ಒಂದು ಕಲೆ. ಅದನ್ನು ಸಂಸದೀಯ ಭಾಷೆಯಲ್ಲಿ ಹೇಳಿದಾಗ ಅದಕ್ಕೆ ಬೆಲೆ ಜಾಸ್ತಿ. ಒಂದುವೇಳೆ ನಾಯಕನೆಂಬ ಹೋರಾಟಗಾರರ ಬಾಯಿ ಹೊಲಸು ಮಾತಿನ ಚೀಲವಾದರೆ ಅದನ್ನು ಸ್ವೀಕರಿಸಲು ಯಾರೂ ಇರುವುದಿಲ್ಲ. ತಾತ್ಕಾಲಿಕವಾಗಿ ಬೆಂಬಲಿಸಿದರೂ ದೀರ್ಘ ಕಾಲದಲ್ಲಿ ಶಾಶ್ವತ ಬುತ್ತಿ ಆಗೋದು ನಾಯಕನಿಗೆ. ಒಬ್ಬ ಅತ್ಯಾಚಾರಿ, ಕೊಲೆಗಾರ ಇಲ್ಲವೇ ಆಸ್ತಿ ನಾಶ ಮಾಡಿದವರನ್ನು ಸ್ವಾಗತಿಸುವ ಜನರ ನಡುವೆ ಬದುಕುತ್ತಿದ್ದೇವೆ ಅಂದ್ರೆ ಸತ್ಯ ಮತ್ತು ಮಿಥ್ಯಗಳನ್ನು ವಿಂಗಡಿಸಿ ನೋಡುವ ಸಾಮುದಾಯಿಕ ವ್ಯಕ್ತಿತ್ವ ಸತ್ತಿವೆ ಎಂದರ್ಥ.
ಇಂದು ಕಾನೂನಿನ ರಕ್ಷಣೆ ಇರುವ ಕಾರಣದಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಅವುಗಳಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಚಳವಳಿ ಕಟ್ಟಿದ ಅಂಬೇಡ್ಕರ್ ಅವರ ಸಮಕಾಲೀನರು ಇನ್ನೆಷ್ಟು ತ್ಯಾಗ ಮಾಡಿದ್ದಾರೆ ಮತ್ತು ಅವರ ಮನೋಧರ್ಮದ ಬದ್ಧತೆಯನ್ನು ಒಮ್ಮೆ ಅವಲೋಕಿಸಿದರೆ ಅಲ್ಲಿ ಜನ ಕಲ್ಯಾಣದ ಉಸಿರು ತುಂಬಿತ್ತು.
ಈ ದೃಷ್ಟಿಯಿಂದ ಅಂಬೇಡ್ಕರ್ ಮತ್ತು ಬಾಬೂಜೀ ಭಿನ್ನ ದೋಣಿಯ ಪಯಣಿಗರಾಗಿದ್ದರೂ ಸಮಾನ ದುಃಖಿಗಳಾಗಿದ್ದರು. ಅವರ ಪ್ರಬುದ್ಧ ಭಾಷಾ ಶೈಲಿ ಮತ್ತು ಸಂಸದೀಯ ಮೌಲ್ಯಗಳು ಇಂದಿಗೂ ಸ್ಮರಿಸುವ ಹೆಮ್ಮೆಯ ನಾಯಕರನ್ನಾಗಿಸಿದೆ.
– ದಾಸನೂರು ಕೂಸಣ್ಣ




