ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ

2 years ago

ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನತೆಯ ಬದುಕಿನ ಪ್ರಶ್ನೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿ ಚಲೋ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಜನರ ಹಾಗೂ ಸಮಗ್ರ  ಅಭಿವೃದ್ಧಿಯ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯು ಡಿಸೆಂಬರ್ 19 ರಂದು ಬೃಹತ್ ಮೆರವಣಿಗೆ, ಜಿಲ್ಲಾಧಿಕಾರಿಗಳ ಕಚೇರಿ ಚಲೋ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಯಲಿದೆ* ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಜರುಗಿದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಮೂರುವರೆ ದಶಕಗಳಿಂದ  ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ಆಳ್ವಿಕೆ ನಡೆಸುತ್ತಿದೆ. ಪಾರ್ಲಿಮೆಂಟ್ ಸದಸ್ಯರಾಗಿ ಧನಂಜಯ ಕುಮಾರ್, ಸದಾನಂದ ಗೌಡರಿಂದ ಹಿಡಿದು ನಳಿನ್ ಕುಮಾರ್ ಕಟೀಲ್‍ರವರೆಗೆ ಬಿಜೆಪಿ ಸದಸ್ಯರೇ ಪ್ರತಿನಿಧಿಸುತ್ತಿದ್ದಾರೆ. ಈ ದೀರ್ಘ ಅವಧಿಯಲ್ಲಿ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಿಯೂ ಬಿಜೆಪಿಯೇ ಸತತ ಗೆಲುವನ್ನು ಸಾಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವ ಪಕ್ಷಗಳಿಗೆ ಸೇರಿದ್ದರೂ ದ.ಕ.ಜಿಲ್ಲೆಯ ಆಡಳಿತದ ಹಿಡಿತ ಬಿಜೆಪಿಯ ಕೈಯಲ್ಲೇ ಉಳಿದಿದೆ ಎಂದು ಹೇಳಿದರು.

CPIM ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ, ಮಾತನಾಡಿ, ಸ್ವಾತಂತ್ರ್ಯಾ ನಂತರದ ಪ್ರಾರಂಭದ ಎರಡು ದಶಕದಲ್ಲಿ ನವಮಂಗಳೂರು ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು, ಎನ್‍ಐಟಿಕೆ, ಕುದುರೆಮುಖ, ಎಂಸಿಎಫ್ ಮುಂತಾದ ಅಭಿವೃದ್ಧಿ ಕಾರ್ಯಗಳು ವ್ಯಾಪಕವಾಗಿ ನಡೆದಿದ್ದವು. ಆದರೆ ಬಿಜೆಪಿ ಆಡಳಿತದ ಈ ಮೂರುವರೆ ದಶಕಗಳಲ್ಲಿ ಜನಸಾಮಾನ್ಯರ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆ ದೊಡ್ಡ ಹಿನ್ನಡೆಯನ್ನು ಕಂಡಿದೆ. ಶಿಕ್ಷಣ, ಆರೋಗ್ಯ ವ್ಯಾಪಾರದ ಸರಕಾಗಿದೆ. ಉದ್ಯೋಗ ಸೃಷ್ಟಿಯ ಕೈಗಾರಿಕೆಗಳ ಸ್ಥಾಪನೆ ಸ್ಥಳೀಯ ಯುವಜನರಿಗೆ ಉದ್ಯೋಗದಲ್ಲಿ ಆದ್ಯತೆ ಕನಸಾಗಿ ಉಳಿದಿದೆ. ಸಾರ್ವಜನಿಕ ವಲಯದ ಬ್ಯಾಂಕ್‍ಗಳು, ವಿಮಾನ ನಿಲ್ದಾಣ, ಬಂದರು ಖಾಸಗಿಯವರ ಪಾಲಾಗಿದೆ. ವಸತಿ ಯೋಜನೆಗಳು ಪೂರ್ಣ ಸ್ಥಗಿತಗೊಂಡಿದೆ ಎಂದು ಹೇಳಿದರು.

CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಸಂಸದರು ಬಹಿರಂಗವಾಗಿ ರೂ.2000ಕ್ಕೆ ಮರಳು ಕೊಡುತ್ತೇವೆ ಎಂಬ ಮಾತಿನ ಗಿಮಿಕ್‍ಗಳಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಲ್ಲಿಯವರೆಗೆ ಏನನ್ನು ಸಾಧಿಸಲು ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿಯ ಶಾಸಕರುಗಳಿಂದ ಸಾಧ್ಯವಾಗಲಿಲ್ಲ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಕೂಡಾ ಮಾಡಲಿಕ್ಕೆ ಸಾಧ್ಯವಾಗಲಿಲ್ಲ. ಜಿಲ್ಲೆಯ ಎರಡೂವರೆ ಲಕ್ಷ ಬೀಡಿ ಕಾರ್ಮಿಕರು ಕಳೆದ 10 ವರ್ಷದಿಂದ ಕನಿಷ್ಠ ಕೂಲಿ, ತುಟ್ಟಿಭತ್ಯೆ ಸಿಗದೆ ವಂಚನೆಗೆ ಒಳಗಾಗಿದ್ದಾರೆ. ಕಟ್ಟಡ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲ. ಬಿಸಿಯೂಟ ಕಾರ್ಮಿಕರ ವೇತನ ಏರಿಕೆಯಾಗಿಲ್ಲ, ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಒಟ್ಟಾರೆಯಾಗಿ ದ.ಕ.ಜಿಲ್ಲೆಯ ಜನಸಾಮಾನ್ಯರ  ಬೇಡಿಕೆಗಳನ್ನು ಸರಕಾರದ ಮುಂದಿಡಲು ಇಲ್ಲಿನ ದುಡಿಯುವ ಜನರ, ಜನಸಾಮಾನ್ಯರ, ವಿದ್ಯಾರ್ಥಿ, ಯುವಜನರ ಆಶೋತ್ತರಗಳಿಗೆ ಧ್ವನಿಯಾಗಲು ಈ ಮಹತ್ವದ ಹೋರಾಟವನ್ನು ಸಿಪಿಐ(ಎಂ) ಆಯೋಜಿಸಿದೆ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply