ಭಾರತದಲ್ಲಿ ಸಾವಯವ ಉತ್ಪಾದನೆ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯಕ್ಕಾಗಿ ತಯಾರಿ

3 years ago

ರಾಷ್ಟ್ರ ಮಟ್ಟದ ತರಬೇತಿ ಸಮಾರೋಪ ಕಾರ್ಯಕ್ರಮ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಸಾವಯವ ಉತ್ಪಾಧನೆ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯಕ್ಕಾಗಿ ತಯಾರಿ ಎಂಬ ರಾಷ್ಟ್ರ ಮಟ್ಟದ ತರಬೇತಿಯನ್ನು ಭಾರತದ ವಿವಿಧ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಧಾರವಾಡದ ಕೃವಿವಿದ ಕುಲಪತಿಗಳ ಸಭಾಂಗಳದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತರಬೇತಿ ಕುರಿತು ತರಬೇತಿ ನಿರ್ದೇಶಕ ಸೂಕ್ಷ್ಮಜೀವ ಶಾಸ್ತ್ರದ ಪ್ರಾಧ್ಯಾಪಕ ಡಾ. ಸಿ.ಆರ್. ಪಾಟೀಲ ಮಾಹಿತಿ ನೀಡಿ, ಈ ತರಬೇತಿಯಲ್ಲಿ ಒಟ್ಟು 37 ಉಪನ್ಯಾಸಗಳು, 7 ಪ್ರಾಯೋಗಿಕ ತರಗತಿಗಳು ಮತ್ತು 6 ವಿವಿಧ ಸಾವಯವ ಮತ್ತು ನೈಸರ್ಗಿಕ ಕೃಷಿಕರ ರೈತರ ಕ್ಷೇತ್ರಗಳಿಗೆ ಬೇಟಿ ನೀಡಿಸಿ, ಭಾರತದಲ್ಲಿ ಈ ವಿಷಯದಲ್ಲಿ ಅತೀ ನುರಿತ ತಜ್ಞರಿಂದ ಸಾವಯವ ಪದ್ಧತಿಗಳ ಉತ್ಪಾಧನೆ, ಸಂಸ್ಕರಣೆ, ಪ್ರಾಮಾಣೀಕರಣ, ಮಾರುಕಟ್ಟೆಯ ವ್ಯವಸ್ಥೆ ಮತ್ತು ರಫ್ತು ವಹಿವಾಟು ಮಾಡುವ ಬಗ್ಗೆ ಉಪನ್ಯಾಸ ನೀಡಿಸಿ ವಿವಿಧ ರಾಜ್ಯಗಳ ವಿಜ್ಞಾನಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ತರಬೇತಿಯಲ್ಲಿ ಭಾಗವಹಿಸಿದ ವಿವಿಧ ಶಿಭಿರಾರ್ಥಿಗಳು ಅವರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ನಮ್ಮೆಲ್ಲರಿಗೂ ಸಾವಯವ ಕೃಷಿ ಅಂದರೆ ಏನು, ಸಾವಯವ ಕೃಷಿಯನ್ನು ಬೆಳೆಯಲು ಯಾವ ಯಾವ ಜೈವಿಕ ಉತ್ಪನ್ನಗಳು ಬೇಕು ಪೋಷಕಾಂಶಗಳನ್ನು, ಕೀಟ ಮತ್ತು ರೋಗವನ್ನು ಹೇಗೆ ನಿರ್ವಹಣೆ ಮಾಡಬೇಕು, ನೈಸರ್ಗಿಕ ಮತ್ತು ಸಾವಯವ ಕೃಷಿಗೂ ವ್ಯತ್ಯಾಸವೇನು, ಪ್ರಮಾಣೀಕರಣ, ಮಾರುಕಟ್ಟೆ ಮತ್ತು ಇರುವ ಸೌಲಭ್ಯಗಳು ಯಾವುವು ಎಂಬುದು ಸಂಪೂರ್ಣವಾಗಿ ತಿಳಿಯಿತು. ಇದರಿಂದ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ಕೈಗೊಳ್ಳಲು ಮತ್ತು ರೈತರಿಗೆ ತರಬೇತಿ ನೀಡಲು ಬಹಳ ಅನುಕೂಲವಾಗಿದೆ ಎಂದರು.

ತರಬೇತಿಯ ಸಮಾರೋಪ ಸಮಾರಾಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಕೃ.ವಿ.ವಿ. ವಿಶ್ರಾಂತ ಕುಲಪತಿ ಡಾ.ಎಮ್.ಎನ್. ಶೀಲವಂತ ಮಾತಾಡಿ, ಮಣ್ಣು ಎಂಬುದು ಒಂದು ಜೀವಂತವಿರುವ ವಸ್ತು, ಸಾಕಷ್ಟು ಪ್ರಮಾಣದ ಸಾವಯವ ವಸ್ತುಗಳನ್ನು ಬಳಸಿದರೆ ಮಣ್ಣು ಚೆನ್ನಾಗಿ ಉಸಿರಾಡುವದು. ಇದರಿಂದ ಸಾವಯವ ಇಂಗಾಲ ಹೆಚ್ಚಾಗುವುದು. ಭಾರತದ ಬಹಳಷ್ಟು ಮಣ್ಣಿನಲ್ಲಿ ಸಾವಯವ ಇಂಗಾಲ ಶೇ.0.4 ಕ್ಕಿಂತ ಕಡಿಮೆಯಾಗಿದೆ. ರಾಸಾಯನಿಕ ಗೊಬ್ಬರಗಳ ಮೂಲಕ ಕೆಲವೇ ಕೆಲವು ಪೋಷಕಾಂಶಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಆದರೆ ಬೆಳೆಗೆ ಸುಮಾರು 16 ಪೋಷಕಾಂಶಗಳ ಅವಶ್ಯವಿದೆ, ಇದರಿಂದ ಮಣ್ಣಿನಲ್ಲಿ ಸಾಕಷ್ಟು ಲಘು ಪೋಷಕಾಂಶಗಳು ಕೊರತೆಯಾಗಿದ್ದು ನಾವು ಬಳಸುವ ಆಹಾರದಲ್ಲೂ ಸಹ ಈ ಲಘು ಪೋಷಕಾಂಶಗಳು ಕೊರತೆಯಾಗಿ ಮನುಷ್ಯರು ಸಹ ಕೀಲು ನೋವು, ಬೊಜ್ಜು ಮತ್ತು ಅನೀಮಿಯಾದಿಂದ ಬಳಲುತ್ತಿದ್ದಾರೆ ಎಂದರು.

ಸಾವಯವ ವಸ್ತುಗಳನ್ನು ನಿರ್ವಹಣೆ ಮಾಡಲು ಯುರೋಪಿನಂತಹ ದೇಶಗಳಲ್ಲಿ ಬೇಸಿಗೆಯಲ್ಲಿ ಹನಿ ನೀರಾವರಿ ನೀಡಿ ಮಣ್ಣು ಗಾಳಿಯಿಂದ ಸವಕಳಿಯಾಗುವುದನ್ನು ನಿರ್ವಹಿಸಿತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ಸಾಕಷ್ಟು ಪ್ರಮಾಣದ ಸಾವಯವ ವಸ್ತುಗಳು ಸಂಗ್ರಹಣೆಯಾಗಿ ಎರೆ ಹುಳುಗಳ ಸಂಖ್ಯೆ ಸಾಕಷ್ಟಿದೆ. ಹವಾಮಾನಕ್ಕೆ ಸೂಕ್ತವಿರುವ ಬೆಳೆಗಳನ್ನು ಮತ್ತು ಬಹು ವಾರ್ಷಿಕ ಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ತರಬೇತಿಯ ಉದ್ಘಾಟನೆ ಮತ್ತು ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃ.ವಿ.ವಿ. ಧಾರವಾಡದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಧಾರವಾಡದ ಸಾವಯವ ಕೃಷಿ ಸಂಸ್ಥೆ ಬಹಳ ಶ್ರೀಮಂತ ಅನುಭವವನ್ನು ಹೊಂದಿದ್ದು ತಾವುಗಳು ಆ ಅನುಭವವನ್ನು ಪಡೆದು ಭೂ ಮಾತಾ ಮತ್ತು ಗೋ ಮಾತ ಇವುಗಳನ್ನು ನಿರ್ಲಕ್ಷ್ಯ ಮಾಡದೆ ಪಂಚ ಮಹಾಭೂತಗಳಲ್ಲಿ ಒಂದಾದ ಭೂಮಿಯನ್ನು ಜೀವಂತಗೊಳಿಸಬೇಕು ಎಂದರು.

ಈ ಸಾವಯವ ಕೃಷಿ ಸಂಸ್ಥೆಯಲ್ಲಿರುವ ಮೂಲಭೂತ ಸೌಕರ್ಯಗಳು ಪ್ರಯೋಗಾಲಯಗಳು, ಸಮೂಹ ಉತ್ಪಾದನಾ ಘಟಕಗಳನ್ನು ಮತ್ತು ಅಭಿವೃದ್ಧಿಗೊಂಡಿರುವ ತಾಂತ್ರಿಕತೆಗಳನ್ನು ಶಿಭಿರಾರ್ಥಿಗಳೆ ನೋಡಿ ಅನುಭವಿಸಿದ್ದನ್ನು ಮತ್ತು ಈ ತರಬೇತಿಯಲ್ಲಿ ಸಂಪೂರ್ಣವಾಗಿ ಕಲಿತಿದ್ದನ್ನು ವಿವರಿಸಿದ್ದಾರೆ. ಈಗಿನ ದಿನಮಾನಗಳಲ್ಲಿ ಮಣ್ಣು, ನೀರು, ಗಾಳಿ ಮತ್ತು ವಾತಾವರಣ ಕಲುಷಿತಗೊಳ್ಳುತ್ತಿದೆ. ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದರ ಜೊತೆಗೆ ಅಂತರ್ಜಲ ಮರುಪೂರಣಕ್ಕೆ ಆದ್ಯತೆಕೊಟ್ಟು ಸಾವಯವ ಕೃಷಿ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಸಾವಯವ ಕೃಷಿಯು ಪರಿಸರ ಸ್ನೇಹಿ ಕೃಷಿಯಾಗಿದ್ದು ಗುಣಮಟ್ಟದ ಆಹಾರ ಉತ್ಪಾದನೆಗೆ ಸಹಕಾರಿಯಾಗಿದೆ ಹಾಗೂ ವಿಜ್ಞಾನಿಗಳೂ ಸಾವಯವ ಕೃಷಿಯನ್ನು ಹಂತ ಹಂತವಾಗಿ ಅರಿತುಕೊಂಡು ರೈತರು ಅಳವಡಿಕೆ ಮಾಡಿಕೊಳ್ಳಲು ತರಬೇತಿ ನೀಡಿ ಹೆಚ್ಚು ಹೆಚ್ಚು ಪ್ರೇರೆಪಿಸಬೇಕು ಎಂದರು.

ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ರೈತರ ವಿಶ್ವ ವಿದ್ಯಾಲಯ ಇಲ್ಲಿಗೆ ಲಕ್ಷೋಪ ಲಕ್ಷ ರೈತರು ಭೇಟಿ ನೀಡಿ ನವೀನ ತಾಂತ್ರಿಕತೆಗಳನ್ನು, ಹೊಸ ತಳಿಯ ಬೀಜಗಳನ್ನು, ಜೈವಿಕ ಪೀಡೆನಾಶಕಗಳನ್ನು ಮತ್ತು ಜೈವಿಕ ಗೊಬ್ಬರಗಳನ್ನು ಪಡೆದು ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡು ಉಳಿದ ರೈತರಿಗೂ ಮಾದರಿಯಾಗಿದ್ದಾರೆ ಎಂದರು.

ಇಲ್ಲಿ ಎಲ್ಲಾ ಹತ್ತು ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅಲ್ಲದೆ ಅವುಗಳ ಬಳಕೆಯ ವಿವಿಧ ಖಾದ್ಯಗಳನ್ನು ತಯಾರಿಸುವ ಆಹಾರ ತಯಾರಿಕಾ ತಾಂತ್ರಿಕತೆಗಳ ಬಗ್ಗೆಯು ಸಾಕಷ್ಟು ತಂತ್ರಜ್ಞಾನವಿದೆ. ಇದೇ ರೀತಿ ನೀವು ನಿಮ್ಮ ವಿಶ್ವ ವಿದ್ಯಾಲಯಗಳಲ್ಲಿ ಸಂಶೊಧನೆ ಕೈಗೊಂಡು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ದಿನೇ ದಿನೇ ಹೆಚ್ಚು ಕ್ಷೇತ್ರದಲ್ಲಿ ಪಸರಿಸಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಶಿಕ್ಷಣ ನಿರ್ದೇಶಕ ಡಾ.ವಿ.ಆರ್. ಕಿರೇಸುರ್, ಹಣಕಾಸು ನಿಯಂತ್ರಣಾಧಿಕಾರಿ ಶಿವಪುತ್ರ ಹೊನ್ನಾಳಿ, ಕೃಷಿ ಮತ್ತು ಸಮುದಾಯ ಮಹಾ ವಿದ್ಯಾಲಯದ ವಿಧ್ಯಾಧಿಕಾರಿ ಡಾ.ಹೆಚ್.ಬಿ. ಬಬಲಾದ ಮತ್ತು ಡಾ.ವಿ. ಎಸ್. ಪಾಟೀಲ, ಸಹ ಸಂಶೋದನಾ ನಿರ್ದೇಶಕ ಡಾ. ಶೇಖರಪ್ಪ, ಸಹಾಯಕ ವಿಸ್ತರಣಾ ನಿರ್ದೇಶಕ ಡಾ.ಎಸ್.ಎ. ಗದ್ದನಕೇರಿ, ಸಾವಯವ ಕೃಷಿ ಸಂಸ್ಥೆಯ ಮತ್ತು ಸೂಕ್ಷ್ಮಜೀವ ಶಾಸ್ತ್ರ ವಿಭಾಗದ ವಿಜ್ಞಾನಿಗಳು, ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

Leave a Reply