ಹಂಪಿ ಉತ್ಸವದ ಖಯಾಲಿಯೇ ಬದಲಾಯ್ತು
1993ರಲ್ಲಿಯೇ ನನ್ನ ಮೊದಲ ಕವನ ಸಂಕಲನ “ಜೀವ ಬಂತು ಹಾದಿಗೆ” ಪ್ರಕಟವಾಗಿತ್ತು. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದರು. ಈ ಸಂಕಲನದ ಮೂಲಕ ಬಂಡಾಯ ಸಾಹಿತ್ಯ ಚಳುವಳಿಯನ್ನು ಪ್ರವೇಶಿಸಿದ್ದೆ. ಎಸ್.ಎಸ್.ಹಿರೇಮಠ್, ಕುಂ.ವೀ, ಬರಗೂರು, ಚಂಪಾ, ಹೆಚ್.ಎಸ್.ಆರ್, ಕಾಳೇಗೌಡ ನಾಗವಾರ, ಎಲ್.ಹನುಮಂತಯ್ಯ ಮೊದಲಾದ ಹಿರಿಯರು ನನ್ನ ಪಾಲಿಗೆ ಸಂಗಾತಿಗಳೇ ಆಗಿದ್ದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
1993 ರಲ್ಲಿ ಡಿ.ವೈ.ಎಫ್.ಐ.ಯಿಂದ ನಡೆದ ರಾಜ್ಯ ಮಟ್ಟದ ಸೌಹಾರ್ದ ಕಾವ್ಯ ಸ್ಪರ್ಧೆಯಲ್ಲಿ ನಾನು ಮತ್ತು ಪಿ.ಚಂದ್ರಿಕಾ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದೆವು. ಅದಾದ ನಂತರ ಮರು ವರ್ಷವೇ ಸಂಚಯ ಕಾವ್ಯ ಸ್ಪರ್ಧೆಯ ಬಹುಮಾನವೂ ಬಂತು.
ಇದ್ದೂರಿನ ಹುಡುಗ ರಾಜ್ಯ ಮಟ್ಟದಲ್ಲಿ ಇಷ್ಟು ಹೆಸರು ಪಡೆದಿರುವುದು ಆಗ ರಾಜ್ಯದ ಜನಪ್ರಿಯ ರಾಜಕಾರಣಿ, ಮಂತ್ರಿಗಳಾಗಿದ್ದ ಎಂ.ಪಿ.ಪ್ರಕಾಶರ ಗಮನಕ್ಕೆ ಬಂದಿತ್ತು. ಅದು ಮಾತ್ರವಲ್ಲ ಅಷ್ಟು ಹೊತ್ತಿಗೆ 1987 ರಿಂದಲೇ ಊರಿನಲ್ಲಿ ವಿದ್ಯಾರ್ಥಿ ಹೋರಾಟಗಳ – ಮೆರವಣಿಗೆಗಳನ್ನು ಮಾಡಿದ್ದು ಇವರ ಗಮನಕ್ಕಿತ್ತು. ಅಷ್ಟೇ ಏಕೆ ಆಗ ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿಯವರ ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶವ್ಯಾಪಿ ಭಾರತ್ ಬಂದ್ ಮಾಡಿದಾಗ ಎಂ.ಪಿ.ಪ್ರಕಾಶರ ಜನತಾ ( ದಳ) ಪಕ್ಷದ ನಾಯಕರ ಜೊತೆ ನಾನು ಪ್ರಮುಖ ಸಂಘಟಕನಾಗಿದ್ದೆ. ಪಿ.ಯು.ಸಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರೂ ಕುಳ್ಳಗಿದ್ದ ನಾನು ಭಾಷಣ ಮಾಡುವುದು ಜನರಿಗೆ ಕಾಣಿಸುವುದಿಲ್ಲವೆಂದು ಆಗ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ಟಿ.ಎಸ್.ಮೃತ್ಯುಂಜಯಪ್ಪ ( ಬಳಿಕ ಇವರು ಎಂ.ಎಲ್.ಸಿ.ಯಾಗಿದ್ದರು) ನವರು ಅಲ್ಲೇ ಹೂವಿನ ವ್ಯಾಪಾರಿಗಳ ಶೆಡ್ ನಲ್ಲಿದ್ದ ಟೇಬಲನ್ನು ಎಳೆದು ತರಿಸಿ ಅದರ ಮೇಲೆ ನಿಲ್ಲಿಸಿ “ರಾಜೀವ್ ಗಾಂಧಿಯವರ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ” ಭಾಷಣ ಮಾಡಿಸಿದ್ದರು. ಇವೆಲ್ಲವೂ ಎಂ.ಪಿ.ಪ್ರಕಾಶರಿಗೆ ನನ್ನನ್ನು ಪರಿಚಯಿಸಿದ್ದವು.
ಹಾಗಾಗಿಯೇ ಇರಬೇಕು; 1995 ರ ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಕಛೇರಿಯಿಂದ ಪತ್ರ ಬಂದಿತ್ತು. ಆಗಲೂ ಅಷ್ಟೇ, ಸಂತೋಷವಾಗಿತ್ತಾದರೂ ರೋಮಾಂಚನವೇನೂ ಆಗಿರಲಿಲ್ಲ. ಹಾಗಾಗಿ ಆಹ್ವಾನ ಸ್ವೀಕರಿಸಿದೆ. ಕವಿಗೋಷ್ಠಿಗೆ ಹೋಗಿ ಕವಿತೆ ಓದಿದೆ. ಹಾಗೆ ನೋಡಿದರೆ ಕವಿಗೋಷ್ಠಿಯಲ್ಲಿ ನನ್ನ ಕವಿತೆ ಮತ್ತು ವಾಚನಗಳೆರಡೂ ಅತಿಹೆಚ್ಚು ಗಮನ ಸೆಳೆದಿದ್ದವು. ಆ ಗೋಷ್ಠಿಯನ್ನು ಚಂದ್ರಶೇಖರ ಕಂಬಾರರು ಉದ್ಘಾಟಿಸಿದ್ದರು. ಚನ್ನವೀರ ಕಣವಿಯವರ ಅಧ್ಯಕ್ಷತೆ. ಗೋಷ್ಠಿಯಲ್ಲದ್ದವರೆಲ್ಲಾ ಕನ್ನಡ ನಾಡಿನ ಮಹತ್ವದ ಹಿರಿಯ ಕವಿಗಳೇ ಆಗಿದ್ದರು. ಅವರಲ್ಲಿ ನಾನೇ ಅತೀ ಕಿರಿಯವನಾಗಿದ್ದೆ.
1997 ರಲ್ಲಿ ಮತ್ತೊಮ್ಮೆ ಆಹ್ವಾನ ಬಂತು. ಹೋದೆ. ಓದಿದೆ. ಅದೂ ಹೆಚ್ಚು ಜನಮನ್ನಣೆ ಪಡೆಯಿತು. ಆ ಗೋಷ್ಠಿಯಲ್ಲಿದ್ದವರೂ ಅಷ್ಟೇ ಮಹತ್ವದ ಕವಿಗಳಾಗಿದ್ದರು. ಈ ಎರಡು ಗೋಷ್ಠಿಗಳೂ ನನಗೆ ನಾಡಿನ ಹಿರಿಯ ಕವಿಗಳ ಒಡನಾಟ, ಪ್ರೀತಿಯನ್ನೊದಗಿಸಿದವು. ಆ ಕವಿಗೋಷ್ಠಿಗಳ ಗಂಭೀರತೆ, ಅಲ್ಲಿ ವಾಚಿಸಲ್ಪಟ್ಟ ಕವಿತೆಗಳ ಗುಣಶಕ್ತಿ, ಕವಿಗಳನ್ನು ಆಗ ನಡೆಸಿಕೊಂಡ ರೀತಿ ಇವೆಲ್ಲವೂ ಸಾಂಸ್ಕೃತಿಕವಾದ ಗೌರವದ ನಡವಳಿಕೆ ಹೇಗಿರಬೇಕೆಂಬುದಕ್ಕೆ ಉದಾಹರಣೆಯಂತಿದ್ದವು. ಈ ಎಲ್ಲ ಆಯೋಜನೆ ನಿರ್ವಹಣೆಗಳ ಹಿಂದೆ ಎಂ.ಪಿ.ಪಕಾಶರ ನಜರು ಇದ್ದೇ ಇರುತ್ತಿತ್ತು.
ಇಂತಹ ಉತ್ಸವದ ಆಯೋಜನೆಯು ಗಣಿವಂಚಕ ಜನಾರ್ಧನರೆಡ್ಡಿಯವರ ಕೈಗೆ ಸಿಕ್ಕ ಬಳಿಕ ಹಂಪಿ ಉತ್ಸವದ ಖಯಾಲಿಯೇ ಬದಲಾಯ್ತು. ಮಂದ ಬೆಳಕಿನ ಬದಲಿಗೆ ಕಣ್ಣುಕುಕ್ಕುವ ಲೈಟುಗಳು, ಕಲಾತ್ಮಕ ಬೆಳಕಿನ ವಿನ್ಯಾಸದ ಬದಲಿಗೆ ಜಾತ್ರೆ ಕ್ಲಬ್ಬು ಗಳಂತಹ ಫೋಕಸ್ ಗಳು, ಶಾಸ್ತ್ರೀಯ ಸಂಗೀತ ನೆಪಮಾತ್ರಕ್ಕಿಟ್ಟು ಸಿನಿಮಾ ಹಾಡುಗಳ ಶೋಗಳು ಅದಿರಲಿ, ವಿಜಯನಗರದ 500ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ವೈಭವೀಕರಣ, ರಾಜಕಾರಣಿಗಳ ಆಡಂಬೋಲ ಇವೆಲ್ಲ ಅಸಹ್ಯ ಹುಟ್ಟಿಸುವಂತಿದ್ದವು.
ಆ ಬಳಿಕ ಮತ್ತೆರಡು ಕಡೆ ಇಂತಹ ಉತ್ಸವಗಳಿಗೆ ಹೋಗಿ ಬಂದೆ. ಬಳಿಕ ಅನಿಸಿದ್ದು ಈ ಉತ್ಸವಗಳನ್ನು ಮಾಡುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ನೆಪದಲ್ಲಿ ಮಾಡುತ್ತಿರುವುದು ಆಳಿ ಅಳಿದ ರಾಜ ಪರಂಪರೆಯ ವೈಭವೀಕರಣ ಎಂದು ಮನವರಿಕೆಯಾಯ್ತು. ಯೋಚನೆಗೆ ಹಚ್ಚಿತು. ರಾಜಶಾಹಿಯ ಇಂತಹ ವೈಭವೀಕರಣ ವರ್ತಮಾನದ ಜನತಂತ್ರವನ್ನೇ ಕೀಳಾಗಿ ಇದಕ್ಕಿಂತ ಅದೇ ಉತ್ತಮವಾಗಿತ್ತು ಎಂಬ ಭಾವನೆ ಮೂಡಿಸಿದರೆ ಇದು ಜನತಂತ್ರದ ಅವನತಿಗೆ ಸಾಂಸ್ಕೃತಿಕ ವಿಧಾನಗಳ ಬಳಕೆ ಮಾಡಿಕೊಂಡಂತೆ ಆಗುವುದಿಲ್ಲವೇ? ಇನ್ನು ಬೇಡ ಅನಿಸಿತು. ನಂತರ ಬಂದ ಆಹ್ವಾನಗಳನ್ನು ನಿರಾಕರಿಸಿದೆ. “ಜನತಂತ್ರ ವ್ಯವಸ್ಥೆಯಲ್ಲಿ ರಾಜಶಾಹಿಯನ್ನು ವೈಭವೀಕರಿಸುವುದು ಜನತಂತ್ರವನ್ನು ದುರ್ಬಲಗೊಳಿಸುವ ಪರೋಕ್ಷ ವಿಧಾನವಾಗಿರುತ್ತದೆ ಆದ್ದರಿಂದ ಅಂತಹ ಉತ್ಸವಗಳಲ್ಲಿ ಪಾಲ್ಗೊಳ್ಳಲಾರೆ” ಎಂದು ಸ್ವಯಂ ನಿರ್ಧರಿಸಿಕೊಂಡೆ.
ಈಗಲೂ ಉತ್ಸವ ನಡೆಯುತ್ತಿದೆ. ಈಗ ಕೆಲವು ವರ್ಷಗಳಿಂದ “ನೀವು ಹೋಗಿಲ್ಲವೇ…?” ಎಂದು ಹಲವರು ಕೇಳುತ್ತಿರುತ್ತಾರೆ. “ಇಲ್ಲ” ಎಂದಷ್ಟೇ ಹೇಳಿ ಸುಮ್ಮನಾಗುತ್ತೇನೆ. ಈಗಂತೂ ಹದಿನೈದು ನಿಮಿಷದ ದಾರಿ. ಹೋಗಿ ನೋಡುವ ಕುತೂಹಲವೂ ಉಳಿದಿಲ್ಲ.
ಇನ್ನೊಂದು ಮಾತನ್ನು ಹೇಳಲೇಬೇಕು. ನನ್ನ ಮುಖದ ಮೇಲೆ ಚಿಗಿರು ಮೀಸೆ ಮೂಡುವಾಗಲಿಂದನೇ ಪ್ರಭುತ್ವದ ರಾಜಕಾರಣದ ಜೊತೆಗೆ ಸ್ನೇಹ ಮತ್ತು ಸಂಘರ್ಷವನ್ನು ಜೊತೆಜೊತೆಯಾಗಿಯೇ ಜಾರಿಯಲ್ಲಿಟ್ಟುಕೊಂಡು ಬಂದವನು ನಾನು. ಅವಕಾಶವೋ ಅಧಿಕಾರವೋ ಬಳಸಿಕೊಳ್ಳುವುದು ಮತ್ತು ಬಳಕೆಯಾಗುವುದರ ವ್ಯತ್ಯಾಸ ನನಗೆ ಚೆನ್ನಾಗಿ ಗೊತ್ತಿದೆ. ರಾಜಿಯಾಗುವ ಮಾತೇನು ಬಂತು? ಆ ವಿಚಾರದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
– ಪೀರ್ ಭಾಷಾ







