ಕನ್ನಡಕ್ಕೆ ರಾಮಾಯಣವನ್ನು ಮೊದಲು ತಂದವರು ಜೈನ ಕವಿಗಳು. ಕ್ರಿಸ್ತಶಕ ೧೧೦೦ರ ಸುಮಾರಿನಲ್ಲಿ ಬಿಜಾಪುರ ಪರಿಸರದಲ್ಲಿ ಬದುಕಿದ್ದ ನಾಗಚಂದ್ರನು ಬರೆದ ʼರಾಮಚಂದ್ರ ಚರಿತ ಪುರಾಣʼ ಕನ್ನಡದ ಸೊಗಸಾದ ಕಾವ್ಯಗಳಲ್ಲಿ ಒಂದು. ಇದು ಪಂಪ ರಾಮಾಯಣವೆಂದೇ ಪ್ರಸಿದ್ಧ. ವಿಮಲ ಸೂರಿ ಎಂಬ ಕವಿ ( ೪ನೇಶತಮಾನ) ಪ್ರಾಕೃತದಲ್ಲಿ ಬರೆದ ಪಉಮಚರಿಯ ನಾಗಚಂದ್ರನ ಕಾವ್ಯಕ್ಕೆ ಮೂಲ. ಈ ಕಾವ್ಯದ ರಾವಣ ದುಷ್ಟನಲ್ಲ. ಆಕಾಶದಲ್ಲಿ ಹೋಗುವಾಗ, ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಸೀತೆಯ ಚೆಲುವಿಗೆ ಮರುಳಾಗಿ, ಅವಳ ಮೋಹದಿಂದ ಬಿಡುಗಡೆ ಪಡೆಯಲು ಪ್ರಯತ್ನಿಸಿದಷ್ಟೂ ಆಕೆಗೇ ಸೆರೆಯಾಗಿ ಕೊನೆಗೆ ದಾರುಣವಾಗಿ ಸತ್ತು ಹೋಗುತ್ತಾನೆ. ಅವನ ಬದುಕಿನ ದುರಂತ ಓಟವನ್ನು ಗ್ರಹಿಸಿದ ನಾಗಚಂದ್ರನು ʼಅಬ್ದಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇʼ (ಕಡಲು ಕೂಡಾ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆಯನ್ನು ದಾಟುವುದಿಲ್ಲವೇ?) ಎಂದು ಉದ್ಘರಿಸುತ್ತಾನೆ.

ನಾಗಚಂದ್ರ ರಾಮಾಯಣದ ಸೊಗಸನ್ನು ಅರಿಯಲು ಈ ಕೆಳಗಿನ ಪ್ರಸಿದ್ಧ ಪದ್ಯವನ್ನು ಓದಬೇಕು. ದಂಡಕಾರಣ್ಯದಲ್ಲಿ ಸೀತೆಯನ್ನು ಕಳಕೊಂಡ ರಾಮ ಆಕೆಯನ್ನು ಹುಡುಕುತ್ತಾ ಹೋಗುವಾಗ ಅರಣ್ಯದಲ್ಲಿ ಕಂಡ ಹಂಸ, ಚಿಗುರು, ತಾವರೆ, ದುಂಬಿ, ನೈದಿಲೆ, ಕೋಗಿಲೆ, ಮೊದಲಾದುವುಗಳನ್ನು ʼ ನೀವು ಸೀತೆಯನ್ನು ಕಂಡಿರೇ?ʼ ಎಂದು ಹುಚ್ಚನಂತೆ ಕೇಳುತ್ತಾ ಮುಂದರಿಯುತ್ತಾನೆ-
ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯ ನಿಶ್ವಾಸೆಯಂ
ತಳಿರೇ ತಾವರೆಯೈ ಮದಾಳಿಕುಲಮೇ ಕರ್ನೆಯ್ದಿಲೇ ಮತ್ತ ಕೋ
ಕಿಳಮೇ ಕಂಡಿರೆ ಪಲ್ಲವಿಧರೆಯನಂಭೋಜಾಸ್ಯೆಯಂ ಭೃಂಗ ಕುಂ
ತಳೆಯಂ ಕೈರವನೇತ್ರೆಯಂ ಪಿಕರವಪ್ರಖ್ಯಾತೆಯಂ ಸೀತೆಯಂ
( ಕಲಕಲ ನಿನಾದವ ಮಾಡುತ್ತಾ ಸಾಗುವ ರಾಜಹಂಸದ ಗಂಭೀರ ನಡಿಗೆಯವಳನ್ನು, ಕಸ್ತೂರಿಯ ಸುವಾಸನೆಯ ಮೊಗದ ಉಸಿರಿನವಳನ್ನು, ಚಿಗುರುಗಳೇ, ತಾವರೆಯೇ ಮದಭರಿತ ದುಂಬಿಗಳೇ, ಕನ್ನೈದಿಲೆಯೇ, ಅಮಲೇರಿದ ಕೋಗಿಲೆಯೇ, ನೀವು ಕಂಡಿರೇ, ಚಿಗುರು ತುಟಿಯವಳನ್ನು, ತಾವರೆ ಮೊಗದವಳನ್ನು, ದುಂಬಿಯಂತಹ ಮುಂಗುರುಳಿನವಳನ್ನು, ತಾವರೆ ಕಣ್ಣವಳನ್ನು, ಕೋಗಿಲೆಯ ಕಂಠಸಿರಿಯವಳನ್ನು, ನನ್ನ ಸೀತೆಯನ್ನು).
ರಾಜಸ್ಥಾನದಲ್ಲಿ ೧೬೮೦ರ ಸುಮಾರಿಗೆ ಬರೆದ ಈ ಕೆಳಗಿನ ಚಿತ್ರವು ಕರ್ನಾಟಕದ ನಾಗಚಂದ್ರನ ಪದ್ಯಕ್ಕೆ ಮಾಡಿದ ವ್ಯಾಖ್ಯಾನದಂತಿದೆ. ಚಿತ್ರದಲ್ಲಿ ರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕುತ್ತಾ ಗಿಡಮರಗಳ ನಡುವೆ ನಡಯುತ್ತಿದ್ದಾರೆ. ಹಂಸಗಳು ದಡದಲ್ಲಿ ನಿಂತ ಕೆರೆಯಲ್ಲಿ ದಣಿವಾರಿಸಲು ಯೋಚಿಸುತ್ತಾರೆ, ಮುಂದುವರಿದು, ಗುಹೆಯೆದುರು ನಿಂತು, ಎಲ್ಲಿ ನನ್ನ ಸೀತೆ ಎಂದು ಅನಂತವಾದ ಆಕಾಶದೆಡೆಗೆ ಮುಖ ಮಾಡಿದ್ದಾರೆ.
ಕ್ರೌಂಚ ಪಕ್ಷಿಗಳು ಪರಸ್ಪರ ಪ್ರೇಮಿಸುತ್ತಿದ್ದಾಗ ಬೇಡನೊಬ್ಬ ಗಂಡು ಹಕ್ಕಿಯನ್ನು ಕೊಂದದ್ದನ್ನು ನೋಡಿ ದಿಗ್ಭ್ರಮೆಗೆ ಒಳಗಾದ ವಾಲ್ಮೀಕಿಯು
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ
ಯತ್‌ಕ್ರೌಂಚಮಿಥುನಾದೇಕಮವಧೀ ಕಾಮಮೋಹಿತಮ್
ಎಂದು ಉದ್ಘರಿಸಿದ್ದೇ ರಾಮಾಯಣದ ಆದಿ ತಾನೇ? ವಿರಹ ಅದರ ಸ್ಥಾಯಿ. ಅದಕ್ಕೆ ಅದು ಮಹಾಕಾವ್ಯ!
- ಪ್ರೊ.ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು




