ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಹರಿಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವುದರ ಜೊತೆ ಜೊತೆಯಲಿ ಅವರ ಆಶಯದಂತೆ ಆಡಳಿತವನ್ನು ನಡೆಸುತ್ತಿದ್ದಾರೆ. ಇದಕ್ಕೆ ಹತ್ತಾರು ಉದಾಹರಣೆಗಳನ್ನು ಕೊಡಬಹುದಾಗಿದೆ.
ದಾಸೋಹ ಬಸವಣ್ಣನವರ ಕಲ್ಪನೆಯಾಗಿತ್ತು. ಆ ನಿಟ್ಟಿನಲ್ಲಿಯೇ ಸಾಗುವ ಕಾರ್ಯಕ್ರಮವೇ ಹಸಿವು ಮುಕ್ತ ಕರ್ನಾಟಕದ ಅನ್ನಭಾಗ್ಯ ಯೋಜನೆ. ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು, ಎಲ್ಲರಿಗೂ ಗೌರವದ ಬದುಕು ದೊರೆಯಬೇಕೆಂದು ಅನೇಕ ಕಾರ್ಯಕ್ರಮಗಳನ್ನು ಬಸವಣ್ಣನವರ ಆಶಯದಂತೆ ರೂಪಿಸಲಾಗಿದೆ.
ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಸಲುವಾಗಿ ಬಿಸಿಬಿಸಿ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯು ಸಹ ದುಡಿಯುವ ಮಕ್ಕಳ ಬದುಕು ಹಸನು ಮಾಡಬೇಕೆಂಬ ಕಾಯಕಯೋಗಿಗಳ ಕುಟುಂಬದ ಮಕ್ಕಳು ಸಂಭ್ರಮಿಸಬೇಕೆಂದು ಈ ಯೋಜನೆಯನ್ನು ಸಹ ರೂಪಿಸಿರುವುದು ಬಸವಣ್ಣನವರ ಆಶಯಗಳಲ್ಲಿ ಒಂದು.
ಬಡವರ ಮನೆಯಲ್ಲಿ ಬೆಳಕು ಮೂಡಿಸುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಸಮಾನತೆಯ ಸಮಾಜವನ್ನು ಕಟ್ಟುವ ಮತ್ತೊಂದು ದಾರಿಯಾಗಿದೆ. ಇದು ಸಹ ಬಸವಣ್ಣನವರ ಆಶಯಕ್ಕೆ ಪೂರಕವಾಗಿದೆ.
ಅಣ್ಣ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಗಾರ್ತಿಯರನ್ನ ಸಮಾಜಕ್ಕೆ ನೀಡಿರುತ್ತಾರೆ. ಅದರಂತೆ ಮಹಿಳೆಯರಲ್ಲಿ ಸ್ವಾವಲಂಬನೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವರಲ್ಲಿ ಆರ್ಥಿಕ ಚೈತನ್ಯವನ್ನು ತುಂಬುವ ಸಲುವಾಗಿ ರೂಪಿಸಿರುವ ಉಚಿತವಾದ ಬಸ್ ಪ್ರಯಾಣದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಪ್ರೋತ್ಸಾಹದ ಧನ ಇದು ಸಹ ಬಸವಣ್ಣನವರ ಮಹಿಳಾ ಸಬಲೀಕರಣ ಮತ್ತು ಸ್ವಾಭಿಮಾನದ ಬದುಕಿನ ಆಶಯಕ್ಕೆ ಅನುಗುಣವಾಗಿದೆ.
ಎಷ್ಟೇ ಟೀಕೆಗಳು ಬಂದರು ಶೋಷಿತರು ಅನ್ಯಾಯಕ್ಕೆ ಗುರಿಯಾದವರು ಅನ್ಯರಂತೆ ಗೌರವದಿಂದ ಬದುಕಬೇಕೆಂಬ ಕನಸಿನೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಜಾತ್ಯತೀತ ತತ್ವದ ಅಡಿಯಲ್ಲಿ ಸರ್ಕಾರವನ್ನು ಮುನ್ನಡೆಸುತ್ತದೆ. ಹಿಂದುಳಿದ ವರ್ಗದವರು ಮತ್ತು ದಲಿತರು, ಮಹಿಳೆಯರು, ಇವರುಗಳ ಬದುಕಿಗಾಗಿ ಸರ್ಕಾರ ದುಡಿಯುತ್ತಿರುವುದನ್ನ ಸಹಿಸದ ಬದಲಾವಣೆ ಬಯಸದ ಯಥಾಸ್ಥಿತಿವಾದಿಗಳು ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಪಿತೂರಿಗಳನ್ನ ನಡೆಸುತ್ತಿದ್ದರೂ ದಿಟ್ಟತನದಿಂದ ಮುನ್ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಬಸವಣ್ಣನವರ ಮೇಲೆ ಸರ್ಕಾರದ ಗೌರವ ಇಂದು ತೋರುತ್ತಿರುವುದಲ್ಲ. ಈ ಹಿಂದೆಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕೆಂಬ ಆದೇಶವನ್ನು ನೀಡಿದ್ದು ಸಹ ಸಿದ್ದರಾಮಯ್ಯನವರ ಸರ್ಕಾರ.
ಐದು ಗ್ಯಾರಂಟಿಗಳಿಗೆ ವ್ಯವಸ್ಥಿತವಾಗಿ ಹಣವನ್ನ ಇಟ್ಟಿದ್ದು ಯಾವುದೇ ಲೋಪಬಾರದೆ ಯೋಜನೆಗಳು ಜನರನ್ನ ತಲುಪುತ್ತಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಮತ್ತು ಶಕ್ತಿಗಳು ಹಾಗೂ ಮಾರಿಕೊಂಡ ಮಾಧ್ಯಮಗಳು ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ನೀಡುತ್ತಾ ಸರ್ಕಾರವನ್ನು ದಿವಾಳಿ ಮಾಡಿದ್ದಾರೆ ಎಂಬ ಹಸಿಹಸಿ ಸುಳ್ಳುಗಳನ್ನ ಹೇಳುತ್ತಲೇ ಇದ್ದಾರೆ. ಸತ್ಯದ ಸಂಗತಿ ಏನೆಂದರೆ ಬಡವರಿಗೆ ಉಚಿತವಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು ಸಹ ಕಳೆದ ಎಂಟು ತಿಂಗಳಲ್ಲಿ ಒಂದೇ ಒಂದು ರೂಪಾಯಿಯನ್ನು ಸಾಲದ ರೂಪದಲ್ಲಿ ಯಾವುದೇ ಕಾರಣದಿಂದಲೂ ಪಡೆದಿರುವುದಿಲ್ಲ.
ಯಾವುದೇ ರೀತಿಯ ಉಚಿತ ಯೋಜನೆಗಳನ್ನು ನೀಡದ 2019 ರಿಂದ 2023ರ ಅವಧಿಯಲ್ಲಿನ ಹಿಂದಿನ ಸರ್ಕಾರ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ಹೊಸ ಸಾಲವನ್ನು ಮಾಡಿದ್ದಾದರೂ ಯಾರ ಉದ್ಧಾರಕ್ಕಾಗಿ ಈ ವಿಚಾರವನ್ನು ಯಾರೂ ಕೇಳುವುದಿಲ್ಲ ಕಾರಣ ಮಾರಿಕೊಂಡ ಕೆಲವು ಮಾಧ್ಯಮಗಳು ಬಡವರಿಗಾಗಿ ಯೋಜನೆಗಳನ್ನ ರೂಪಿಸಿದರೆ ಹೊಟ್ಟೆ ಉರಿದುಕೊಳ್ಳುತ್ತಾರೆ.
ಆದರೆ ಶ್ರೀಮಂತರ ಹತ್ತಾರು ಲಕ್ಷ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದರೆ ಆಗ ದೇಶಕ್ಕೆ ಯಾವ ಅಪಾಯವು ಆಗುವುದಿಲ್ಲ; ಅದೇ ರೀತಿಯಲ್ಲಿ ಇವರು ಪ್ರತಿದಿನವೂ ಪ್ರಚಾರ ನೀಡುವ ಇವರ ಪ್ರೀತಿಯ ನಾಯಕರು ಗ್ಯಾರಂಟಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ನೀಡಿದರೆ ಆಗಲು ದೇಶಕ್ಕೆ ದೇಶದ ಅರ್ಥ ವ್ಯವಸ್ಥೆಗೆ ಏನು ಆಗುವುದಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಬಡವರಿಗೆ ಕೊಡುಗೆಯನ್ನ ನೀಡಿದರೆ ಆಗ ಮಾತ್ರ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ ಎಂಬ ಇಬ್ಬಗೆಯ ನೀತಿಯ ಪ್ರಚಾರಕರುಗಳಿಂದ ಅನೇಕ ರೀತಿಯ ಅಡತಡೆಗಳು ಬಂದರೂ ಸಹ ಬಸವಣ್ಣನವರ ಆಶಯದ ಸಮ ಸಮಾಜದ ಸಮಾನತೆಯ ಸ್ವಾಭಿಮಾನದ ಬದುಕನ್ನ ಬೆವರು ಸುರಿಸಿ ದುಡಿಯುವ ಜನರಿಗೆ ನೀಡುವಂತಹ ಬದ್ಧತೆ ಬದಲಾಗುವುದಿಲ್ಲ.
- ಕೆ.ಎಸ್.ನಾಗರಾಜ್, ಬೆಂಗಳೂರು




