ಬೆಳಗಾವಿ: ಮುಷ್ಕರ ನಿರತ ಡಯಾಲಿಸಿಸ್ ತಂತ್ರಜ್ಞರ ಜೊತೆ ಸಂಧಾನ ನಡೆಸಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಗ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಸಂಸ್ಥೆಯ ಬದಲಾಗಿ ಆಯಾ ಜಿಲ್ಲೆಗಳ ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿಗಳೇ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಚಳಿಗಾಲದ ಅಧಿವೇಶನದಲ್ಲಿ ಡಯಾಲಿಸಿಸ್ ನೌಕರರ ಪ್ರತಿಭಟನೆ ಕುರಿತು ಕೇಳಿಬಂದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ದಿನೇಶ್ಗುಂಡೂರಾವ್, ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವುದಾದರೆ ಅಗತ್ಯವಾದ ತಂತ್ರಜ್ಞರನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಪ್ರಸ್ತುತ ಡಯಾಲಿಸಿಸ್ ಕೇಂದ್ರಗಳಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳೇ ಯಂತ್ರಗಳನ್ನು ಅಳವಡಿಸುತ್ತಾರೆ. ಸರ್ಕಾರ ಯಾವುದೇ ಯಂತ್ರಗಳನ್ನೂ ಹಾಕುವುದಿಲ್ಲ. ಡಯಾಲಿಸಿಸ್ ಸೇವೆಯನ್ನು ಆರೋಗ್ಯ ಕರ್ನಾಟಕ ವಿಮಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
ಈ ಹಿಂದೆ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದ ಇಎಸ್ಕೆಎಜಿ ಸಂಸ್ಥೆ ಸಿಬ್ಬಂದಿಗೆ ವೇತನ, ಇಎಸ್ಐ, ಪಿಎಫ್ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿರಲಿಲ್ಲ. ಹೀಗಾಗಿ ಸರ್ಕಾರದಿಂದಲೇ ಇಎಸ್ಐ, ಪಿಎಫ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಪಡೆದ ಇಎಸ್ಕೆಎಜಿ ಸಂಸ್ಥೆಗೆ ಅಸಮರ್ಥ ಸೇವೆಗಾಗಿ ದಂಡ ವಿಧಿಸಲಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಜೊತೆಗೆ ರಾಜ್ಯದಲ್ಲಿ 4 ಕಂದಾಯ ವಿಭಾಗಗಳಲ್ಲೂ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಹೊಸ ಗುತ್ತಿಗೆಗಾಗಿ ಟೆಂಡರ್ ಕರೆಯಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳ ಗುತ್ತಿಗೆ ಅಂತಿಮಗೊಂಡಿವೆ. ಒಂದು ತಿಂಗಳ ಒಳಗಾಗಿ ಹೊಸ ಗುತ್ತಿಗೆದಾರರು ಆಧುನಿಕವಾದ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಿದ್ದಾರೆ. ತಂತ್ರಜ್ಞರು ವೇತನ ಪಾವತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿ ಉತ್ತಮವಾಗಿ ನಿರ್ವಹಣೆ ಮಾಡುವ ನಿರೀಕ್ಷೆಯಿದೆ ಎಂದರು.
ಈ ಬಾರಿ ಏಕ ಬಳಕೆಯ ಡಯಲೈಸರ್ಗಳನ್ನು ಉಪಯೋಗಿಸಲು ನಿರ್ಧರಿಸಲಾಗಿದೆ. ಈ ಮೊದಲು ಬಹು ಬಳಕೆಯ ಡಯಲೈಸರ್ಗಳಿಂದಾಗಿ ಸೋಂಕು ವ್ಯಾಪಿಸುವ ಆತಂಕ ಇತ್ತು. ಶುದ್ಧ ನೀರಿನ ಘಟಕ ಸೇರಿದಂತೆ ಹಲವಾರು ಅಗತ್ಯಗಳು ಬೇಕಿದ್ದು, ಏಕ ಬಳಕೆ ಸುರಕ್ಷಿತವಾಗಿದೆ ಎಂದರು.



