ಕಥೆ ಚೆನ್ನಾಗಿದ್ರೆ ರಾಜ್ಕುಮಾರ ಗೀಜ್ಕುಮಾರ ಎಲ್ಲಾ ಅದೇ ಇಲ್ದಿದ್ರೆ ಯಾವ್ ಗಮಾರ್ನು ಏನು ಮಾಡಕ್ಕಾಗಲ್ಲ: ಡಾ.ರಾಜಕುಮಾರ್
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕನ್ನಡ ಚಿತ್ರರಂಗ ಹುಟ್ಟಿದ್ದು 1934ರಲ್ಲಿ ಅಣ್ಣಾವ್ರ “ಬೇಡರ ಕಣ್ಣಪ್ಪ” ಬಿಡುಗಡೆಯಾದದ್ದು 1954 ರಲ್ಲಿ. ಅಂದರೆ ಅಣ್ಣಾವ್ರು ಚಿತ್ರರಂಗಕ್ಕೆ ಬಂದಾಗ ಚಿತ್ರರಂಗಕ್ಕೆ ಇಪ್ಪತ್ತರ ಪ್ರಾಯ! ಆದರೂ ಕನ್ನಡ ಚಿತ್ರರಂಗ ಅಂತ ಒಂದಿದೆ ಅಂತ ಬಹಳ ಜನಕ್ಕೆ ಆಗ ಗೊತ್ತೇ ಇರಲಿಲ್ಲವಂತೆ!! ತಮಿಳು, ತೆಲುಗು ಸಿನಿಮಾಗಳು ಕನ್ನಡಕ್ಕೆ ಆಗ ಡಬ್ಬಾಗಿ ಬರುತ್ತಿದ್ದವಂತೆ, ಕನ್ನಡದ ಜನ ಒರಿಜಿನಲ್ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಆ ಡಬ್ಬಾದ ಸಿನಿಮಾಗಳನ್ನೆ ನೋಡುತ್ತಿದ್ದರಂತೆ!!!
ನಿಜವಾದ ಕನ್ನಡ ಚಿತ್ರರಂಗ ಹುಟ್ಟಿದ್ದೆ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಅನ್ನುವುದನ್ನು ಇತಿಹಾಸ ಹೇಳುತ್ತದೆ. 2000ನೇ ಇಸವಿಯಲ್ಲಿ ಬಿಡುಗಡೆಯಾದ “ಶಬ್ಧವೇದಿ” ಜೊತೆಗೆ ಅಣ್ಣಾವ್ರ ಚಿತ್ರ ಬದುಕು ಮುಕ್ತಾಯವಾಯ್ತು, 2006 ಇಸವಿಯಲ್ಲಿ ಅಣ್ಣಾವ್ರು ತೀರಿಕೊಂಡರು, ಆ ಮೂಲಕ ಕನ್ನಡ ಚಿತ್ರರಂಗದ ಒಂದು “ಸುವರ್ಣಯುಗ” ಅಂತ್ಯವಾಯ್ತು ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು.
ಈಗ ವರ್ಷಕ್ಕೆ ನಾನೂರಕ್ಕೂ ಹೆಚ್ಚು ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿವೆ, ವಾರಕ್ಕೆ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೂ ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳ ಕಡೆಗೆ ತಿರುಗಿ ನೋಡುತ್ತಿಲ್ಲ. ಮೊದಲೂ ಸಹ ಕನ್ನಡ ಸಿನಿಮಾಗಳಿಗೆ ತಮಿಳು, ತೆಲುಗು, ಹಿಂದಿ ಸಿನಿಮಾಗಳು ಪೈಪೋಟಿ ನೀಡುತ್ತಿದ್ದವು. ಆ ಪೈಪೋಟಿಯ ಜೊತೆ ಜೊತೆಗೆ ಕನ್ನಡ ಸಿನಿಮಾಗಳೂ ಸಹ ಯಶಸ್ಸು ಕಾಣುತ್ತಿದ್ದವು.
ಆದರೆ ಇವತ್ತು ಕನ್ನಡ ಚಿತ್ರರಂಗದ ಸ್ಥಿತಿ ಅಯೋಮಯವಾಗಿದೆ. ಮುಚ್ಚುವ ಸ್ಥಿತಿ ತಲುಪಿದೆ, ಇದಕ್ಕೆ ಕಾರಣ ಏನಿರಬಹುದು? ಅಂತ ಯೋಚಿಸುವುದಕ್ಕಿಂತ ಮೊದಲು ಈಗ ಕರ್ನಾಟಕದಲ್ಲಿ ತಮಿಳು, ತೆಲುಗು, ಹಿಂದಿ ಚಿತ್ರಗಳು ಅಷ್ಟಾಗಿ ಓಡುತ್ತಿಲ್ಲ. ಬದಲಿಗೆ ಮಲಯಾಳಂ ಸಿನಿಮಾಗಳು ಭರ್ಜರಿಯಾಗಿ ಯಶಸ್ಸು ಕಾಣುತ್ತಿವೆ!!! ಅವು ಕೆಜಿಎಫ್, ಕಾಂತಾರ ತರಹದ ಹೈ ಬಡ್ಜೆಟ್ ಸಿನಿಮಾಗಳಲ್ಲ; ಬದಲಿಗೆ ಮೂರು-ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿರುವ ಸಿನಿಮಾಗಳು.
ಅಂದರೆ ಕರ್ನಾಟಕದ ಪ್ರೇಕ್ಷಕರಿಗೆ ಬೇಕಾಗಿರುವುದು ವಿಜೃಂಭಣೆಯಲ್ಲ, ಒಳ್ಳೆಯ ಕಥಾವಸ್ತು!
ಹಾಗಾದರೆ ಕನ್ನಡದಲ್ಲಿ ಒಳ್ಳೆಯ ಕಥಾವಸ್ತು ಇರುವ ಸಿನಿಮಾಗಳು ಬರುತ್ತಲೇ ಇಲ್ಲವೆ? ಅಂದರೆ ಖಂಡಿತ ಅಲ್ಲೊಂದು ಇಲ್ಲೊಂದು ಸಿನಿಮಾಗಳು ಬರುತ್ತಿವೆ. ಆ ಸಿನಿಮಾ ಚೆನ್ನಾಗಿದೆ ಅಂತ ಜನರಿಗೆ ಗೊತ್ತಾಗುವ ಮುಂಚೆ ಆ ಚಿತ್ರ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿರುತ್ತದೆ, ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಅಂದರೆ “O2” ಅನ್ನುವ ಕನ್ನಡ ಸಿನಿಮಾ! ಅದು ತುಂಬಾ ಚೆನ್ನಾಗಿತ್ತು, ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಬ್ಯಾನರ್ನಿಂದ ನಿರ್ಮಿಸಿದ ಸಿನಿಮಾ ಆಗಿತ್ತು. ಇಷ್ಟಿದ್ದರೂ ಆ ಸಿನಿಮಾ ಜನಮಾನಸವನ್ನು ತಲುಪಲಾಗಲಿಲ್ಲ!!
ದೊಡ್ಡ ದೊಡ್ಡ ಸ್ಟಾರ್ಗಳು ಅಭಿನಯಿಸಿದರೆ ಸಿನಿಮಾ ಸೂಪರ್ ಹಿಟ್ ಆಗಿಬಿಡುತ್ತದೆಯೇ ಅಂದರೆ ಅದೂ ಕೂಡ ನೂರಕ್ಕೆ ನೂರು ಗ್ಯಾರೆಂಟಿ ಇಲ್ಲ. ಅದು ನಿಜವೆ ಆಗಿದ್ದರೆ ಡಾ.ಶಿವರಾಜ್‌ಕುಮಾರ್, ಪ್ರಭುದೇವ ಅವರು ಮೊದಲಬಾರಿಗೆ ಜೊತೆಯಾಗಿ ಅಭಿನಯಿಸಿ, ಯೋಗರಾಜ್ ಭಟ್ಟರು ನಿರ್ದೇಶಿಸಿದ್ದ “ಕರಟಕ ದಮನಕ” ಚಿತ್ರ ಸೂಪರ್-ಡೂಪರ್ ಹಿಟ್ಟಾಗಬೇಕಿತ್ತು. ಕಥಾವಸ್ತು ಮತ್ತು ಅದರ ನಿರೂಪಣೆಯ ಶೈಲಿ 40-50 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋದಂತಿತ್ತು!!!
ಅದೇ “ಕಾಟೇರ” ಸಿನಿಮಾ ಸೂಪರ್ ಹಿಟ್ಟಾಯ್ತು. ಇದುವರೆಗಿನ ದರ್ಶನ್ ಅವರ ಸಿನಿಮಾಗಳಲ್ಲಿ ಕಾಣಸಿಗದಿದ್ದ “ಕಥೆ” ಈ ಸಿನಿಮಾದಲ್ಲಿತ್ತು! ಆದ್ದರಿಂದ “ನಾನು ದರ್ಶನ್ ಸಿನಿಮಾಗಳನ್ನೇ ನೋಡುವುದಿಲ್ಲ ಅನ್ನುವ ಬೇರೊಂದು ವರ್ಗದ ಪ್ರೇಕ್ಷಕರು ಕೂಡ ಕಾಟೇರ ನೋಡಿದರು!” ಇದರ ತಾತ್ಪರ್ಯ ಇಷ್ಟೆ ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್ ಇರಬೇಕು, ಜೊತೆಗೆ ಸ್ಟಾರ್ಗಳು ಅಂತಹ ಚಿತ್ರಗಳಲ್ಲಿ ಅಭಿನಯಿಸಿದರೆ ಗೆಲುವು ಸುಲಭ ಅನ್ನುವುದು ನನ್ನ ಅಭಿಪ್ರಾಯ.
ಸಿನಿಮಾ “ಸ್ಟಾರ್”ಗಳ ಮೀಡಿಯಾ ಆಗುವ ಬದಲು ಬರಹಗಾರನ, ನಿರ್ದೇಶಕನ ಮೀಡಿಯ ಆದಾಗ ಮಾತ್ರ ಚಿತ್ರರಂಗ ಉದ್ಧಾರ ಆಗಲು ಸಾಧ್ಯ ಅದಕ್ಕೆ ಇಂದಿನ ಮಲಯಾಳಂ ಸಿನಿಮಾ ರಂಗ ತಾಜಾ ಉದಾಹರಣೆ.
– ಪ್ರಕಾಶರಾಜ್ ಮೇಹು, ಸಾಹಿತಿ, ಚಲನಚಿತ್ರ ನಿರ್ದೇಶಕ




