ಜನವರಿ 12 ರಿಂದ 18 ರವರೆಗೆ ಗವಿಶ್ರೀ ಕ್ರೀಡಾ ಉತ್ಸವ: ಕೆ.ರಾಜಶೇಖರ ಹಿಟ್ನಾಳ

1 year ago

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದಿಯಾದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವ ಜನವರಿ 12 ರಿಂದ 18 ರವರೆಗೆ ಕೊಪ್ಪಳ ನಗರದಲ್ಲಿ ನಡೆಯಲಿದೆ ಎಂದು ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಗವಿಶ್ರೀ ಕ್ರೀಡಾ ಉತ್ಸವ-2025 ಕುರಿತು ಮಾಹಿತಿ ನೀಡಲು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಸಹಭಾಗಿತ್ವದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಗವಿಶ್ರೀ ಕ್ರೀಡಾ ಉತ್ಸವ-2025ರ ಕ್ರೀಡಾಕೂಟದಲ್ಲಿ 19 ರೀತಿಯ ವಿವಿಧ ಸಾಂಪ್ರದಾಯಿಕ ಹಾಗೂ ದೇಶಿಯ ಕ್ರೀಡೆಗಳು ಮತ್ತು ಪ್ರದರ್ಶನ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಹಾರ, ಊಟದ ವ್ಯವಸ್ಥೆ ಮಾಡಿಸಲಾಗಿದೆ ಎಂದರು.

ಆಹ್ವಾನಿತ ತಂಡಗಳಿಂದ ಕ್ರಿಕೆಟ್ ಪಂದ್ಯಾವಳಿಯು ನಗರದ ತಾಲ್ಲೂಕ ಕ್ರೀಡಾಂಗಣದಲ್ಲಿ ಜ. 12 ಮತ್ತು 13 ರಂದು  ಬೆಳಿಗ್ಗೆ 11 ಗಂಟೆಗೆ ಹಾಗೂ ಫೈನಲ್ ಪಂದ್ಯಾವಳಿ  ಜ. 14 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದ್ದು, ವಿಜೆತರಿಗೆ ಆರ್ಕಷಕ ಟ್ರೋಫಿ ನೀಡಲಾಗುವುದು. ಜ. 14 ರಂದು ಬೆಳಿಗ್ಗೆ 6.30ಕ್ಕೆ ಕೊಪ್ಪಳ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್, ಅಶೋಕ ಸರ್ಕಲ್, ಕಿನ್ನಾಳ ರೋಡ್, ಭಾಗ್ಯನಗರ ಕ್ರಾಸ್, ಭಾಗ್ಯನಗರ, ಲೇಬರ್ ಸರ್ಕಲ್, ಸಿಂಪಿ ಲಿಂಗಣ್ಣ ರಸ್ತೆ ಮೂಲಕ ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ಆವರಣದವರೆಗೆ ಪುರುಷ ಮತ್ತು ಮಹಿಳೆಯರಿಗೆ 12 ಕಿ.ಮಿ. ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 20,000 ರೂ., ದ್ವಿತೀಯ 15,000 ರೂ., ತೃತೀಯ 12,000 ರೂಪಾಯಿ ಹಾಗೂ ಒಟ್ಟು ಎಂಟು ಹಂತಗಳಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದರು.

ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಜ. 14 ರಂದು ಬೆಳಿಗ್ಗೆ 11 ಗಂಟೆಗೆ ಗವಿಮಠದ ರಥದ ಹತ್ತಿರ ಏರ್ಪಡಿಸಲಾಗಿದ್ದು, ಪ್ರಥಮ 10,000 ರೂ., ದ್ವಿತೀಯ ದ್ವಿತೀಯ 8000 ರೂ., ತೃತೀಯ 6000 ರೂ., ನಾಲ್ಕನೇ ಬಹುಮಾನ 4,000 ರೂಪಾಯಿ ಹಾಗೂ ಭಾಗವಹಿಸಿದವರೆಲ್ಲರಿಗೂ ಉಡುಗೊರೆ ನೀಡಲಾಗುತ್ತದೆ. ಜ. 15 ರಂದು ಬೆಳಿಗ್ಗೆ 10 ಗಂಟೆಗೆ ಗವಿಮಠ ಆವರಣದಲ್ಲಿ ಆಕರ್ಷಕ ಮಲ್ಲಕಂಬ ಪ್ರದರ್ಶನ ಜರುಗಲಿದ್ದು, ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ, ಸಿರಗುಪ್ಪದ ಯೋಗ ಮಲ್ಲಕಂಬ ತಂಡ ಮತ್ತು ಕೊಪ್ಪಳದ ಮಹಿಳಾ ಮಲ್ಲಕಂಬ ತಂಡ ಪಾಲ್ಗೊಳ್ಳಲಿದ್ದಾರೆ ಎಂದರು.

ಜ. 15 ರಂದು ಬೆಳಿಗ್ಗೆ 11 ಗಂಟೆಗೆ ಗವಿಮಠ ಆವರಣದಲ್ಲಿ ನಡೆಯಲಿರುವ ಯುವಕರ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯು ಮುಕ್ತ ಆಹ್ವಾನವಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6000 ರೂ.ಗಳ ಬಹುಮಾನವಿದೆ. ಅಂದು ಬೆಳಿಗ್ಗೆ 9.30ಕ್ಕೆ ಗವಿಮಠ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ವಾನ ಪ್ರದರ್ಶನವಿರುತ್ತದೆ. ಜ. 16ರಂದು ಬೆಳಿಗ್ಗೆ 10 ಗಂಟೆಗೆ ಕರಾಟೆ ಪ್ರದರ್ಶನವಿದೆ. ಬೆಳಿಗ್ಗೆ 10 ಗಂಟೆಗೆ ಯುವಕರಿಂದ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆ ಜರುಗಲಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6000 ರೂ. ಬಹುಮಾನವಿದೆ ಎಂದರು.

ಅಂದು ಬೆಳಿಗ್ಗೆ 11 ಗಂಟೆಗೆ ಆಹ್ವಾನಿತ ರಾಷ್ಟ್ರ ಹಾಗೂ ರಾಜ್ಯ ಮಟ್ಟದ, ಪುರುಷ ಮತ್ತು ಮಹಿಳಾ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಕೊಪ್ಪಳ ಕೇಸರಿಗೆ ಬೆಳ್ಳಿ ಗಧೆ ನೀಡಲಾಗುವುದು. ತಾಲ್ಲೂಕ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಪುರುಷ ವಿಕಲಚೇತನರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ 15,000 ರೂ., ದ್ವಿತೀಯ 13,000 ರೂ., ತೃತೀಯ 10,000 ರೂ.ಗಳ ಬಹುಮಾನವಿರುತ್ತದೆ. ಅಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಥಮ 20,000 ರೂ., ದ್ವಿತೀಯ 18,000 ರೂ., ತೃತೀಯ 15,000 ರೂ. ಮತ್ತು ನಾಲ್ಕನೇ ಸ್ಥಾನಕ್ಕೆ 12,000 ರೂ.ಗಳ ಬಹುಮಾನವಿದೆ ಎಂದರು.

ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 15,000 ರೂ., ದ್ವಿತೀಯ 12,000 ರೂ., ತೃತೀಯ 10,000 ರೂ., ನಾಲ್ಕನೇ ಸ್ಥಾನಕ್ಕೆ 5,000 ರೂ.ಗಳ ಬಹುಮಾನ ಸಿಗಲಿದೆ. ಅಂದು ಮಧ್ಯಾಹ್ನ  3 ಗಂಟೆಗೆ ತಾಲ್ಲೂಕ ಕ್ರೀಡಾಂಗಣದಲ್ಲಿ 15 ವರ್ಷದ ಒಳಗಿನ ಮಕ್ಕಳಿಗಾಗಿ ಹಮ್ಮಿಕೊಂಡ ಛದ್ಮವೇಷ/ ಫ್ಯಾಷನ್ ಷೋನಲ್ಲಿ ಪ್ರಥಮ 15,000 ರೂ., ದ್ವಿತೀಯ 12,000 ರೂ., ತೃತೀಯ 10,000 ರೂ. ಬಹುಮಾನವಿದ್ದು, ಭಾಗವಹಿಸಿದವರೆಲ್ಲರಿಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ಅಂದು ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6,000 ರೂ.ಗಳ ಬಹುಮಾನ ನೀಡಲಾಗುವುದು ಎಂದರು.

ಜ. 17 ರಂದು ಸಂಜೆ 5 ಗಂಟೆಯಿಂದ ತಾಲ್ಲೂಕ ಕ್ರೀಡಾಂಗಣದಲ್ಲಿ ಆಹ್ವಾನಿತ ಪುರುಷರ ದೇಹದಾರ್ಡ್ಯತೆ (Body Building) ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಿಗಳು, ಮೊದಲ ಮೂವತ್ತು ವಿಜೇತರಿಗೆ ಬಹುಮಾನ ನೀಡಲಾಗುವುದು. Mr. Koppal ಪ್ರಶಸ್ತಿಯನ್ನು ಸಹ ಪ್ರದಾನ ಮಾಡಲಾಗುತ್ತದೆ. ಅಂದು ಬೆಳಿಗ್ಗೆ 10 ಗಂಟೆಗೆ ಪುರುಷ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿದ್ದು, ಫೈನಲ್ ಪಂದ್ಯಾವಳಿ ಜ. 18ರ ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಜರುಗಲಿದೆ. ಇದರಲ್ಲಿ ವಿಜೇತರಾದವರಿಗೆ ಪ್ರಥಮ 30,000 ರೂ., ದ್ವಿತೀಯ 25,000 ರೂ, ತೃತೀಯ  20,000 ರೂ., ಚತುರ್ಥ 15,000 ರೂ. ಮತ್ತು ಆಕರ್ಷಕ ಟ್ರೋಫಿ ಸಿಗಲಿದೆ. ಜ. 17ರ ಬೆಳಿಗ್ಗೆ 10 ಗಂಟೆಗೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು  ಹಮ್ಮಿಕೊಂಡಿದ್ದು, ಫೈನಲ್ ಪಂದ್ಯಾವಳಿ ಜ. 18ರ ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಜರುಗಲಿದೆ. ಇದರಲ್ಲಿ ಪ್ರಥಮ ಬಹುಮಾನ ರೂಪಾಯಿ 30,000 ರೂ., ದ್ವಿತೀಯ 25,000 ರೂ., ತೃತೀಯ – 20,000 ರೂ., ಚತುರ್ಥ 15,000 ರೂ. ಮತ್ತು ಆಕರ್ಷಕ ಟ್ರೋಫಿ ದೊರೆಯಲಿದೆ. ಜ. 17ರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಗವಿಮಠ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಗಾಳಿಪಟ ಹಾರಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಉಡುಗೊರೆ ಸಿಗಲಿದೆ. ಅಲ್ಲದೇ ಅಂದು ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯವರೆಗೆ ದೇಶದ ಪ್ರಸಿದ್ಧ 5 ತಂಡಗಳಿಂದ ಬೃಹತ್ ಗಾತ್ರದ ಗಾಳಿಪಟ ಪ್ರದರ್ಶನ ಮತ್ತು ರಾತ್ರಿ 10 ರಿಂದ 12 ಗಂಟೆವರೆಗೆ ಎಲ್.ಇ.ಡಿ ಗಾಳಿಪಟ ಪ್ರದರ್ಶನ ಜರುಗಲಿದೆ ಎಂದರು.

ಜನವರಿ 17ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಗವಿಮಠದ ವರೆಗೆ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ಹಮ್ಮಿಕೊಂಡಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬೆಳ್ಳಿಯ ಎತ್ತು ಬಂಡಿ, ದ್ವಿತೀಯ ಬೆಳ್ಳಿಯ ಬಂಡಿ, ತೃತೀಯ ಬೆಳ್ಳಿಯ ಎತ್ತು ಬಹುಮಾನದ ರೂಪದಲ್ಲಿ ನೀಡಲಾಗುವುದು. ಸಾಂಪ್ರದಾಯಿಕ, ಜನಪದ ಶೈಲಿಯಲ್ಲಿ ಎತ್ತು ಬಂಡಿಗಳನ್ನ ಬಣ್ಣ ಹಚ್ಚಿ ಶೃಂಗಾರಗೊಳಿಸಿದ ರೈತನು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಮುಖಂಡರಾದ ಸಿ.ವಿ. ಚಂದ್ರಶೇಖರ್, ಮಾಜಿ ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ಕೊಪ್ಪಳ ನಗರಸಭೆ ಸದಸ್ಯ ರಾಜಶೇಖರ ಆಡೂರ, ಅಜೀಂ ಅತ್ತರ್, ಅರುಣ್ ಅಪ್ಪು ಶೆಟ್ಟಿ ಸೇರಿದಂತೆ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

Leave a Reply