ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಮಕ್ಕಳಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು, ಜೊತೆಗೆ ಕನ್ನಡ ಭಾಷೆಯ ಮಹತ್ವ ಅರಿವಾಗಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಮಕ್ಕಳಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕಟವಾಗಿರುವ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಯೋಜನೆಯೊಂದನ್ನು ಅಳವಡಿಸಿಕೊಂಡಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬಂದಿರುವ ವಿವಿಧ ಲೇಖಕರ ಬುಹುತೇಕ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ ಬಂದಿದೆ. ಪರಿಷತ್ತಿನ ೧೦೮ ವರ್ಷಗಳ ಇತಿಹಾಸದಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಕ್ಷರಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜೊತೆಗೆ ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೆಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಕನ್ನಡ ಸಾಹಿತ್ಯದ ಅಘಾದತೆ ಮತ್ತು ಮಹತ್ವವನ್ನು ಕಾಲಕಾಲಕ್ಕೆ ಜನರಿಗೆ ತಿಳಿಸುವ ಕೆಲಸವನ್ನು ಪರಿಷತ್ತು ಮಾಡುತ್ತ ಬಂದಿದೆ. ತೀರಾ ಅಪರೂಪ ಎನ್ನಲಾಗುವ ಹಸ್ತ ಪ್ರತಿಗಳನ್ನು ರಕ್ಷಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತನ್ನು ʻಜನಸಾಮಾನ್ಯರ ಪರಿಷತ್ತನ್ನಾಗಿಸುವʼ ಹಿನ್ನೆಲೆಯಲ್ಲಿ ಈ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಮೊದಲು ʻಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಬೇಕುʼ ಎನ್ನುವ ಮಹತ್ವದ ಉದ್ದೇಶದಿಂದ ಕನ್ನಡ ಶಾಲೆಗಳ ಸ್ಥಿತಿಗತಿಗಳ ಕುರಿತು ನಾಡಿನ ಹಿರಿಯ ಚಿಂತಕರು, ಮಠಾಧೀಶರು, ವಿಶ್ರಾಂತ ನ್ಯಾಯಾಧೀಶರು, ಹಿರಿಯ ಸಾಹಿತಿಗಳು, ಶಿಕ್ಷಣತಜ್ಞರು, ಸರಕಾರದ ಶಿಕ್ಷಣ ಮಂತ್ರಿಗಳು, ಅಧಿಕಾರಿಗಳು ಸೇರಿದಂತೆ ಅನೇಕ ಮಹನ್ನೀಯರನ್ನೊಳಗೊಂಡ ʻದುಂಡು ಮೇಜಿನ ಸಭೆʼಯನ್ನು ಮಾಡಿ, ಕನ್ನಡ ಶಾಲೆಗಳ ಉಳಿವಿಗೆ ಕೈಗೊಳ್ಳಬೇಕಾದ ಮಹತ್ವದ ನಿರ್ಣಯಗಳನ್ನು ಸರಕಾರಕ್ಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಹುಟ್ಟಿಕೊಳ್ಳಬೇಕು, ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳಿಗೆ ಮೌಲ್ಯಯುತ ಪುಸ್ತಗಳನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ಯೋಜನೆಯ ಮೊದಲ ಹಂತವಾಗಿ ೧೦೦ ಶಾಲೆಗೆ ಪರಿಷತ್ತು ಪ್ರಕಟಿಸಿರುವ ಮೌಲ್ಯಯುತ ೨೪೦ ಪುಸ್ತಕಗಳನ್ನು ವಿತರಿಸಲು ತಿರ್ಮಾನಿಸಲಾಗಿದೆ. ಈ ಯೋಜನೆಯ ಲಾಭವನ್ನು ಅಕ್ಟೋಬರ್ ೨ ದಿಂದ ಆರಂಭವಾಗಿ ಅಕ್ಟೋಬರ್ ೩೦ ರವರೆಗೆ ಪಡೆಯಬಹುದಾಗಿದೆ. ಕನ್ನಡ ಶಾಲೆಗಳ ಆಡಳಿತ ಮಂಡಳಿ ಅಥವಾ ಶಿಕ್ಷಕರು ಶಾಲಾ ದಾಖಲೆಯೊಂದಿಗೆ ಖುದ್ದಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದು ಪುಸ್ತಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪುಸ್ತಕಗಳ ಸಾಗಾಣಿಕಾ ವೆಚ್ಚವನ್ನು ಕಡ್ಡಾಯವಾಗಿ ಆಯಾ ಶಾಲೆಯವರೇ ಭರಿಸಿಕೊಳ್ಳಬೇಕು. ಖುದ್ದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಬರುವ ಮೊದಲ ೧೦೦ ಶಾಲೆಗಳಿಗೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಮೌಲ್ಯಯುತ ಪುಸ್ತಕಗಳನ್ನು ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ದೂರವಾಣಿ, ಮೇಲ್ ಮೂಲಕ ಅಥವಾ ಅಂಚೆಮೂಲಕ ಪುಸ್ತಕಗಳನ್ನು ಪಡೆಯಲು ಅಥವಾ ಕಾಯ್ದಿರಿಸಲು ಈ ಯೋಜನೆಯಲ್ಲಿ ಅವಕಾಶ ಇರುವುದಿಲ್ಲ. ಖುದ್ದಾಗಿ ಶಾಲೆಯ ಅಧಿಕೃತ ದಾಖಲೆಯೊಂದಿಗೆ ಬಂದು ಪಸ್ತಕಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




