ಎಸ್.ಎಂ. ಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸಮರ್ಪಣೆ

3 years ago

ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ  ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿತು. ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಎಸ್.ಎಂ. ಕೃಷ್ಣ ಅವರಿಗೆ ಗೌರವ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಈ ಗೌರವವನ್ನು ಸಂತಸದಿಂದ ಸ್ವಿಕರಿಸಿದ ಎಸ್.ಎಂ. ಕೃಷ್ಣ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಗೌರವವು ತವರು ಮನೆಯ ಗೌರವಕ್ಕೆ ಸರಿಸಮನಾಗಿದೆ. ಈ ಗೌರವ ಸಮಸ್ತ ಕನ್ನಡಿಗರಿಂದ ಪ್ರದಾನ ಮಾಡಲಾಗಿದೆ. ೭ ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಬೆಳೆವಣಿಗೆಯನ್ನು ಗಮನಿಸುತ್ತಾ ಇದ್ದು, ಪ್ರಪಂಚದಾದ್ಯಂತ ಹರಡಿ ಹಂಚಿ ಹೋಗಿರುವ ಕನ್ನಡಿಗರನ್ನು ಒಂದು ಮಾಡಲು ಮಹೇಶ ಜೋಶಿ ಅವರು ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಅವರ ಕಾರ್ಯತತ್ಪರತೆ ಕಂಡಾಗ ಸಾಹಿತ್ಯ ಪರಿಷತ್ತಿಗೆ ಸೂಕ್ತ ಸಾರಥಿ ಸಿಕ್ಕಿದ್ದಾರೆ ಎನ್ನುವಲ್ಲಿ ಸಂಶಯವಿಲ್ಲ ಎಂದರು.

ಹಾವೇರಿಯಲ್ಲಿ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನವನ್ನು ದಾಖಲೆ ರೀತಿಯಲ್ಲಿ ಯಶಸ್ವಿಗೊಳಸಿದ್ದಾರೆ. ಅದೇ ರೀತಿಯಲ್ಲಿ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಭರ್ಜರಿಯಾಗಿ ನಡೆಸುವ ಮೂಲಕ ದಾಖಲೆ ಸೃಷ್ಟಿಮಾಡುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಅದನ್ನು ಮಹೇಶ ಜೋಶಿ ಅವರು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಮ್ಮೇಳಕ್ಕೆ ತಮ್ಮ ಸಲಹೆ ಸಹಕಾರ ಕಾಲ ಕಾಲಕ್ಕೆ ಇರಲಿದೆ ಎಂದರು.

ಮಹೇಶ ಜೋಶಿ ಮಾತನಾಡಿ ಹಿರಿಯರು ಹಾಗೂ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎನ್ನುವ ಹೆಗ್ಗಳಿಕೆಗೆ ಏರಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಯಿಂದ ಅವರನ್ನು ಗೌರವಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಮುಂದೆ ನಡೆಯಲಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಮಂಡ್ಯ ಸಮ್ಮೇಳನವನ್ನು ನ ಭೂತೋ ನ ಭವಿಷ್ಯತಿಃ ಎನ್ನುವ ರೀತಿಯಲ್ಲಿ ನಡೆಸುವ ಇಂಗಿತವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂಡಿದ್ದು ಅದಕ್ಕೆ ಹಿರಿಯರು ಹಾಗೂ ನಾಡಿನ ಬಗ್ಗೆ ದೂರ ದೃಷ್ಟಿತ್ವವನ್ನು ಹೊಂದಿರುವ  ಎಸ್.ಎಂ. ಕೃಷ್ಣ ಅವರ ಸಲಹೆ ಸೂಚನೆಗಳನ್ನು ಪರಿಷತ್ತು ನಿರೀಕ್ಷಿಸುತ್ತಿದೆ. ಅದಕ್ಕೆ ಅವರು ತುಂಬ ಹೃದಯದಿಂದ ಸಹಕರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಅವರು ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ. ಎಂ. ಪಟೇಲ್ ಪಾಂಡು ಅವರು ಹಾಜರಿದ್ದರು.

Leave a Reply