ಡಿ.16ರಂದು ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಕನ್ನಡ ಅರವಿಂದ ಮತ್ತು ಕನ್ನಡ ಚಿರಂಜೀವಿ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ನಾಡೋಜ ಡಾ.ಎಂ.ಚಿದಾನಂದಮೂರ್ತಿಯವರು ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರು. ಸಾಂಸ್ಕೃತಿಕ ಇತಿಹಾಸ, ಶಾಸನ ಶೋಧ, ಭಾಷಾ ವಿಜ್ಞಾನ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನ ಶಿಸ್ತುಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ ಮಹಾನ್ ಸಾಧಕರು. ವಿದ್ವತ್ ಕ್ಷೇತ್ರದಲ್ಲಿ ಮಾಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಚಿಮೂ ಗೋಕಾಕ್ ಚಳವಳಿಯ ಮೂಲಕ ಕನ್ನಡ ಚಳವಳಿ ಪ್ರವೇಶಿಸಿ ಕನ್ನಡ ಹೋರಾಟಕ್ಕೆ ಅಗತ್ಯವಾಗಿದ್ದ ಘನತೆ-ಗಾಂಭೀರ್ಯವನ್ನು ತಂದುಕೊಟ್ಟವರು. ಅವರ ಬದುಕಿನುದ್ದಕ್ಕೂ ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಲು ಜೀವನಪರ್ಯಂತ ಶ್ರಮಿಸಿದವರು. ಅವರ ನೆನಪಿನಲ್ಲಿ ಕನ್ನಡ ಗೆಳೆಯರ ಬಳಗವು ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ಪ್ರಶಸ್ತಿಯು ೫೦೦೦/-(ಐದು ಸಾವಿರ ರೂಪಾಯಿ) ನಗದು, ಪ್ರಶಸ್ತಿ ಫಲಕ, ಫಲ-ತಾಂಬೂಲಗಳನ್ನೊಳಗೊಂಡಿದೆ.
- ಕಾಲದ ತುರ್ತು: ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಫ್ಯಾಸಿಸಂ ವಿರುದ್ಧದ ಹೋರಾಟ
- ಡಿಸೆಂಬರ್ 1, 2006ರಂದು ಸಮಗ್ರ ಕರಡು ಮತದಾರರ ಪಟ್ಟಿ
- ಡಾ.ಕೆ.ಆರ್.ಗಣೇಶ್ ಸೇರಿದಂತೆ ಮೂವರಿಗೆ ಪ್ರಶಸ್ತಿ
- ಕೆರೆ ಒತ್ತುವರಿದಾರರಿಗೆ ಬಿಗ್ ಶಾಕ್
- ರವಿ ಹಂಜ್ ಸಾಂಸ್ಕೃತಿಕ ಭಯೋತ್ಪಾದಕ: ಟಿ.ಎ.ನಾರಾಯಣಗೌಡ
2026ರ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ಗೆ ಹಳೆಗನ್ನಡ ಕಾವ್ಯ, ಶಾಸನ ಸಂಫಾದನೆ, ಇತಿಹಾಸ, ವ್ಯಾಕರಣ, ಛಂದಸ್ಸು, ಲಿಪಿ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಮೌಲೀಕ ಕೆಲಸ ಮಾಡಿರುವ ವಿಶ್ರಾಂತ ಪ್ರಾಧ್ಯಾಪಕ ಖ್ಯಾತ ವಿದ್ವಾಂಸ ಡಾ. ಕೆ.ಆರ್. ಗಣೇಶ್ ಅವರು ಆಯ್ಕೆಯಾಗಿದ್ದಾರೆ.
ಹೊರನಾಡ ಕನ್ನಡಿಗ, ಸಾಹಿತಿ ಡಾ.ಜೋಸ್ಯುಲ ಸದಾನಂದ ಶಾಸ್ತಿçಯವರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿ: ಬೆಳಗಾವಿ ಕನ್ನಡಪರ ಹೋರಾಟಕ್ಕೆ ಗಟ್ಟಿಯ ನೆಲೆ ಒದಗಿಸಿದ ಅರವಿಂದರಾಯ ಜೋಶಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಚಟುವಟಿಕೆಗೆ ವಿಸ್ತಾರವಾದ ವೇದಿಕೆಯನ್ನು ನಿರ್ಮಿಸಿದವರು. ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಸೇನಾನಿ, ಬೆಳಗಾವಿಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು, ಕೇಂದ್ರ ಗೃಹ ಸಚಿವರಿಗೆ ಕಾರ್ಯದರ್ಶಿಯಾಗಿದ್ದಾಗಲೂ ಕರ್ನಾಟಕವನ್ನು ಮರೆಯಲಿಲ್ಲ. ಜೋಶಿ ಅವರ ನೆನಪಿನಲ್ಲಿ ಕನ್ನಡ ಪರಿಚಾರಕರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿಯನ್ನು ಬಳಗ ನೀಡುತ್ತದೆ.
2026ರ ಕನ್ನಡ ಅರವಿಂದ ಪ್ರಶಸ್ತಿಯನ್ನು ಆಂಧ್ರ ಪ್ರದೇಶದ ಅನಂತಪುರದ ಅಪರೂಪದ ಕನ್ನಡ ಪರಿಚಾರಕರಾದ ಡಾ.ಜೋಸ್ಯುಲ ಸದಾನಂದ ಶಾಸ್ತ್ರಿಯವರಿಗೆ ಕೊಡಮಾಡಲಾಗುತ್ತಿದೆ. ಕನ್ನಡದಲ್ಲಿ ಅಷ್ಟಾವಧಾನವನ್ನು ಪುನರುಜ್ಜೀವನ ಮಾಡಿದವರಲ್ಲಿ ಮೊದಲಿಗರು. ಬೆಂಗಳೂರಿನಲ್ಲಿ 1982ರಲ್ಲಿಯೇ ಕನ್ನಡ ಅಷ್ಟಾವಧಾನ ನಡೆಸಿದ ದಾಖಲೆ ಅವರದು. ಅವರ ಪಿಎಚ್ಡಿ ನಿಬಂಧ ‘ವ್ಯಾಸ ಪಂಪ ನನ್ನಯ ತುಲನಾತ್ಮಕ ಅಧ್ಯಯನ’. ಹರಿಕಥೆ ನಡೆಸುವುದರಲ್ಲಿ ಪರಿಣಿತರು. ಅನಂತಪುರದಲ್ಲಿ ನಿರಂತರವಾಗಿ ಸಾಹಿತ್ಯ ಪರಿಚಾರಕೆ ನಡೆಸಿದ್ದಾರೆ. ಇವರು ಕನ್ನಡದಿಂದ ತೆಲುಗು ಭಾಷೆಗೆ 14, ತೆಲುಗಿನಿಂದ ಕನ್ನಡಕ್ಕೆ 6 ಕೃತಿಗಳನ್ನು ಅನುವಾದ ಮಾಡಿದ್ದಾರೆ.
ಕನ್ನಡ ಹೋರಾಟಗಾರ, ಪರಿಚಾರಕ ಬಿ.ಸಿ.ಜಯರಾಂ ಅವರಿಗೆ ‘ಕನ್ನಡ ಚಿರಂಜೀವಿ’ಪ್ರಶಸ್ತಿ: ಅಪರೂಪದ ಕನ್ನಡ ಪರಿಚಾರಕ ಆಳ್ಲ ಚಿರಂಜೀವಿ ೧೯೯೮ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು. ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಚಿರಂಜೀವಿ ಬದುಕಿನುದ್ದಕ್ಕೂ ಕನ್ನಡಸೇವೆ ಮಾಡಿದರು. ಈ ಅನನ್ಯ ಕನ್ನಡ ಪರಿಚಾರಕನ ನೆನಪಿನಲ್ಲಿ ಕನ್ನಡ ಕಾರ್ಯಕರ್ತರಿಗೇ ‘ಕನ್ನಡ ಚಿರಂಜೀವಿ’ಪ್ರಶಸ್ತಿಯನ್ನು ಬಳಗವು ನೀಡುತ್ತಾ ಬಂದಿದೆ.
2026ರ ‘ಕನ್ನಡ ಚಿರಂಜೀವಿ’ಪ್ರಶಸ್ತಿಯನ್ನು ಕನ್ನಡ ಹೋರಾಟಗಾರ, ಸಾಹಿತ್ಯ ಪ್ರೇಮಿ ಬಿ.ಸಿ.ಜಯರಾಂ ಅವರಿಗೆ ನೀಡಲಾಗುತ್ತಿದೆ. ಕನ್ನಡಪರ ಹೋರಾಟಗಳಲ್ಲಿ ೬ ದಶಕಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಜಯರಾಂ ಒಬ್ಬರು. ಎಲ್ಲ ರೀತಿಯ ಕನ್ನಡಪರ ಹೋರಾಟದಲ್ಲೂ ಪಾಲ್ಗೊಂಡಿರುವ ೮೦ರ ಹರೆಯದ ಇವರು ೧೯೬೨ರಲ್ಲಿ ನಡೆದ ಎಂ.ಎಸ್. ಸುಬ್ಬಲಕ್ಷ್ಮಿ ಸಂಗೀತ ಕಚೇರಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂದಿನಿಂದ ನಿರಂತರವಾಗಿ ಕನ್ನಡ ಹೋರಾಟದಲ್ಲಿ ಸಕ್ರಿಯವಾಗಿರುವ ಇವರು ಗೋಕಾಕ್ ಚಳವಳಿಯ ನಂತರ ಚಿದಾನಂದಮೂರ್ತಿಯವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗ, ಕನ್ನಡ ಶಕ್ತಿ ಕ್ರೇಂದ್ರಗಳ ಸಕ್ರಿಯ ಸದಸ್ಯರಾಗಿದ್ದರು. ಇಂದಿಗೂ ಎಲ್ಲೇ ಕನ್ನಡ ಕಾರ್ಯಕ್ರಮ ಇರಲಿ ಅಲ್ಲಿರುತ್ತಾರೆ. ಕನ್ನಡ ಪುಸ್ತಕದ ದೊಡ್ಡ ಭಂಡಾರವೇ ಇವರಲ್ಲಿದೆ.
16.12.2026ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷನ್ಮಂದಿರ’ದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಉತ್ತಮ ಶಾಲೆ ಬಹುಮಾನ ಮತ್ತು ಕನ್ನಡ ಚಿಂತನೆ ಸಮಾರಂಭ ಇದೆ. ಆ ಸಮಾರಂಭದಲ್ಲೇ ಈ ಪ್ರಶಸ್ತಿಗಳನ್ನು ಮಾಡಲಾಗುವುದು.




